ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ-3 ವಿಕ್ರಮ್‌ ಲ್ಯಾಂಡಿಂಗ್‌ ಸೈಟ್‌ಗೆ ಶಿವಶಕ್ತಿ ಎಂದು ಹೆಸರಿಟ್ಟಿರುವುದು ಕಾಂಗ್ರೆಸ್‌ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಹಿರಿಯ ಕಾಂಗ್ರೆಸ್‌ ನಾಯಕ ರಶೀದ್‌ ಅಲ್ವಿ ಇದಕ್ಕೆ ನೇರವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನವದೆಹಲಿ (ಆ.26): ಬ್ರಿಕ್ಸ್‌ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾ, ಆ ಬಳಿಕ ಗ್ರೀಸ್‌ ದೇಶಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮುಂಜಾನೆಯೇ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿಗರು ಇನ್ನು ನಿದ್ರೆಗಣ್ಣು ಬಿಟ್ಟು ಏಳುವಾಗಲೇ ಪ್ರಧಾನಿ ಮೋದಿ ತಮ್ಮ ಕಾರ್ಯಕ್ರಮವನ್ನು ಮುಗಿಸಿ ದೆಹಲಿಗೆ ತೆರಳಿ ಬಿಟ್ಟಿದ್ದರು. ಈ ಅವಧಿಯಲ್ಲಿ ಚಂದ್ರಯಾನ-3 ಸಕ್ಸಸ್‌ನಲ್ಲಿ ಭಾಗಿಯಾದ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಚಂದ್ರಯಾನ-3 ಲ್ಯಾಂಡಿಂಗ್‌ ಸೈಟ್‌ಅನ್ನು ಶಿವಶಕ್ತಿ ಎನ್ನುವ ಹೆಸರಿನಿಂದ ಕರೆಯಲಾಗುವುದು ಎಂದು ಘೋಷಣೆ ಮಾಡಿದರು. ಅದರೊಂದಿಗೆ ಚಂದ್ರಯಾನ-2 ವೇಳೆ ವಿಕ್ರಮ್‌ ಲ್ಯಾಂಡರ್‌ ಬಿದ್ದ ಸ್ಥಳವನ್ನು 'ತಿರಂಗಾ ಪಾಯಿಂಟ್‌' ಎನ್ನುವ ಹೆಸರಿನಿಂದ ಗುರುತಿಸಲಾಗುತ್ತದೆ ಎಂದು ಪ್ರಕಟಿಸಿದ್ದರು. ಅದರೊಂದಿಗೆ ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆದ ದಿನವಾದ ಆಗಸ್ಟ್‌ 23 ರಂದು ಪ್ರತಿ ವರ್ಷ 'ರಾಷ್ಟ್ರೀಯ ಬಾಹ್ಯಾಕಾಶ ದಿನ'ವನ್ನಾಗಿ ಆಚರಣೆ ಮಾಡಲಿದ್ದೇವೆ ಎಂದು ಘೋಷಿಸಿದರು. ಇನ್ನು ಮೋದಿ ಚಂದ್ರನ ಮೇಲಿನ ಲ್ಯಾಂಡಿಂಗ್‌ ಸೈಟ್‌ಗೆ ಶಿವಶಕ್ತಿ ಎಂದು ನಾಮಕರಣ ಮಾಡಿದ್ದಕ್ಕೆ ಕಾಂಗ್ರೆಸ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತಾಗಿ ಮಾತನಾಡಿರುವ ಕಾಂಗ್ರೆಸ್‌ ಹಿರಿಯ ನಾಯಕ ರಶೀದ್‌ ಅಲ್ವಿ, 'ಮೊದಲಿಗೆ ಇದು ನಗು ತರಿಸುವಂಥ ವಿಚಾರ. ಚಂದ್ರನ ಮೇಲಿರುವ ಪ್ರದೇಶಕ್ಕೆ ಹೆಸರನ್ನು ಇಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಚಂದ್ರನ ಮೇಲೆ ಯಾವುದೇ ಪ್ರದೇಶಕ್ಕೆ ಇವರು ಹೇಗೆ ಹೆಸರು ಇಡುತ್ತಾರೆ? ಒಟ್ಟಾರೆ ಈ ಸಂಗತಿಯೇ ನನಗೆ ನಗು ತರಿಸುತ್ತದೆ. ಚಂದ್ರಯಾನ-3 ಬಗ್ಗೆ ನಮ್ಮ ಇಸ್ರೋ ಮಾಡಿದ ಸಾಧನೆ ಬಗ್ಗೆ ನಮಗೆಲ್ಲಾ ಹೆಮ್ಮೆ ಇದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆದರೆ, ನಾವು ಚಂದ್ರನ ಮಾಲೀಕರಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮೋದಿಯಾಗಲಿ ಇದರ ಮಾಲೀಕರಲ್ಲ. ಭಾರತಯ ಜನತಾ ಪಾರ್ಟಿಯಲ್ಲಿ ಇಂಥದ್ದೊಂದು ಅಭ್ಯಾಸ ಮೊದಲಿನಿಂದಲೂ ಇದೆ. ಅವರಿ ಅಧಿಕಾರಕ್ಕೆ ಬಂದ ದಿನದಿಂದಲೂ ಹೆಸರನ್ನು ಬದಲಾವಣೆ ಮಾಡುವ ಕಾಯಕದಲ್ಲಿ ತೊಡಗಿಕೊಂಡಿದೆ' ಎಂದು ಹೇಳಿದ್ದಾರೆ.

ಇದೇ ವೇಳೆ ನಿರೂಪಕಿ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ 2008ರಲ್ಲಿ ಚಂದ್ರನ ಮೇಲೆ ಬಿದ್ದ ಇಸ್ರೋದ ಮೂನ್‌ ಇಂಪ್ಯಾಕ್ಟರ್‌ ಪ್ರೋಬ್‌ನ ಸ್ಥಳಕ್ಕೆ ಜವಾಹರ್‌ ಪಾಯಿಂಟ್‌ ಎಂದು ಹೆಸರು ನೀಡಿತ್ತಲ್ಲವೇ ಎನ್ನುವ ಪ್ರಶ್ನೆಗೆ 'ನೀವು ಜವಾಹರ್‌ ನೆಹರು ಅವರ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ. ಇಂದು ಇಸ್ರೋ ಏನು ಸಾಧನೆ ಮಾಡಿದೆಯೋ ಅದಕ್ಕೆಲ್ಲ ನೆಹರು ಅವರೇ ಕಾರಣ. 1962ರಲ್ಲಿ ಪಂಡಿತ್‌ ಜವಾಹರ್‌ಲಾಲ್‌ ನೆಹರು ಹಾಗೂ ವಿಕ್ರಮ್‌ ಸಾರಾಭಾಯಿ ಇಸ್ರೋ ಸ್ಥಾಪನೆ ಮಾಡುವ ಕನಸು ಕಂಡಿದ್ದರು. ಪಂಡಿತ್‌ ನೆಹರು ನಮ್ಮ ಬಾಹ್ಯಾಕಾಶ ಯೋಜನೆಗಳ ಸಂಸ್ಥಾಪಕರು. ಹಾಗಾಗಿ ಅವರ ಹೆಸರನ್ನು ಚಂದ್ರನ ಸ್ಥಳಕ್ಕೆ ಇಡಲಾಗಿತ್ತು. ಆಗಿನ ವಿಚಾರವೇ ಬೇರೆ ಆಗಿತ್ತು. ಆದರೆ, ಇಂದು ಮೋದಿ ಮಾಡುತ್ತಿರುವುದು ಸಂಪೂರ್ಣವಾಗಿ ರಾಜಕಾರಣ' ಎಂದು ಹೇಳಿದ್ದಾರೆ'

PM Modi Isro Visit: 'ಶಭಾಶ್‌...' ಇಸ್ರೋ ಅಧ್ಯಕ್ಷರನ್ನು ಕಂಡೊಡನೆ ಬೆನ್ನುತಟ್ಟಿ ಖುಷಿಪಟ್ಟ ಮೋದಿ!

ಇಸ್ರೋದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ನಿಮ್ಮ ಬಳಿ ಬಂದಿರುವುದು ಬಹಳ ಸಂತೋಷ ನೀಡಿದೆ. ನಿಮ್ಮೆಲ್ಲರಿಗೂ ನಾನು ಸೆಲ್ಯೂಟ್‌ ಸಲ್ಲಿಸುತ್ತೇನೆ. ನೀವು ದೇಶವನ್ನು ಎಷ್ಟು ಎತ್ತರಕ್ಕೆ ಕೊಂಡೊಯ್ದಿದ್ದೀರಿ ಎನ್ನುವ ವಿಚಾರ ಇದೆಯಲ್ಲ ಇದು ಸಾಧಾರಣ ಸಾಧನೆಯಲ್ಲ. ಇದು ಅನಂತ ಅಂತರಿಕ್ಷದಲ್ಲಿ ಭಾರತದ ವೈಜ್ಞಾನಿಕ ಸಾಧನೆಯ ಶಂಖನಾದ. ಇಂದು ನಮ್ಮ ದೇಶದ ರಾಷ್ಟ್ರಧ್ವಜ ಚಂದ್ರನ ಮೇಲೆ ಇದೆ. ಇಂದು ನಾವು ಎಲ್ಲಿ ತಲುಪಿದ್ದೇವೆಯೋ ಅಲ್ಲಿ ಈವರೆಗೂ ಯಾರೂ ತಲುಪಿಲ್ಲ. ನೀವು ಮಾಡಿದ ಸಾಧನೆ ಯಾರೂ ಮಾಡಿಲ್ಲ. ಇದು ನಿಮ್ಮ ಭಾರತ, ನಿರ್ಭೀತ ಭಾರತ. ಇದು ಹೊಸ ಭಾರತ, ಹೊಸ ಆಲೋಚನೆ ಹೊಂದಿರುವ ಭಾರತ'ಎಂದು ಹೇಳಿದ್ದರು.

PM Modi Isro Visit: ವಿಕ್ರಮ್‌ ಲ್ಯಾಂಡರ್‌ ಇಳಿದ ಸ್ಥಳ, ಇನ್ನು ಶಿವಶಕ್ತಿ ಸ್ಥಳ!

Scroll to load tweet…