ಸಿಕ್ಕಿಂಗೆ ಹನಿಮೂನ್ ತೆರಳಿದ ನವ ಜೋಡಿಯ ದುರಂತ ಕತೆ. ಮದುವೆಯಾದ ಕೆಲವೇ ದಿನಗಳಲ್ಲಿ ಸಿಕ್ಕಿಂ ತಲುಪಿದ ಈ ಜೋಡಿ ನಾಪತ್ತೆಯಾಗಿ 11 ದಿನಗಳು ಉರುಳಿದೆ. ಪೋಷಕರು, ಕುಟುಂಬಸ್ಥರು ಸಿಕ್ಕಿಂಗೆ ತೆರಳಿ ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದಾರೆ.ಆದರೆ ಇದುವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಏನಿದು ಘಟನೆ?
ಸಿಕ್ಕಿಂ(ಜೂ.09) ಮದುವೆಯಾದ ಬಳಿಕ ಹನಿಮೂನ್ ತೆರಳುವುದು ಸಾಮಾನ್ಯ. ಹಲವು ಪ್ರವಾಸಿ ತಾಣ, ಹನಿಮೂನ್ ತಾಣಗಳಿಗೆ ಭೇಟಿ ನೀಡಿ ಒಂದಷ್ಟು ದಿನ ಹಾಯಾಗಿ ಕಳೆಯಲು ಎಲ್ಲರೂ ಬಯಸುತ್ತಾರೆ. ಆದರೆ ಇತ್ತೀಚೆಗೆ ಹನಿಮೂನ್ ಎಂದರೆ ಬೆಚ್ಚಿ ಬೀಳುವಂತಾಗಿದೆ. ಮೆಘಾಲದಲ್ಲಿ ನಡೆದ ರಾಜ ರಘುವಂಶಿ ಹತ್ಯೆ ಪ್ರಕರಣ ಈ ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಹನಿಮೂನ್ ದುರಂತ ಪ್ರಕರಣ ವರದಿಯಾಗಿದೆ. ಉತ್ತರ ಪ್ರದೇಶದಿಂದ ಸಿಕ್ಕಿಂಗೆ ಹನಿಮೂನ್‌ಗೆ ತೆರಳಿದ ನವ ಜೋಡಿ ನಾಪತ್ತೆಯಾಗಿ 11 ದಿನಗಳು ಉರುಳಿದೆ. ಪೋಷಕರು ತಮ್ಮ ಮಕ್ಕಳು ಜೀವಂತವಾಗಿ ಪತ್ತೆಯಾಗುತ್ತಾರೆ ಎಂದು ಹುಡುಕಾಟ ನಡೆಸುತ್ತಲೇ ಇದ್ದಾರೆ. ಸಿಕ್ಕಿಂ ಸರ್ಕಾರ, ಯುಪಿ ಸರ್ಕಾರದ ಬಳಿ ನವ ಜೋಡಿಗಳ ಹುಡುಕಿ ಕೊಡುವಂತೆ ಮನವಿ ಮಾಡಿದೆ. ಆದರೆ ವ್ಯತಿರಿಕ್ತ ಹವಾಮಾನದಿಂದ ಕಾರ್ಯಾಚರಣೆಗೂ ತೊಡಕಾಗಿದೆ.
ಏನಿದು ನಾಪತ್ತೆ ಪ್ರಕರಣ?
ಕುಶಲೇಂದ್ರ ಪ್ರತಾಪ್ ಸಿಂಗ್ ಹಾಗೂ ಅಂಕಿತಾ ಸಿಂಗ್ ಮೇ 5 ರಂದು ಮದುವೆಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ ಈ ಜೋಡಿ ಮೇ.24ಕ್ಕೆ ಹನಿಮೂನ್‌ಗಾಗಿ ಸಿಕ್ಕಿಂ ತಲುಪಿದೆ. ಸಿಕ್ಕಿಂನ ಒಂದೊಂದೆ ಪ್ರವಾಸಿ ತಾಣಗಳನ್ನು ಆನಂದಿಸುತ್ತಾ ಕಾಲ ಕಳೆದಿದೆ. ಆದರೆ ಮೇ ಅಂತಿಮವಾರದಲ್ಲಿ ಸಿಕ್ಕಿನಂಲ್ಲಿ ಭಾರಿ ಮಳೆ ವಕ್ಕರಿಸಿದೆ. ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರ ನಡುವೆ ಮೇ.29 ರಂದು ಈ ಜೋಡಿ ಸ್ಥಳೀಯ ಸಾರಿಗೆ ವಾಹನ ಮೂಲಕ ಪ್ರಯಾಣ ಮಾಡಿದ್ದಾರೆ. ಈ ವಾಹನದಲ್ಲೇ ಇತರ ಪ್ರಯಾಣಿಕರು ಇದ್ದರು. ಆದರೆ ಬಾರಿ ಮಳೆಯಿಂದ ವಾಹನ ನಿಯಂತ್ರಣ ಕಳೆದುಕೊಂಡು ಸಿಕ್ಕಿಂನ ತೀಸ್ತಾ ನದಿಗೆ ಉರುಳಿ ಬಿದ್ದಿದೆ. ಬರೋಬ್ಬರಿ 1,000 ಅಡಿ ಎತ್ತರದಿಂದ ನದಿಗೆ ಉರುಳಿ ಬಿದ್ದಿದೆ.
