ಕೋವಿಡ್ ನಿಯಮ ಉಲ್ಲಂಘನೆ: 9.46 ಕೋಟಿ ದಂಡ ವಸೂಲಿ
ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ಕ್ರಮ| ಕೋವಿಡ್ ನಿಯಮಗಳನ್ನು ಪಾಲಿಸದ ರೆಸ್ಟೋರೆಂಟ್, ಹೋಟೆಲ್, ಸೂಪರ್‌ಮಾರ್ಕೆಟ್ ಇತ್ಯಾದಿ ಉದ್ದಿಮೆ ಮುಚ್ಚಿಸಲು ಪಾಲಿಕೆ ಆಯುಕ್ತರ ಕ್ರಮ| ಜಿಮ್ ಸೇರಿದಂತೆ ಆರು ಉದ್ದಿಮೆಗಳನ್ನು ಸಹ ಬಂದ್|
ಬೆಂಗಳೂರು(ಏ.09): ಕಳೆದ ಒಂದು ವರ್ಷದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಗಳಿಂದ ಒಟ್ಟು 9.58 ಕೋಟಿ ರು.ಗಳಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.
2020ರ ಮೇ ತಿಂಗಳಿಂದ 2021ರ ಫೆ.28ರವರೆಗೆ ಮಾಸ್ಕ್ ಧರಿಸದ 3,39,230 ಪ್ರಕರಣಗಳಿಂದ 7.98 ಕೋಟಿ ರು. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 24,985 ಪ್ರಕರಣಗಳಲ್ಲಿ 55.73 ಲಕ್ಷ ರು. ಸೇರಿದಂತೆ ಒಟ್ಟು 8.54 ಕೋಟಿ ರು. ದಂಡ ವಸೂಲಿ ಮಾಡಿದ್ದು, 149 ಉದ್ದಿಮೆಗಳನ್ನು ಬಂದ್ ಮಾಡಿಸಲಾಗಿತ್ತು.
2021ರ ಮಾ.1ರಿಂದ ಏ.8ರ ವರೆಗೆ ಮಾಸ್ಕ್ ಧರಿಸದ 41,251 ಪ್ರಕರಣಗಳಿಂದ 1.03 ಕೋಟಿ ರು. ಹಾಗೂ ಸಾಮಾಜಿಕ ಅಂತರ ಪಾಲಿಸದ 177 ಪ್ರಕರಣಗಳಿಂದ 44,250 ರು.ದಂಡ ಸೇರಿದಂತೆ ಹೀಗೆ ಒಟ್ಟು 1,03,57,001 ದಂಡ ವಸೂಲಿ ಮಾಡಲಾಗಿದೆ. ಒಟ್ಟಾರೆಯಾಗಿ ಕಳೆದ ಮೇ ತಿಂಗಳಿನಿಂದ ಏ.8ರ ವರೆಗೆ ಒಟ್ಟು 9.58 ಕೋಟಿ ರು. ದಂಡ ವಸೂಲಿ ಮಾಡಲಾಗಿದೆ ಎಂದು ಪಾಲಿಕೆ ವಲಯ ಆಯುಕ್ತ (ಆಡಳಿತ) ಡಿ.ರಂದೀಪ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಕೊರೋನಾ; ರಾಜ್ಯದ 8 ಕಡೆ ಏ. 10ರಿಂದ ನೈಟ್ ಕರ್ಫ್ಯೂ, ಅಧಿಕೃತ ಆದೇಶ
ನಿಯಮ ಪಾಲಿಸದ ಮಳಿಗೆಗೆ ಬೀಗ
ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ವಲಯಗಳಲ್ಲಿಯೂ ಕೋವಿಡ್ ನಿಯಮಗಳನ್ನು ಪಾಲಿಸದ ರೆಸ್ಟೋರೆಂಟ್, ಹೋಟೆಲ್, ಸೂಪರ್‌ಮಾರ್ಕೆಟ್ ಇತ್ಯಾದಿ ಉದ್ದಿಮೆಗಳನ್ನು ಮುಚ್ಚಿಸಲು ಪಾಲಿಕೆ ಆಯುಕ್ತರು ಕ್ರಮ ಕೈಗೊಂಡಿದ್ದಾರೆ.
ದಕ್ಷಿಣ ವಲಯದಲ್ಲಿ ವಲಯ ಆಯುಕ್ತೆ ತುಳಸಿ ಮದ್ದಿನೇನಿ ಅವರ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು, ಇಂಜಿನಿಯರ್ ಹಾಗೂ ಕಂದಾಯಾಧಿಕಾರಿಗಳ ತಂಡ ಗುರುವಾರ ಕೋವಿಡ್ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಫೋರಂ ಮಾಲ್‌ನಲ್ಲಿ ಮಳಿಗೆಯನ್ನು ಬಂದ್ ಮಾಡಿಸಿದೆ. ಜೊತೆಗೆ ವಾರ್ಡ್ ಸಂಖ್ಯೆ 152, 162 ಹಾಗೂ 164ರಲ್ಲಿ ಜಿಮ್ ಸೇರಿದಂತೆ ಆರು ಉದ್ದಿಮೆಗಳನ್ನು ಸಹ ಬಂದ್ ಮಾಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.