Asianet Suvarna News Asianet Suvarna News

ಈಗ ಸೋತರೂ, ಮುಂದೆ ಗೆಲುವು, ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್‌ ಅತೀ ಅಗತ್ಯ: ಬಿಜೆಪಿಗನ ಅಚ್ಚರಿಯ ಹೇಳಿಕೆ

* ಕಾಂಗ್ರೆಸ್‌ ಬಲಿಷ್ಠ ಆಗಬೇಕು: ಗಡ್ಕರಿ

* ಸೋಲಿನಿಂದ ಹತಾಶರಾಗಿ ಕಾಂಗ್ರೆಸ್ಸಿಗರು ಪಕ್ಷ ತೊರೆಯಬಾರದು

* ಸತತ ಸೋಲಿಂದ ಹೈರಾಣಾದ ವಿಪಕ್ಷಕ್ಕೆ ಕೇಂದ್ರ ಸಚಿವ ‘ಸಾಂತ್ವನ’

* ಬಿಜೆಪಿಯ ‘ಕಾಂಗ್ರೆಸ್‌ ಮುಕ್ತ ಭಾರತ’ ಗುರಿಗೆ ತದ್ವಿರುದ್ಧ ಹೇಳಿಕೆ

Sincerely hope that Congress becomes stronger says Union minister Nitin Gadkari pod
Author
Bangalore, First Published Mar 29, 2022, 7:28 AM IST

ಮುಂಬೈ(ಮಾ.29): ಸತತ ಚುನಾವಣಾ ಸೋಲುಗಳಿಂದ ಹೈರಾಣಾಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ಹಾಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ. ‘ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್‌ ಪಕ್ಷದ ಅವಶ್ಯವಿದೆ. ಸತತ ಸೋಲಿನಿಂದ ಜರ್ಜರಿತವಾಗಿರುವ ಕಾಂಗ್ರೆಸ್‌ ಬಲಿಷ್ಠವಾಗಬೇಕು ಹಾಗೂ ಅದರ ನಾಯಕರಾರೂ ಪಕ್ಷ ತೊರೆಯಬಾರದು ಎಂಬುದು ನನ್ನ ಪ್ರಾಮಾಣಿಕ ಬಯಕೆ’ ಎಂದು ಬಹಿರಂಗ ವೇದಿಕೆಯೊಂದರಲ್ಲಿ ಗಡ್ಕರಿ ಹೇಳಿರುವುದು ಸಂಚಲನಕ್ಕೆ ಕಾರಣವಾಗಿದೆ.

‘ಕಾಂಗ್ರೆಸ್‌ ಮುಕ್ತ ಭಾರತ’ಕ್ಕೆ ಬಿಜೆಪಿ ಪಣ ತೊಟ್ಟಿರುವಾಗಲೇ, ಅದೇ ಪಕ್ಷದ ನಾಯಕರೊಬ್ಬರು ಕಾಂಗ್ರೆಸ್‌ ಬಲಿಷ್ಠವಾಗಬೇಕು ಎಂದು ವಾದ ಮಂಡಿಸಿರುವುದು ಕುತೂಹಲ ಕೆರಳಿಸಿದೆ.

ಈ ಹೇಳಿಕೆಯನ್ನು ಕಾಂಗ್ರೆಸ್‌ ಸ್ವಾಗತಿಸಿದೆ. ‘ವಿಪಕ್ಷಗಳನ್ನು ನಾಶಗೊಳಿಸುವ ಬಿಜೆಪಿ ಪ್ರಯತ್ನಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡಿ’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ಸಚಿನ್‌ ಸಾವಂತ್‌ ಅವರು ಗಡ್ಕರಿ ಅವರನ್ನು ಆಗ್ರಹಿಸಿದ್ದಾರೆ.

ಗಡ್ಕರಿ ಹೇಳಿದ್ದೇನು?:

ಲೋಕಮತ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡಿದ್ದ ರಸ್ತೆ ಸಾರಿಗೆ ಸಚಿವ ಗಡ್ಕರಿ, ‘ಪ್ರಜಾಪ್ರಭುತ್ವ ಎಂಬುದು ಆಡಳಿತ ಹಾಗೂ ಪ್ರತಿಪಕ್ಷ ಎಂಬ ಎರಡು ಗಾಲಿಗಳ ಮೇಲೆ ನಡೆಯುತ್ತದೆ. ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ಪ್ರತಿಪಕ್ಷ ಇರಬೇಕು. ಹೀಗಾಗಿ ಕಾಂಗ್ರೆಸ್‌ ಪಕ್ಷ ಬಲಿಷ್ಠವಾಗಬೇಕು ಎಂಬುದು ನನ್ನ ಪ್ರಾಮಾಣಿಕ ಬಯಕೆ. ಕಾಂಗ್ರೆಸ್‌ ದುರ್ಬಲವಾದರೆ, ಅದರ ಸ್ಥಾನವನ್ನು ಪ್ರಾದೇಶಿಕ ಪಕ್ಷಗಳು ಆಕ್ರಮಿಸುತ್ತವೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಹೀಗಾಗಿ ಪ್ರತಿಪಕ್ಷ ಬಲಿಷ್ಠವಾಗಿರಬೇಕು’ ಎಂದು ಪ್ರತಿಪಾದಿಸಿದರು.

‘ಅಟಲ್‌ ಬಿಹಾರಿ ವಾಜಪೇಯಿ ಅವರು ಲೋಕಸಭೆ ಚುನಾವಣೆಯಲ್ಲಿ ಸೋತಾಗಲೂ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಅಟಲ್‌ಜೀ ಅವರಿಗೆ ಗೌರವ ನೀಡುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷದ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ಕಾಂಗ್ರೆಸ್‌ ನಾಯಕರು ಸೋಲಿನಿಂದ ಎದೆಗುಂದಬಾರದು. ಪಕ್ಷದಲ್ಲೇ ಉಳಿಯಬೇಕು. ಕಾಂಗ್ರೆಸ್ಸಿನ ಸಿದ್ಧಾಂತವನ್ನು ಅನುಸರಿಸುವವರು ಅದೇ ಪಕ್ಷದಲ್ಲೇ ಇರಬೇಕು. ತಮ್ಮ ಬದ್ಧತೆಗೆ ಅಂಟಿಕೊಳ್ಳಬೇಕು. ಸೋಲಿನ ಬಗ್ಗೆ ಚಿಂತಿಸದೆ ಪಕ್ಷದ ಕೆಲಸ ಮುಂದುವರಿಸಬೇಕು. ಈಗ ಸೋತಿದ್ದರೂ, ಮುಂದೊಂದು ದಿನ ಜಯ ಕಾದಿದೆ’ ಎಂದು ಹೇಳಿದರು.

‘ಸಂಸತ್ತಿನಲ್ಲಿ ಈ ಹಿಂದೆ ಬಿಜೆಪಿ ಕೇವಲ ಸ್ಥಾನಗಳನ್ನು ಮಾತ್ರ ಹೊಂದಿತ್ತು. ಪಕ್ಷದ ಕಾರ್ಯಕರ್ತರ ಫಲವಾಗಿ ಕಾಲ ಬದಲಾಗಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದರು. ಹತಾಶೆಯ ಕಾಲಘಟ್ಟಲದಲ್ಲಿ ಯಾರೇ ಆಗಲಿ ತಮ್ಮ ಸಿದ್ಧಾಂತವನ್ನು ಬಿಟ್ಟುಕೊಡಬಾರದು’ ಎಂದು ಗಡ್ಕರಿ ತಿಳಿಸಿದರು.

Follow Us:
Download App:
  • android
  • ios