ಆಂಧ್ರ ಪ್ರದೇಶದ ಎನ್‌ಟಿಆರ್‌ ಜಿಲ್ಲಾ ಪೊಲೀಸರು ಮಂಗಳವಾರ ಸೀಜ್‌ ಮಾಡಿದ 62,461 ಅಕ್ರಮ ಮದ್ಯ ಬಾಟಲ್‌ಗಳನ್ನು ನಾಶಪಡಿಸಿದ್ದಾರೆ. ರೋಡ್‌ ರೋಲರ್‌ನಡಿ ಈ ಸಾವಿರಾರು ಬಾಟಲ್‌ಗಳನ್ನು ನಾಶ ಮಾಡಿದ್ದು, ಈ ಮದ್ಯ ಬಾಟಲ್‌ಗಳ ಮೌಲ್ಯ ಬರೋಬ್ಬರಿ 2 ಕೋಟಿ ರೂ.

ದೇಶದಲ್ಲಿ ಅಕ್ರಮ ಮದ್ಯ (Liquour) ಪ್ರಕರಣಗಳು ಆಗಾಗ್ಗೆ ಕಂಡುಬರುತ್ತಿರುತ್ತವೆ. ಆದರೆ, ಪೊಲೀಸರು, ಅಧಿಕಾರಿಗಳು ವಶಪಡಿಸಿಕೊಂಡ ಅಕ್ರಮ ಮದ್ಯ ಬಾಟಲ್‌ಗಳನ್ನು ಏನ್ಮಾಡ್ತಾರೆ ಎಂಬ ಬಗ್ಗೆ ಹಲವರಿಗೆ ಗೊಂದಲಗಳಿರುತ್ತದೆ. ಆದರೆ, ಆಂದ್ರಪ್ರದೇಶ ಪೊಲೀಸರು ಮಾಡಿರುವ ಈ ಕೆಲಸ ನೋಡಿ, ಸಾವಿರಾರು ಅಕ್ರಮ ಮದ್ಯ ಬಾಟಲ್‌ಗಳನ್ನು ರೋಡ್‌ ರೋಲರ್‌ (Road- roller) ಸಹಾಯದಿಂದ ನಾಶ ಮಾಡಲಾಗಿದೆ.

ಆಂಧ್ರ ಪ್ರದೇಶದ ಎನ್‌ಟಿಆರ್‌ ಜಿಲ್ಲಾ ಪೊಲೀಸರು ಮಂಗಳವಾರ ಸೀಜ್‌ ಮಾಡಿದ 62,461 ಅಕ್ರಮ ಮದ್ಯ ಬಾಟಲ್‌ಗಳನ್ನು ನಾಶಪಡಿಸಿದ್ದಾರೆ. ರೋಡ್‌ ರೋಲರ್‌ನಡಿ ಈ ಸಾವಿರಾರು ಬಾಟಲ್‌ಗಳನ್ನು ನಾಶ ಮಾಡಿದ್ದು, ಈ ಮದ್ಯ ಬಾಟಲ್‌ಗಳ ಮೌಲ್ಯ ಎಷ್ಟು ಗೊತ್ತಾ.. ಬರೋಬ್ಬರಿ 2 ಕೋಟಿ ರೂ. ಎಂದು ತಿಳಿದುಬಂದಿದೆ. ನುನ್ನಾದ ಮಾವಿನ ಹಣ್ಣು ಮಾರ್ಕೆಟ್‌ ಯಾರ್ಡ್‌ನಲ್ಲಿ ಈ ಘಟನೆ ನಡೆದಿದೆ. 

Scroll to load tweet…

ವಿಜಯವಾಡ ಪೊಲೀಸ್‌ ಕಮೀಷನರ್ ಕಾಂತಿ ರಾಣಾ ಟಾಟಾ, ಡಿಸಿಪಿ ವಿಶಾಲ್‌ ಗುನ್ನಿ ಹಾಗೂ ವಿಶೇಷ ಜಾರಿ ಬ್ಯೂರೋ (Special Enforcement Bureau) ಎಸಿಪಿ ಎಂ. ಸತ್ತಿ ಬಾಬು ಅವರ ನೇತೃತ್ವದಲ್ಲಿ ಸೀಜ್‌ ಮಾಡಲಾಗಿದ್ದ ಮದ್ಯದ ಬಾಟಲ್‌ಗಳನ್ನು ನಾಶಮಾಡಲಾಗಿದೆ. ಈ ಸಂಬಂಧ ಮಾಧ್ಯಮದವರಿಗೆ ಮಾಹಿತಿ ನೀಡಿದ ವಿಜಯವಾಡಾ ಪೊಲೀಸ್‌ ಕಮೀಷನರ್ ಕಾಂತಿ ರಾಣಾ, ಕಳೆದ ಕೆಲ ವರ್ಷಗಳಿಂದ ಸೀಜ್‌ ಮಾಡಿದ 62 ಸಾವಿರಕ್ಕೂ ಹೆಚ್ಚು ಮದ್ಯ ಬಾಟಲ್‌ಗಳನ್ನು ನಾಶ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಇದನ್ನು ಓದಿ: ಹೂಚ್ ದುರಂತ, ಸಾವಿನ ಸಂಖ್ಯೆ 30ಕ್ಕೆ ಏರಿಕೆ, 50 ಮಂದಿ ಆಸ್ಪತ್ರೆ ದಾಖಲು!

