ನವದೆಹಲಿ(ನ.25): ಕಾಂಗ್ರೆಸ್‌ನ ಅತ್ಯಂತ ಪ್ರಭಾವಿ ನಾಯಕರಲ್ಲೊಬ್ಬರಾದ ಅಹ್ಮದ್ ಪಟೇಲ್ ಬುಧವಾರ ಮುಂಜಾನೆ ಸುಮಾರು 3.30ಕ್ಕೆ ಕೊನೆಯುಸಿರೆಳೆದಿದ್ದಾರೆ. 

"

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 71 ವರ್ಷದ ಅಹಮದ್ ಪಟೇಲ್‌ರವರರಿಗೆ ಕಳೆದ ತಿಂಗಳಷ್ಟೇ ಕೊರೋನಾ ಸೋಂಕು ಕೂಡಾ ತಗುಲಿತ್ತು. ಈ ನಿಟ್ಟಿನಲ್ಲಿ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ದಿನೇ ದಿನೇ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಹೀಗಾಗಿ ಅವರನ್ಉ ಗುರುಗ್ರಾಮದ ಮೆದಾಂತಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಕಳೆದೊಂದು ವಾರದಿಂದ ಅವರ ಆರೋಗಗ್ಯ ತೀವ್ರ ಹದಗೆಟ್ಟಿದ್ದರಿಂದ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತು. ತಿಂಗಳಿಂದ ಸಾವು ಬದುಕಿನ ನಡುವೆ ಸೆಣಸಾಡಿದ ಅಹಮದ್ ಪಟೇಲ್ ಮುಂಜಾನೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಪಟೇಲ್ ಪುತ್ರ ಫೈಸಲ್ ಪಟೇಲ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ನನ್ನ ತಂದೆ ಅಹ್ಮದ್ ಪಟೇಲ್ ಅವರು ಇಂದು(25/11/2020) ಮುಂಜಾನೆ 3: 30 ಕ್ಕೆ ಅಕಾಲಿಕ ನಿಧನರಾದರು ಎಂದು ಘೋಷಿಸಲು ವಿಷಾದಿಸುತ್ತೇನೆ. ಒಂದು ತಿಂಗಳ ಹಿಂದೆಯೇ ಕೋವಿಡ್ -19 ಸೋಂಕಿಗೆ ತುತ್ತಾಗಿದ್ದ ನಂತರ ಅಂಗಾಂಗ ವೈಫಲ್ಯಗಳಿಂದಾಗಿ ನನ್ನ ತಂದೆ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತು ಎಂದಿದ್ದಾರೆ. ಇದೇ ವೇಳೆ ಕೋವಿಡ್ -19 ನಿಯಮಗಳನ್ನು ಪಾಲಿಸಬೇಕೆಂದು ನಾನು ಎಲ್ಲ ಹಿತೈಷಿಗಳನ್ನು ವಿನಂತಿಸುತ್ತೇನೆ ಮತ್ತು ಎಲ್ಲಾ ಸಮಯದಲ್ಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಫೈಸಲ್ ಪಟೇಲ್ ಎಲ್ಲರನ್ನೂ ವಿನಂತಿಸಿದ್ದಾರೆ

ಹಾಲಿ ರಾಜ್ಯಸಭಾ ಸದಸ್ಯರಾಗಿದ್ದ ಅಹಮದ್ ಪಟೇಲ್ ಒಟ್ಟು 8 ಬಾರಿ ಸಂಸದರಾಗಿದ್ದರು. ಎಐಸಿಸಿಯ ಖಜಾಂಚಿಯೂ ಆಗಿದ್ದ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರಲ್ಲೇ ಅತ್ಯಂತ ಹೆಚ್ಚು‌ ಪ್ರಭಾವಿ ಎನಿಸಿದ್ದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಹಳ ವರ್ಷ ರಾಜಕೀಯ ಕಾರ್ಯದರ್ಶಿಯೂ ಆಗಿದ್ದರು ಹಾಗೂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಇದಲ್ಲದೆ ಇತರೆ ಪಕ್ಷಗಳ ಪ್ರಮುಖ ನಾಯಕರೊಂದಿಗೂ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು