* ಶಿವಲಿಂಗ ಸೇರಿ 10 ಮಂದಿ ವಿರುದ್ಧ ಕೋರ್ಟ್‌ ಸಮನ್ಸ್‌* ಸಮನ್ಸ್‌ ನೀಡಿದ್ದಕ್ಕೆ ಶಿವಲಿಂಗವೇ ಕೋರ್ಟ್‌ಗೆ ಹಾಜರು!

ರಾಯ್‌ಪುರ(ಮಾ.28) ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿ ದೇಗುಲ ನಿರ್ಮಿಸಿದ್ದ ಪ್ರಕರಣ ಸಂಬಂಧ ವಿಚಾರಣೆಗೆ ಶಿವಲಿಂಗವನ್ನೇ ಕಿತ್ತು ತಹಶೀಲ್ದಾರ್‌ ಕೋರ್ಟ್‌ ಎದುರು ಹಾಜರುಪಡಿಸಿದ ಅಚ್ಚರಿಯ ಘಟನೆ ಛತ್ತೀಸ್‌ಗಢದಲ್ಲಿ ಶುಕ್ರವಾರ ನಡೆದಿದೆ. ತಳ್ಳುವ ಗಾಡಿಯಲ್ಲಿ ಶಿವಲಿಂಗವನ್ನು ಎಳೆದುಕೊಂಡು ಹೋಗುತ್ತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿ ಶಿವ ದೇಗುಲ ನಿರ್ಮಿಸಲಾಗಿದೆ ಎಂದು ಸುಧಾ ರಾಜ್‌ವಾಡೆ ಎಂಬವರು ಛತ್ತೀಸ್‌ಗಢ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ ಪ್ರಕರಣದ ಪರಿಶೀಲನೆಗೆ ಸೂಚಿಸಿತ್ತು. ಈ ವೇಳೆ ಅತಿಕ್ರಮಣ ಮಾಡಿರುವುದು ದೃಢವಾಗಿದೆ. ಬಳಿಕ ಪ್ರಕರಣ ಸಂಬಂಧ ತಹಶೀಲ್ದಾರ್‌ ಕೋರ್ಟ್‌ ಶಿವ ದೇಗುಲ ಸೇರಿ 10 ಜನರಿಗೆ ಸಮನ್ಸ್‌ ಜಾರಿ ಮಾಡಿ ಮಾ.25ರಂದು ವಿಚಾರಣೆಗೆ ಹಾಜರಾಗಲು ನಿರ್ದೇಶನ ನೀಡಿತ್ತು.

ಹಾಜರಾಗದಿದ್ದಲ್ಲಿ ತಲಾ 10,000 ದಂಡ ವಿಧಿಸುವುದಾಗಿ ಎಚ್ಚರಿಸಿತ್ತು. ಹೀಗಾಗಿ ಶಿವ ದೇಗುಲದ ಪ್ರತಿನಿಧಿಯಾಗಿ ಶಿವಲಿಂಗವನ್ನೇ ಕಿತ್ತು ಕೋರ್ಟ್‌ ಎದುರು ಹಾಜರುಪಡಿಸಲಾಯಿತು. ಆದರೆ ಕೋರ್ಟಲ್ಲಿ ಅಧಿಕಾರಿಗಳ ಕೊರತೆ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಏ.13ಕ್ಕೆ ಮುಂದೂಡಲಾಗಿದೆ. ಮುಂದಿನ ವಿಚಾರಣೆ ವೇಳೆ ಶಿವಲಿಂಗದ ಹಾಜರಿಗೆ ವಿನಾಯ್ತಿ ನೀಡಿ, ದಾಖಲಾಗಿದ್ದ ದೂರಿನಲ್ಲಿನ ತಪ್ಪು ಸರಿಪಡಿಸಲಾಗಿದೆ.