2005ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದ ಶಿವರಾಜ್ ಸಿಂಗ್ ಚೌಹಾಣ್ ಒಟ್ಟು 4 ಬಾರಿ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇತ್ತೀಚಿನ ವಿಧಾನಸಭಾ ಚುನಾವಣೆಗೂ ಮುನ್ನ ಹಲವು ಜನಪ್ರಿಯ ಯೋಜನೆ ಜಾರಿಗೊಳಿಸಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭೋಪಾಲ್ (ಡಿಸೆಂಬರ್ 12, 2023): ಮಧ್ಯಪ್ರದೇಶದ ಮೋಹನ್ ಯಾದವ್‌ರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (63) ಅವರ ರಾಜ್ಯ ರಾಜಕೀಯ ಯುಗಾಂತ್ಯಕ್ಕೆ ಪಕ್ಷ ಮುನ್ನುಡಿ ಬರೆದಿದೆ ಎನ್ನಲಾಗಿದೆ. 1990ರಲ್ಲಿ ಮೊದಲ ಬಾರಿಗೆ ಶಾಸಕರಾದ ಚೌಹಾಣ್, 1991 - 95ರವರೆಗೆ ಸಂಸದರಾಗಿದ್ದರು.
2005ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದ ಶಿವರಾಜ್ ಸಿಂಗ್ ಚೌಹಾಣ್ ಒಟ್ಟು 4 ಬಾರಿ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇತ್ತೀಚಿನ ವಿಧಾನಸಭಾ ಚುನಾವಣೆಗೂ ಮುನ್ನ ಹಲವು ಜನಪ್ರಿಯ ಯೋಜನೆ ಜಾರಿಗೊಳಿಸಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಹೊಸ ಮುಖಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ಚೌಹಾಣ್‌ಗೆ ಸಿಎಂ ಹುದ್ದೆ ನಿರಾಕರಿಸಲಾಗಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚೌಹಾಣ್‌ಗೆ ಟಿಕೆಟ್ ನೀಡಿ ಗೆದ್ದರೆ, ಕೇಂದ್ರ ಸಚಿವ ಸ್ಥಾನ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ.
ಇದನ್ನು ಓದಿ: ಬಿಜೆಪಿಗೆ ಮತ: ಮುಸ್ಲಿಂ ಮಹಿಳೆ ಮೇಲೆ ಬಾವನಿಂದ ಹಲ್ಲೆ; ಶಿವರಾಜ್ ಸಿಂಗ್ ಚೌಹಾಣ್ ಸಾಂತ್ವನ
ಮಧ್ಯ ಪ್ರದೇಶದಲ್ಲಿ ಅಚ್ಚರಿಯ ಆಯ್ಕೆ
ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯನ್ನಾಗಿ ರೇಸ್‌ನಲ್ಲೇ ಇಲ್ಲದ ಮೋಹನ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಛತ್ತೀಸ್‌ಗಢ ರೀತಿಯಲ್ಲಿ ಇಲ್ಲಿಯೂ ಅಚ್ಚರಿಯ ಆಯ್ಕೆ ಮಾಡಲಾಗಿದ್ದು, 4 ಬಾರಿ ಸಿಎಂ ಆಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೊಕ್ ನೀಡಲಾಗಿದೆ. ಇನ್ನು ಉಪಮುಖ್ಯಮಂತ್ರಿಗಳನ್ನಾಗಿ ರಾಜೇಶ್ ಶುಕ್ಲಾ ಹಾಗೂ ಜಗದೀಶ್ ದೇವಡಾ ಅವರನ್ನು ಆಯ್ಕೆ ಮಾಡಲಾಗಿದೆ.
ಸೋಮವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೋಹನ್ ಯಾದವ್ ಬಿಜೆಪಿ ನಾಯಕರಾಗಿ ಆಯ್ಕೆಯಾದರು. ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರೇ ಯಾದವ್ ಹೆಸರು ಸೂಚಿಸಿದರು. ಇದಕ್ಕೆ ಸಿಎಂ ಸ್ಥಾನಾಕಾಂಕ್ಷಿಗಳಾಗಿದ್ದ ಪ್ರಹ್ಲಾದ್ ಪಟೇಲ್, ನರೇಂದ್ರ ಸಿಂಗ್ ತೋಮರ್ ಹಾಗೂ ಕೈಲಾಶ್ ವಿಜಯವರ್ಗೀಯ ಅನುಮೋದಿಸಿದರು.
ಇದನ್ನೂ ಓದಿ: ಮಧ್ಯಪ್ರದೇಶಕ್ಕೆ ಮೋಹನ್ ಯಾದವ್ ನೂತನ ಸಿಎಂ; ಶಿವರಾಜ್ ಸಿಂಗ್ ಬದಲು ಹೊಸಬರಿಗೆ ಮಣೆಹಾಕಿದ ಬಿಜೆಪಿ!
ವಿಶೇಷವೆಂದರೆ, ಮೋಹನ್ ಯಾದವ್ ಸಿಎಂ ರೇಸ್‌ನಲ್ಲಿದ್ದವರ ಪಟ್ಟಿಯಲ್ಲೇ ಇರಲಿಲ್ಲ. ಆದರೆ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹಿಂದುಳಿದ ಸಮುದಾಯಕ್ಕೆ ಸೇರಿದ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮತ್ತು ಬ್ರಾಹ್ಮಣ ಸಮುದಾಯದ ರಾಜೇಶ್ ಶುಕ್ಲಾ ಹಾಗೂ ದಲಿತ ಸಮುದಾಯದ ಜಗದೀಶ್ ದೇವಡಾ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಮೋಹನ್ ಯಾದವ್ ವಿಧಾನಸಭೆಗೆ ಆಯ್ಕೆಯಾಗಿದ್ದು ಇದು ಮೂರನೇ ಬಾರಿ. ಹಿಂದಿನ ಸರ್ಕಾರದಲ್ಲಿ ಅವರು ಶಿಕ್ಷಣ ಸಚಿವರಾಗಿದ್ದರು. ಇನ್ನು ಡಿಸಿಎಂಗಳಾದ ದೇವಡಾ ಮತ್ತು ಶುಕ್ಲಾ ಕೂಡಾ ಹಿಂದಿನ ಸಿಎಂ ಚೌಹಾಣ್ ಸಂಪುಟದಲ್ಲಿ ಸಚಿವರಾಗಿದ್ದರು.
ಇನ್ನೊಂದು ಅಚ್ಚರಿ ಎಂಬಂತೆ ಚುನಾವಣೆಗೆ ಸ್ಪರ್ಧಿಸಿದ್ದ 3 ಕೇಂದ್ರ ಸಚಿವರಲ್ಲಿ ಒಬ್ಬರಾದ ನರೇಂದ್ರ ಸಿಂಗ್ ತೋಮರ್ ಅವರನ್ನು ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಈ ಮೂಲಕ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ನಿರ್ಗಮಿತ ಕೇಂದ್ರ ಕೃಷಿ ಸಚಿವ ತೋಮರ್, ಈಗ ಸ್ಪೀಕರ್ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದೆಡೆ ಮೋಹನ್ ಯಾದವ್, ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ.
ಬಳಿಕ ಮಾತನಾಡಿದ ಮೋಹನ್ ಯಾದವ್ ‘ನಾನೊಬ್ಬ ಪಕ್ಷದ ಸಣ್ಣ ಕಾರ್ಯಕರ್ತ... ಈ ಅವಕಾಶಕ್ಕಾಗಿ ಪಕ್ಷಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಜನರ ಆಶೋತ್ತರ ಈಡೇರಿಸುವ ಎಲ್ಲ ಯತ್ನ ಮಾಡುವೆ’ ಎಂದು ನುಡಿದರು.
