* ದೇಶದಲ್ಲಿ ಕೊರೋನಾ ಮೂರನೇ ಅಲೆ ದಾಳಿ ಇಡುವ ಆತಂಕ* ಕೊರೋನಾ ಹರಡದಂತೆ ಮಾರ್ಗಸೂಚಿ ಪಾಲಿಸಲು ಕೇಂದ್ರದ ಕರೆ* ಮಾಸ್ಕ್ ಧರಿಸಿ, ಹೊರಗೆ ಓಡಾಡಬೇಡಿ ಎಂದ ಪ್ರಧಾನಿ ಮೋದಿ* ಮೋದಿ ಮನವಿಗೂ ಕಿಮ್ಮತ್ತಿಲ್ಲ: ಶಿಮ್ಲಾದಲ್ಲಿ ಜನಸಾಗರ: 

ಶಿಮ್ಲಾ(ಜು.18): ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗಿದೆಯಾದರೂ ಮೂರನೇ ಅಲೆ ಭೀತಿ ಕಾಡುತ್ತಿದೆ. ಹೀಗಾಗಿ ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಪ್ರವಾಸಿ ಪ್ರದೇಶಗಳು ಮತ್ತು ಮಾರುಕಟ್ಟೆಗಳಲ್ಲಿ ಜನಸಂದಣಿತಾಗದಂತೆ ನಿಗಾ ವಹಿಸಿ ಹಾಗೂ ಕೋವಿಡ್ -19 ಗೆ ಸಂಬಂಧಿಸಿದ ಮಾರ್ಗಸೂಚಿ ಪಾಲಿಸಿ ಎಂದು ಕೇಂದ್ರ ಸರ್ಕಾರ ನಿರಂತರವಾಗಿ ಜನರಿಗೆ ಮನವಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಸ್ಕ್ ಧರಿಸದೆ ಮಾರುಕಟ್ಟೆ ಹಾಗೂ ಪಾರ್ಕ್‌ಗಳಲ್ಲಿ ಸಂಚರಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ, ಎಚ್ಚರಿಕೆಗಳನ್ನು ನೀಡಿದ್ದರೂ, ಶಿಮ್ಲಾದಲ್ಲಿ ಪ್ರವಾಸಿಗರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.

Scroll to load tweet…

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಹಿಮಾಚಲ ಪ್ರದೇಶದ ಶಿಮ್ಲಾದ ರಿಡ್ಜ್ ಪ್ರದೇಶದಲ್ಲಿ ಶನಿವಾರ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಜಮಾಯಿಸಿದ್ದಾರೆ ಹೆಚ್ಚುತ್ತಿರುವ ಜನಸಮೂಹದ ಮಧ್ಯೆ, ಶಿಮ್ಲಾ ಜಿಲ್ಲಾಧಿಕಾರಿ, "ಸೀಮಿತ ಸಂಖ್ಯೆಯ ಪ್ರವಾಸಿಗರು ಮತ್ತು ಜನರಿಗೆ ಮಾತ್ರ ಶಿಮ್ಲಾದ ರಿಡ್ಜ್ ಮತ್ತು ಮಾಲ್ ರಸ್ತೆಗೆ ಪ್ರವೇಶಿಸಲು ಅವಕಾಶವಿರುತ್ತದೆ. ಹಿರಿಯ ನಾಗರಿಕರಿಗೆ ಮಾತ್ರ ಬೆಂಚುಗಳ ಮೇಲೆ ಕುಳಿತುಕೊಳ್ಳಲು ಅವಕಾಶವಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರೆ ಅವರು ಜನಸಂದಣಿಯಿಂದ ಹೊರಹೋಗುವಂತೆ ವಿನಂತಿಸಲಾಗಿದೆ".

ಮಂಗಳವಾರವಷ್ಟೇ ಕೊರೋನಾ ಮೂರನೇ ಅಲೆ ಬಗ್ಗೆ ಎಚ್ಚರಿಸಿದ್ದ ಪ್ರಧಾನಿ ಮೋದಿ ಗುಡ್ಡಗಾಡು ಪ್ರದೇಶಗಳಲ್ಲಿ, ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸದೆ, ಮಾರ್ಗಸೂಚಿ ಪಾಲಿಸದೆ, ಭಾರಿ ಜನ ಒಟ್ಟುಗೂಡಿಸುವುದು ಆತಂಕದ ವಿಷಯ ಎಂದಿದ್ದರು. ಕೊರೋನಾ ಅಲೆ ಬರದಂತೆ ತಡೆಯುವುದು ಹೇಗೆ ಎಂಬುದರ ಬಗ್ಗೆ ಗಮನ ಕೊಡುವುದು ಮುಖ್ಯ. ವೈರಸ್ ತಾನಾಗೇ ಬರುವುದಿಲ್ಲ. ಯಾರಾದರೂ ಹೋಗಿ ಅದನ್ನು ತಂದರೆ ಅದು ಬರುತ್ತದೆ. ಕೊರೋನಾ ಮಾರ್ಗಸೂಚಿ ಅನುಸರಿಸುವಲ್ಲಿ ನಾವು ರಾಜಿ ಮಾಡಿಕೊಳ್ಳಬೇಕಾಗಿಲ್ಲ. ಅಜಾಗರೂಕತೆ, ನಿರ್ಲಕ್ಷ್ಯ ಮತ್ತು ಜನದಟ್ಟಣೆಯಿಂದಾಗಿ, ಕೊರೋನಾ ಸೋಂಕಿನಲ್ಲಿ ಭಾರೀ ಏರಿಕೆ ಕಾಣಬಹುದು ಎಂದು ತಜ್ಞರು ಪದೇ ಪದೇ ಎಚ್ಚರಿಸುತ್ತಿದ್ದಾರೆ.