ಮುಂಬೈ(ಜ.04): ಎಲ್ಲಾ ಬಿಕ್ಕಟ್ಟುಗಳನ್ನು ಬಗೆಹರಿಸಿ ಈಗಷ್ಟೇ ಕಣ್ಣು ಬಿಟ್ಟಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ, ಸಚಿವ ಸಂಪುಟ ವಿಸ್ತರಣೆ ಸಂಕಷ್ಟ ತಂದಿಟ್ಟಿದೆ.

ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಶಿವಸೇನೆಗೆ ಮಹಾ ಹಿನ್ನಡೆ ಉಂಟಾಗಿದ್ದು, ಸಂಪುಟ ದರ್ಜೆಯ ಸಚಿವ ಸ್ಥಾನ ನೀಡದ ಕಾರಣಕ್ಕೆ ಶಾಸಕ ಅಬ್ದುಲ್ ಸತ್ತಾರ್ ರಾಜೀನಾಮೆ ನೀಡಿದ್ದಾರೆ. 

ಸಂಪುಟ ವಿಸ್ತರಣೆ ವೇಳೆ ಅಬ್ದುಲ್ ಸತ್ತಾರ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಮಹತ್ವದ ಹುದ್ದೆ ಬೇಕೆಂದು ಪಟ್ಟು ಹಿಡಿದಿರುವ ಸತ್ತಾರ್, ಅಸಮಾಧಾನಗೊಂಡು ಪಕ್ಷ ತ್ಯಜಿಸಿದ್ದಾರೆ.  

ಸಂಪುಟ ದರ್ಜೆ ಸಚಿವ ಸ್ಥಾನ ನೀಡುವ ಬಗ್ಗೆ ಉದ್ಧವ್ ಠಾಕ್ರೆ ಭರವಸೆ ನೀಡಿದ್ದರು. ಆದರೆ ರಾಜ್ಯ ಖಾತೆ ನೀಡಿದ್ದಾರೆ. ಹೀಗಾಗಿ ಸರ್ಕಾರದಿಂದ ಹೊರನಡೆಯುತ್ತಿರುವುದಾಗಿ ಅಬ್ದುಲ್ ಸತ್ತಾರ್ ಹೇಳಿದ್ದಾರೆ. 

ಅಜಿತ್‌ ಪವಾರ್‌ಗೆ ಮತ್ತೆ ಡಿಸಿಎಂ ಪಟ್ಟ, ಠಾಕ್ರೆ ಪುತ್ರ ಮಂತ್ರಿ!

ಸದ್ಯ ಅಬ್ದುಲ್ ಸತ್ತಾರ್ ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಶಿವಸೇನೆ ಅವರ ರಾಜೀನಾಮೆಯನ್ನು ಸ್ವೀಕರಿಸಿಲ್ಲ. ಅಲ್ಲದೇ ಸತ್ತಾರ್ ಅವರನ್ನು ಮನವೋಲಿಸುವ ಕಸರತ್ತು ಮುಂದುವರೆದಿದೆ.

ವಿಧಾನಸಭೆ ಚುನಾವಣೆಗೂ ಮೊದಲು ಅಬ್ದುಲ್ ಸತ್ತಾರ್ ಕಾಂಗ್ರೆಸ್ ತ್ಯಜಿಸಿ ಶಿವಸೇನೆ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.