ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭೂಮಿಗೆ ಬರುವ ದಿನ ಸನ್ನಿಹಿತವಾಗಿದ್ದು, ಜು.14ಕ್ಕೆ ಮುಹೂರ್ತ ನಿಗದಿಯಾಗಿದೆ.
ನವದೆಹಲಿ: ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭೂಮಿಗೆ ಬರುವ ದಿನ ಸನ್ನಿಹಿತವಾಗಿದ್ದು, ಜು.14ಕ್ಕೆ ಮುಹೂರ್ತ ನಿಗದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಜು.14ರ ಸಂಜೆ 4:35ಕ್ಕೆ ಐಎಸ್‌ಎಸ್‌ನಿಂದ ಹೊರಟು, ಜು.15ರಂದು ಮಧ್ಯಾಹ್ನ 3 ಗಂಟೆಗೆ ಕ್ಯಾಲಿಫೋರ್ನಿಯಾದ ಕಡಲತೀರಕ್ಕೆ ಬಂದಿಳಿಯಲಿದ್ದಾರೆ.
ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳಾದ ಪೆಗ್ಗಿ ವಿಟ್ಸನ್, ಸ್ಲಾವೊಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಟಿಬೋರ್ ಕಾಪು ಜೂ.26ರಂದು ಆಕ್ಸಿಯೋಂ-4 ಕಾರ್ಯಾಚರಣೆಯ ಭಾಗವಾಗಿ ಐಎಸ್‌ಎಸ್‌ಗೆ ತೆರಳಿದ್ದರು.
7 ದಿನ ಪುನಶ್ಚೈತನ್ಯ ಕಾರ್ಯಕ್ರಮ
ಗಗನಯಾತ್ರಿಗಳು ಭೂಮಿಗೆ ಮರಳಿದ ಬಳಿಕ ಇಲ್ಲಿನ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಬೇಕಾಗುತ್ತದೆ. ಹಾಗಾಗಿ 7 ದಿನಗಳ ಕಾಲ ತಜ್ಞ ವೈದ್ಯರ ಮೂಲಕ ಪುನಶ್ಚೈತನ್ಯ ಕಾರ್ಯಕ್ರಮ ನಡೆಸಿ, ಭೂಮಿಯ ವಾತಾವರಣಕ್ಕೆ ಅವರ ದೇಹಸ್ಥಿತಿ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ತಾಯಿ ಮಾಡಿದ ಅಡುಗೆ ಸವಿಯಲು ಕಾತರ
ಲಖನೌ: ಐದಾರು ವರ್ಷಗಳಿಂದ ವಿದೇಶದಲ್ಲಿದ್ದ ಕಾರಣ ಮನೆಯೂಟ ಸವಿಯಲು ಸಾಧ್ಯವಾಗಿಲ್ಲ. ಬಾಹ್ಯಾಕಾಶ ಕೇಂದ್ರದಿಂದ ವಾಪಸಾದ ಕೂಡಲೇ ತಾಯಿ ಮಾಡಿದ ಅಡುಗೆ ಸವಿಯಲು ಕಾತರನಾಗಿರುವೆ ಎಂದು ಜು.14ರಂದು ಅಂತರಿಕ್ಷದಿಂದ ವಾಪಸಾಗುತ್ತಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ತಿಳಿಸಿದ್ದಾರೆ.
ನಾಸಾದ ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಜೂ.25ರಂದು ತೆರಳಿರುವ ಶುಭಾಂಶು ಶುಕ್ಲಾ ಅವರು ಕುಟುಂಬ ಸದಸ್ಯರಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದು, ಈ ವೇಳೆ ತಾವು ಮನೆಯೂಟ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಆತನ ತಾಯಿ ಆಶಾ ಶುಕ್ಲಾ ಮಾತನಾಡಿ, ಬಾಹ್ಯಾಕಾಶದ ಚಿತ್ರಣ ನೋಡಿ ಅಚ್ಚರಿಯಾಯಿತು. ಬಾಹ್ಯಾಕಾಶದಿಂದ ವಾಪಸಾದ ಬಳಿಕ ಆರು ವರ್ಷಗಳಿಂದ ಮಿಸ್ ಮಾಡಿಕೊಳ್ಳುತ್ತಿರುವ ತನ್ನ ಇಷ್ಟದ ಮನೆಯೂಟ, ತಿಂಡಿ-ತಿನಿಸು ಸವಿಯಬೇಕೆಂದು ಹೇಳಿದ್ದಾನೆ. ಆತನಿಗೆ ಏನೇನು ಇಷ್ಟವೋ ಅದನ್ನೆಲ್ಲ ಮಾಡಿ ಬಡಿಸಲು ನಾನು ಸಿದ್ಧ ಎಂದು ತಾಯಿ ಆಶಾ ಶುಕ್ಲಾ ತಿಳಿಸಿದ್ದಾರೆ.
