ಎಸ್‌ಐಆರ್ ವಿರೋಧಿ ಹೋರಾಟದಲ್ಲಿ ಬಾಂಗ್ಲಾ ಮಾದರಿ ಹಾಗೂ ರೆಜಿಮ್ ಚೇಂಜ್ ಹೇಳಿಕೆಗಳಿಂದ ಸಿಜೆಪಿ ಬ್ಯಾಕ್‌ಫುಟ್‌ಗೆ ಜಾರಿದೆ. ಈ ಅವಕಾಶವನ್ನು ಬಳಸಿಕೊಂಡು ನವೆಂಬರ್ 1 ರಿಂದ ರಾಹುಲ್ ಗಾಂಧಿ ದೇಶವ್ಯಾಪಿ ಹೋರಾಟಕ್ಕೆ ಮುಂದಾಗಿದ್ದಾರೆ. ಇಲ್ಲಿ ಬಿಜೆಪಿ ಎದುರಿಗಿರುವ ಸವಾಲುಗಳೇನು? ಈ ಕುರಿತು ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್.

ನೀಟ್ ಹಗರಣದ ಹೋರಾಟದಲ್ಲಿ ಕಣ್ಣಮುಂದೆ ಸಮಸ್ಯೆ ಹಾಗೂ ಅದಕ್ಕೆ ಪೂರಕವಾದ ಬಲವಾದ ದಾಖಲೆಗಳಿದ್ದವು. ಹಾಗಾಗಿಯೇ ಆ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡು ಆಡಳಿತಾರೂಢ ಬಿಜೆಪಿಯನ್ನು ತೀವ್ರ ಇರಸಮುರುಸಿಗೆ ಈಡುಮಾಡಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ವಿರೋಧಿ ಹೋರಾಟದಲ್ಲಿ ಯಾವುದೇ ನಿಖರ ದಾಖಲೆಗಳಿಲ್ಲದೇ ಕೇವಲ ಆರೋಪಗಳಷ್ಟೇ ಕೇಳಿಬರುತ್ತಿವೆ. ಇದರ ನಡುವೆ, ಹೋರಾಟಗಾರರ 'ಬಾಂಗ್ಲಾ ಮಾದರಿ' ಹಾಗೂ 'ರೆಜಿಮ್ ಚೇಂಜ್' (ಸರ್ಕಾರ ಬದಲಾವಣೆ) ಹೇಳಿಕೆಗಳು ಇಡೀ ಚಳವಳಿಯ ದಿಕ್ಕನ್ನೇ ಬದಲಿಸಿದ್ದು, ಇಷ್ಟು ದಿನ ಬ್ಯಾಕ್‌ಫುಟ್‌ನಲ್ಲಿದ್ದ ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ.

ಆಧಾರರಹಿತ ಆರೋಪ ಮತ್ತು ಎಡವಿದ ಸಿಜೆಪಿ!

ಎಸ್‌ಐಆರ್ ಹೋರಾಟದ ಮುಂಚೂಣಿಯಲ್ಲಿದ್ದ ನೇಹಾ ಬೋರಾ ಹಾಗೂ ಪ್ರಶಾಂತ್ ಭೂಷಣ್ ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಸೃಷ್ಟಿಸಿವೆ. 'ಭಾರತದಲ್ಲೂ ಬಾಂಗ್ಲಾದೇಶ ಮಾದರಿಯ ರಕ್ತಪಾತದ ಹೋರಾಟ ನಡೆಯಬೇಕು' ಹಾಗೂ 'ಸರ್ಕಾರವನ್ನು ಕಿತ್ತೊಗೆಯಬೇಕು' ಎಂಬ ರೀತಿಯ ಹೇಳಿಕೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ನೀಟ್ ವಿಷಯದಲ್ಲಿ ಬಿಜೆಪಿಯನ್ನು ಪ್ರತಿಪಕ್ಷಗಳು ಹಾಗೂ ಸಂಘಟನೆಗಳು ಕಟುವಾಗಿ ಪ್ರಶ್ನಿಸಿದ್ದವು. ಆದರೆ, ಎಸ್‌ಐಆರ್ ಹೋರಾಟದಲ್ಲಿ ಕೇವಲ ಆರೋಪಗಳಷ್ಟೇ ಇರುವುದು ಮತ್ತು ಹಿಂಸಾತ್ಮಕ ಹೋರಾಟದ ಸುಳಿವು ನೀಡಿರುವುದು ಸಿಜೆಪಿ ಸಂಘಟನೆಯನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಇದರಿಂದಾಗಿ ಆರಂಭದಲ್ಲಿ ಬೆಂಬಲ ನೀಡಿದ್ದ ಸಾಮಾನ್ಯ ಜನತೆ ಹಾಗೂ ಪ್ರಬುದ್ಧ ನಾಗರಿಕರು ಈಗ ಹೋರಾಟದಿಂದ ಹಿಂದೆ ಸರಿಯುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.