ಡ್ರೈವರ್ ಸಾವು, ಮೂವರ ರಕ್ಷಣೆ, 8 ಮಂದಿ ನಾಪತ್ತೆ
ಭೂಕುಸಿತ, ಪ್ರವಾಹ ನೀರಿನಿಂದ ವಾಹನ ನಿಯಂತ್ರಣ ಕಳೆದುಕೊಂಡು ನದಿಗೆ ಉರುಳಿ ಬಿದ್ದಿದೆ. ಈ ವಾಹನದಲ್ಲಿ 11 ಪ್ರವಾಸಿಗರಿದ್ದರು. ಚುಂಗ್‌ತಾಂಗ್‌ನಿಂದ ಗ್ಯಾಂಗ್ಟಾಕ್‌ಗೆ ಮರಳುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ. ಈ ಘಟನೆಯಲ್ಲಿ ವಾಹನ ಸಂಪೂರ್ಣ ನಜ್ಜು ಗುಜ್ಜಾಗಿದೆ. ಈ ಪೈಕಿ ಡ್ರೈವರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಮೂವರನ್ನು ಪೊಲೀಸರು ಹಾಗೂ ರಕ್ಷಣಾ ತಂಡ ಕಾರ್ಯಾಚರಣೆಯಲ್ಲಿ ರಕ್ಷಿಸಿದೆ. ಆದರೆ ಇನ್ನುಳಿದ 11 ಮಂದಿ ನಾಪತ್ತೆಯಾಗಿದ್ದಾರೆ. ಈ ನಾಪತ್ತೆಯಾದವರ ಪೈಕಿ ಉತ್ತರ ಪ್ರದೇಶದಿಂದ ಹನಿಮೂನ್‌ಗೆ ತೆರಳಿದ ಕುಶಲೇಂದ್ರ ಪ್ರತಾಪ್ ಸಿಂಗ್ ಹಾಗೂ ಅಂಕಿತಾ ಸಿಂಗ್ ಕೂಡ ಸೇರಿದ್ದಾರೆ.
ಮಕ್ಕಳ ಹುಡುಕಿ ಕೊಡುವಂತೆ ಕಣ್ಣೀರಿಟ್ಟ ಕುಶಲೇಂದ್ರ ಸಿಂಗ್ ತಂದೆ
ಅಪಘಾತದ ಮಾಹಿತಿ ಸಿಗುತ್ತಿದ್ದಂತೆ ಕುಶಲೇಂದ್ರ ಹಾಗೂ ಅಂಕಿತಾ ಸಿಂಗ್ ಪೋಷಕರು ಸಿಕ್ಕಿಂಗೆ ಪ್ರಯಾಣ ಮಾಡಿದ್ದಾರೆ. ಇದೀಗ ಘಟನೆ ನಡೆದ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ನದಿ ಪಾತ್ರದಲ್ಲಿ ಹುಡುಕಾಟ ನಡೆಸಿದ್ದಾರೆ. ಮುಳುಗು ತಜ್ಞರು ಸೇರಿದಂತೆ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ. ಇದೀಗ ನಾಪತ್ತೆಯಾಗಿ 11 ದಿನಗಳು ಉರುಳಿದೆ. ಆದರೆ ನವ ಜೋಡಿಗಳು ಸೇರಿದಂತೆ 11 ಮಂದಿಯ ಸುಳಿವಿಲ್ಲ. ಮಕ್ಕಳಿಲ್ಲದ ತಾನು ಯುಪಿಗೆ ಮರಳುವುದಿಲ್ಲ. ನನ್ನ ಮಕ್ಕಳನ್ನು ಹುಡುಕಿಕೊಡಿ ಎಂದು ಸಿಕ್ಕಿಂ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರವನ್ನು ಮನವಿ ಮಾಡಿದೆ.
ಭಾರಿ ಮಳೆ ಹಾಗೂ ಪ್ರವಾಹದಿಂದ ಕಾರ್ಯಾಚರಣೆಗೆ ಅಡ್ಡಿ
ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ನದಿಗೆ ಉರುಳಿ ಬಿದ್ದಿರುವ ವಾಹನವನ್ನು ಇನ್ನು ಮೇಲಕ್ಕೆತ್ತಲು ಸಾಧ್ಯವಾಗಿಲ್ಲ. ಭಾರಿ ನೀರು ಹಾಗೂ ಮಣ್ಣು ತುಂಬಿಕೊಂಡಿರುವ ಕಾರಣ ವಾಹನ ನದಿ ದಡದಲ್ಲೇ ಇದೆ. ಇನ್ನು ನಾಪತ್ತೆಯಾದವರ ಪತ್ತೆಯೂ ಸಾಧ್ಯವಾಗಿಲ್ಲ.
