ಕಾಶ್ಮೀರದಲ್ಲಿ ಶಾರದಾ ಪೀಠ ಗರ್ಭಗುಡಿ ನಿರ್ಮಾಣ ಶುರು, ಮಾಗಡಿ ಕಲ್ಲು ಬಳಕೆ!
* ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಇರುವ ಶಾರದಾ ದೇವಾಲಯ
* ಕಾಶ್ಮೀರದಲ್ಲಿ ಶಾರದಾ ಪೀಠ ಗರ್ಭಗುಡಿ ನಿರ್ಮಾಣ ಶುರು
* ಮಾಗಡಿ ಕಲ್ಲು, ಬೆಂಗಳೂರು ಕಾರ್ಮಿಕರ ಬಳಸಿ ಕಾಮಗಾರಿ
ಶ್ರೀನಗರ(ಜೂ.15): ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಇರುವ ತೀತ್ವಾಲ್ ಎಂಬಲ್ಲಿ ಶಾರದಾ ದೇವಾಲಯದ ಗರ್ಭಗುಡಿ ನಿರ್ಮಾಣ ಕಾರ್ಯ ಆರಂಭವಾಗಿದೆ. ಕರ್ನಾಟಕದ ರಾಮನಗರ ಜಿಲ್ಲೆಯ ಮಾಗಡಿಯಿಂದ ತರಿಸಿಕೊಳ್ಳಲಾದ ಗ್ರಾನೈಟ್ ಕಲ್ಲುಗಳಿಂದ ದೇಗುಲದ ಗರ್ಭಗುಡಿಯ ಪರಿಕ್ರಮ ಗೋಡೆಗಳನ್ನು ನಿರ್ಮಿಸುವ ಕೆಲಸಕ್ಕೆ ಸೋಮವಾರ ಚಾಲನೆ ಸಿಕ್ಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ‘ಶಾರದಾ ಉಳಿಸಿ ಸಮಿತಿ’ ಅಧ್ಯಕ್ಷ ರವೀಂದ್ರ ಪಂಡಿತ, ‘ಮಾಗಡಿಯಿಂದ ತರಿಸಿಕೊಳ್ಳಲಾದ ಕಲ್ಲುಗಳಿಂದ ಶಾರದಾ ದೇಗುಲದ ಪರಿಕ್ರಮ ನಿರ್ಮಾಣ ಆರಂಭವಾಗಿದೆ ಎಂಬುದನ್ನು ತಿಳಿಸಲು ಹರ್ಷಿಸುತ್ತೇನೆ. ಬೆಂಗಳೂರಿನಿಂದ ಬಂದ ಕಾರ್ಮಿಕರು ದೇಗುಲ ನಿರ್ಮಿಸುತ್ತಿದ್ದಾರೆ’ ಎಂದಿದ್ದಾರೆ.
ಶಾರದೆಯ ಮೂಲ ನೆಲೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ‘ಅಲ್ಲಿಗೆ ತೆರಳಲು 1947ರ ವಿಭಜನೆಗೆ ಮುನ್ನ ತೀತ್ವಾಲ್ ಶಾರದಾ ಯಾತ್ರೆಯ ಬೇಸ್ ಕ್ಯಾಂಪ್ ಆಗಿತ್ತು. ಆದರೆ ವಿಭಜನೆ ವೇಳೆ ನಾಶವಾಗಿತ್ತು. ಅದನ್ನು ಈಗ ಮರುನಿರ್ಮಿಸಲಾಗುತ್ತಿದೆ’ ಎಂದಿದ್ದಾರೆ. ಇತ್ತೀಚೆಗೆ ಪಂಡಿತ ಅವರು ಗ್ರಾನೈಟ್ ಕಲ್ಲುಗಳ ಪರಿಶೀಲನೆಗೆ ಬೆಂಗಳೂರಿಗೆ ಆಗಮಿಸಿದ್ದರು.
ಆಕ್ರಮಿತ ಕಾಶ್ಮೀರದಲ್ಲಿನ ಶಾರದಾ ದೇಗುಲಕ್ಕೆ ಭೇಟಿ ನೀಡಲು ಕರ್ತಾರ್‌ಪುರ ಕಾರಿಡಾರ್ ಮಾದರಿಯಲ್ಲಿ ಅವಕಾಶ ನೀಡಬೇಕು ಎಂಬುದೂ ಪಂಡಿತ ಅವರ ಈ ಹಿಂದಿನ ಆಗ್ರಹ.