Asianet Suvarna News Asianet Suvarna News

ಬಿಜೆಪಿಗೆ ಮತ: ಮುಸ್ಲಿಂ ಮಹಿಳೆ ಮೇಲೆ ಬಾವನಿಂದ ಹಲ್ಲೆ; ಶಿವರಾಜ್‌ ಸಿಂಗ್ ಚೌಹಾಣ್‌ ಸಾಂತ್ವನ

ಮಹಿಳೆ ನೀಡಿದ ದೂರಿನ ಮೇರೆಗೆ ಜಾವೇದ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

madhya pradesh muslim woman beaten up by brother in law for voting for bjp cm chouhan meets her ash
Author
First Published Dec 10, 2023, 11:07 AM IST

ಭೋಪಾಲ್‌ (ಡಿಸೆಂಬರ್ 10, 2023): ಇತ್ತೀಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ ಹಾಕಿದ ಕಾರಣ ಜಾವೇದ್‌ ಎಂಬಾತ ತನ್ನ ಅತ್ತಿಗೆ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಸೆಹೋರ್‌ ಜಿಲ್ಲೆಯಲ್ಲಿ ಡಿಸೆಂಬರ್‌ 4 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಮೀನಾ ಎಂಬಾಕೆ ಈ ಬಗ್ಗೆ ದೂರು ನೀಡಿದ್ದು, ಚುನಾವಣೆ ಫಲಿತಾಂಶದ ದಿನ ಬಿಜೆಪಿ ಗೆದ್ದಿದ್ದಕ್ಕೆ ಸಂತಸ ಪಟ್ಟಿದ್ದನ್ನು ಕಂಡ ನನ್ನ ಬಾವ ಜಾವೇದ್‌ ಅವಾಚ್ಯ ಪದಗಳನ್ನು ಆಡಿದ. ಬಳಿಕ ಬಡಿಗೆ ಹಿಡಿದು ಥಳಿಸಿ ಹಲ್ಲೆ ನಡೆಸಿದ. ಇದಕ್ಕೆ ನನ್ನ ಗಂಡ ಬೆಂಬಲ ನೀಡಿದ ಎಂದು ದೂರಿದ್ದಾರೆ.

ಇದನ್ನು ಓದಿ: ಇಂದು ರಾಜಸ್ಥಾನ, ಛತ್ತೀಸ್‌ಗಢ ಸಿಎಂ ಘೋಷಣೆ? ನಾಳೆ ಮಧ್ಯಪ್ರದೇಶ ಸಿಎಂ ಆಯ್ಕೆ ಸಾಧ್ಯತೆ

ಈ ಘಟನೆಯ ವಿಡಿಯೋ ವೈರಲ್‌ ಆಗಿದ್ದು, ಮಹಿಳೆ ನೀಡಿದ ದೂರಿನ ಅನ್ವಯ ಆಕೆಯ ಬಾವ ಜಾವೇದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಸಿಎಂ ಶಿವರಾಜ್ ಸಿಂಗ್ ಚೌಹಾಣ್‌ ಸಂತ್ರಸ್ತ ಮಹಿಳೆ ಹಾಗೂ ಅವರ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಮಹಿಳೆಯನ್ನು ಭೋಪಾಲ್‌ನಲ್ಲಿರುವ ತನ್ನ ನಿವಾಸಕ್ಕೆ ಆಹ್ವಾನಿಸಿ ಸಾಂತ್ವನ ಹೇಳಿದರು.

ಸಮೀನಾ ಮತ್ತು ಆಕೆಯ ತಂದೆ ಕಠಿಣ ಕ್ರಮಕ್ಕಾಗಿ ಸೆಹೋರ್ ಕಲೆಕ್ಟರ್ ಕಚೇರಿಗೆ ಭೇಟಿ ನೀಡಿದ ಒಂದು ದಿನದ ನಂತರ ದೂರುದಾರೆಯ ಪತಿಯ ಕಿರಿಯ ಸಹೋದರ ಜಾವೇದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಗಮನಾರ್ಹವಾಗಿ, ಸೆಹೋರ್ ಶಿವರಾಜ್‌ ಸಿಂಗ್ ಚೌಹಾಣ್ ಅವರ ತವರು ಜಿಲ್ಲೆ.