ಜಗತ್ತಿನ ದೊಡ್ಡ ಪ್ರಜಾಪ್ರಭುತ್ವಕ್ಕೆ ಬಾಂಗ್ಲಾ ಮಾದರಿ ಅಪ್ರಸ್ತುತ!

ಭಾರತವು ಬಲವಾದ ಸಂವಿಧಾನ ಹಾಗೂ ಸಮರ್ಪಣಾ ಮನೋಭಾವದ ನಾಯಕತ್ವವನ್ನು ಹೊಂದಿರುವ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಜನಾದೇಶದ ಮೂಲಕ ಆಯ್ಕೆಯಾದ ಸರ್ಕಾರವನ್ನು ಬದಲಾಯಿಸಲು ಚುನಾವಣೆಗಳು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ 'ಅವಿಶ್ವಾಸ ನಿರ್ಣಯ' ದಂತಹ ಹಲವಾರು ಸಾಂವಿಧಾನಿಕ ಮಾರ್ಗಗಳಿವೆ. ಹೀಗಿರುವಾಗ, ಬಾಂಗ್ಲಾದೇಶದಲ್ಲಿ ನಡೆದಂತಹ ರಕ್ತಪಾತ ಹಾಗೂ ರಾಜಕೀಯ ಅಸ್ಥಿರತೆಯನ್ನು ಭಾರತದಲ್ಲೂ ಮರುಸೃಷ್ಟಿಸಲು ಯತ್ನಿಸಲಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಪ್ರಶಾಂತ ಭೂಷಣ ಹೇಳಿಕೆಯ ಉದ್ದೇಶ!

ವಿದೇಶಿ ಧನಸಹಾಯ (ಫಂಡಿಂಗ್) ಹಾಗೂ ದೇಶವಿರೋಧಿ ಹೇಳಿಕೆಗಳ ಆರೋಪಗಳು ಕೇಳಿಬರುತ್ತಿದ್ದಂತೆಯೇ, ಪ್ರಶಾಂತ್ ಭೂಷಣ್ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಲು ಮುಂದಾದರಾದರೂ, ಅವರ ಮೂಲ ಉದ್ದೇಶ ಈಗಾಗಲೇ ಸ್ಪಷ್ಟವಾಗಿತ್ತು. ಬಾಂಗ್ಲಾ ವಿದ್ಯಾರ್ಥಿಗಳ ಹಿಂಸಾತ್ಮಕ ಹೋರಾಟಕ್ಕೂ, ಭಾರತದ ಪ್ರಜಾಸತ್ತಾತ್ಮಕ ಹೋರಾಟಕ್ಕೂ ಅಂತರಂಗದಲ್ಲೇ ಭಾರೀ ವ್ಯತ್ಯಾಸವಿದೆ. ಈ ಎಲ್ಲ ಬೆಳವಣಿಗೆಗಳು ಬಿಜೆಪಿಗೆ ಬಲವಾದ ರಾಜಕೀಯ ಅಸ್ತ್ರ ಒದಗಿಸಿಕೊಟ್ಟಿದ್ದು, ಸಿಜೆಪಿ ತಾನೇ ಮುಂಚೂಣಿಯಲ್ಲಿದ್ದ ಫ್ರಂಟ್ ಫುಟ್‌ನಿಂದ ಬ್ಯಾಕ್‌ಫುಟ್‌ಗೆ ಜಾರುವಂತೆ ಮಾಡಿದೆ.

ನ.01ರಂದು ರಾಹುಲ್ ಹೋರಾಟ!

ಈ ಹೋರಾಟದ ಸಂಪೂರ್ಣ ಕ್ರೆಡಿಟ್ ಹಾಗೂ ನಾಯಕತ್ವವನ್ನು ಸಿಜೆಪಿ ಪಡೆದುಕೊಂಡು, ಮುಖ್ಯವಾಹಿನಿಯ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಬಹುದು ಎಂಬ ಭೀತಿಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ದಿಢೀರ್ ಸುವರ್ಣಾವಕಾಶ ಲಭಿಸಿದಂತಾಗಿದೆ. ಸಿಜೆಪಿ ಹಿನ್ನಡೆ ಅನುಭವಿಸಿ ಖಾಲಿ ಬಿದ್ದಿರುವ ಈ ರಾಜಕೀಯ ಹಾಗೂ ಚಳವಳಿಯ ಜಾಗವನ್ನು ತುಂಬಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ನವೆಂಬರ್ 1 ರಂದು ರಾಹುಲ್ ಗಾಂಧಿ ಈ ಹೋರಾಟವನ್ನು ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಉತ್ತರ ಭಾರತದಿಂದ ಹಿಡಿದು ಕೋಲ್ಕತಾ ಹಾಗೂ ಬೆಂಗಳೂರಿನವರೆಗೆ ಈ ಬೃಹತ್ ಹೋರಾಟವನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಸಿಜೆಪಿಯ ಎಡವಟ್ಟಿನಿಂದ ಸೃಷ್ಟಿಯಾದ ಖಾಲಿತನವನ್ನು ಕಾಂಗ್ರೆಸ್ ಹೇಗೆ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬಿಜೆಪಿಗೆ ಎದುರಾಗಲಿದೆ ಹೊಸ ಸವಾಲು!

ಇತ್ತ, ಬಾಂಗ್ಲಾ ಮಾದರಿ ಹೇಳಿಕೆ ಹಾಗೂ ರೆಜಿಮ್ ಚೇಂಜ್ ಅಸ್ತ್ರಗಳನ್ನು ಬಳಸಿಕೊಂಡು ಸಿಜೆಪಿಯನ್ನು ರಕ್ಷಣಾತ್ಮಕ ಸ್ಥಿತಿಗೆ ತಳ್ಳಿದ ಬಿಜೆಪಿ, ತಾನು ಆಕ್ರಮಣಕಾರಿ ಫ್ರಂಟ್ ಫುಟ್‌ಗೆ ಬಂದಿದೆ. ಆದರೆ, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ನವೆಂಬರ್ 1 ರಿಂದ ಪ್ರಾರಂಭಿಸಲಿರುವ ಈ ದೇಶವ್ಯಾಪಿ ಹೋರಾಟಕ್ಕೆ ಬಿಜೆಪಿ ಯಾವ ರೀತಿ ಪ್ರತಿತಂತ್ರ (ಟಕ್ಕರ್) ಹೂಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಪ್ರಜಾಸತ್ತಾತ್ಮಕ ಹೋರಾಟದ ಹೊಸ ರೂಪ ಪಡೆದುಕೊಳ್ಳುತ್ತಿರುವ ಈ ವಿದ್ಯಮಾನದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದು ಮುಂಬರುವ ದಿನಗಳಲ್ಲಿ ತೀರ್ಮಾನವಾಗಲಿದೆ.