ಲೋಕ ಚುನಾವಣೆ ಗೆಲ್ಲಲು ‘ಕೈ’ ಪಣ: 4 ರಾಜ್ಯಗಳಲ್ಲಿನ ಸೋಲಿನ ಪರಾಮರ್ಶೆ ನಡೆಸಿದ ಕಾಂಗ್ರೆಸ್‌ ನಾಯಕರು

ಮಹಿಳೆ ನೀಡಿದ ದೂರಿನ ಮೇರೆಗೆ ಜಾವೇದ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಲಾಡ್ಲಿ ಬೆಹನಾ ಯೋಜನೆ' ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳ ಫಲಾನುಭವಿಯಾಗಿರುವುದರಿಂದ ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಮಹಿಳೆ ಸುದ್ದಿಗಾರರಿಗೆ ತಿಳಿಸಿದ್ದಾರೆ   ಸರ್ಕಾರದ ಪ್ರಕಾರ, ರಾಜ್ಯದ 1.31 ಕೋಟಿ ಮಹಿಳೆಯರು ಈ ಯೋಜನೆಯಡಿ ತಿಂಗಳಿಗೆ 1,250 ರೂ. ಪಡೆಯಲಿದ್ದಾರೆ. 'ಮಾಮಾಜಿ' ಶಿವರಾಜ್ ಸಿಂಗ್ ಚೌಹಾಣ್ ಮತ್ತು ಸೆಹೋರ್ ಬಿಜೆಪಿ ಶಾಸಕ ಸುದೇಶ್ ರೈ ನನ್ನ ಮನಸ್ಸಿನಲ್ಲಿಟ್ಟುಕೊಂಡು ನಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಸಮೀನಾ ಹೇಳಿದ್ದರು.

ಮುಖ್ಯಮಂತ್ರಿಗಳ ಕಚೇರಿಯ ಪ್ರಕಾರ, ಶನಿವಾರದಂದು ಸಮೀನಾರನ್ನು ಶಿವರಾಜ್‌ ಸಿಂಗ್ ಚೌಹಾಣ್ ಆಹ್ವಾನಿಸಿದ ನಂತರ ಭೋಪಾಲ್‌ನಲ್ಲಿ ಆಕೆ ತನ್ನ ಮಕ್ಕಳೊಂದಿಗೆ ಭೇಟಿ ನೀಡಿದರು. ನಿಮ್ಮ ಮತ ಚಲಾಯಿಸುವ ಮೂಲಕ, ನೀವು ನಿಮ್ಮ ಹಕ್ಕನ್ನು ಚಲಾಯಿಸಿದ್ದೀರಿ. ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇದೆ. ಜನರು ತಮಗೆ ಒಳ್ಳೆಯದನ್ನು ಮಾಡುವವರಿಗೆ ಮತ ಹಾಕುತ್ತಾರೆ. ಅದು ತಪ್ಪಲ್ಲ. ಹೀಗಾಗಿ, ನಾನು ನಿಮ್ಮನ್ನು ಭೇಟಿಯಾಗಲು ಬಯಸಿದ್ದೆ. ಚಿಂತಿಸಬೇಡ. ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ ಮತ್ತು ನಿಮ್ಮ ಚಿಂತೆಗಳನ್ನು ನೋಡಿಕೊಳ್ಳುತ್ತೇವೆ ಎಂದು ಚೌಹಾಣ್ ಮಹಿಳೆಗೆ ಹೇಳಿದರು.

Follow Us:
Download App:
  • android
  • ios