ಇತರೆ ರಾಜ್ಯಗಳಿಂದ ಕಳ್ಳ ಸಾಗಣೆ ಮಾಡಲಾದ ಈ ಮದ್ಯ ಬಾಟಲ್‌ಗಳನ್ನು ಒನ್‌ ಟೌನ್‌, ಅಜಿತ್‌ ಸಿಂಗ್ ನಗರ್, ನುನ್ನಾ, ಗವರ್ನರ್‌ಪೇಟೆ, ಸುರ್ಯರಾವ್‌ಪೇಟಾ, ಕೃಷ್ಣ ಲಂಕಾ, ಭವಾನಿಪುರಂ, ಇಬ್ರಾಹಿಂಪಟ್ನಂ ಹಾಗೂ ಮಾಚವರಂನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ. ಆಂಧ್ರ ಪ್ರದೇಶ ಅಬಕಾರಿ ಕಾಯ್ದೆಯ ನಿಯಮಗಳಡಿ ಅಕ್ರಮ ಮದ್ಯವನ್ನು ನಾಶ ಮಾಡಲಾಗಿದೆ ಎಂದೂ ಪೊಲೀಸ್‌ ಕಮೀಷನರ್ ರಾಣಾ ಮಾಹಿತಿ ನೀಡಿದ್ದಾರೆ.

ಇನ್ನು, ಎನ್‌ಟಿಆರ್‌ ಜಿಲ್ಲೆಯ ಮೈಲಾವರಂ, ತಿರುವೂರು ಹಾಗೂ ವಿಸ್ಸನ್ನಪೇಟ್‌ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಮದ್ಯವನ್ನು ತಯಾರು ಮಾಡುತ್ತಿದ್ದವರ ವಿರುದ್ಧ 4 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹಾಗೂ, ಅಕ್ರಮ ಮದ್ಯ, ಗಾಂಜಾ ಹಾಗೂ ಗುಟ್ಕಾನಂತಹ ಅಕ್ರಮ ಪ್ರಕರಣಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದನ್ನು ಮುಮದುವರಿಸಲಿದ್ದಾರೆ ಎಂದೂ ಕಮೀಷನರ್‌ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಮದ್ಯವನ್ನು ಕಳ್ಳ ಸಾಗಣೆ ಮಾಡುವುದು ಜಾಮೀನು ರಹಿತ ಪ್ರಕರಣವಾಗಿದ್ದು, ಈ ಹಿನ್ನೆಲೆ ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬೇಡಿ ಎಂದೂ ಅವರು ಮನವಿ ಮಾಡಿದ್ದಾರೆ. 

ಇದನ್ನೂ ಓದಿ: ಅಪರಾಧ ತಡೆಯಲು ಭಾಂಗ್, ಗಾಂಜಾ ಬಳಕೆ ಉತ್ತೇಜಿಸಿ: ಬಿಜೆಪಿ ಶಾಸಕ

ಜುಲೈ 14 ರಂದೂ 62 ಲಕ್ಷ ರೂ. ಮೌಲ್ಯದ ಬಾಟಲ್‌ಗಳು ನಾಶ 
ಇನ್ನು, ಆಂದ್ರ ಪ್ರದೇಶದಲ್ಲಿ ಈ ರೀತಿ ಅಕ್ರಮ ಮದ್ಯವನ್ನು ರೋಡ್‌ ರೋಲರ್‌ನಡಿ ಇಟ್ಟು ನಾಶ ಮಾಡಿರುವುದು ಇದೇ ಮೊದಲೇನಲ್ಲ. ಜುಲೈ 14 ರಂದು ಆಂಧ್ರದ ಬಪಾಟ್ಲಾ ಪೊಲೀಸರು ಜಿಲ್ಲಾ ಪೊಲೀಸರು ಹಾಗೂ ಅಧಿಕಾರಿಗಳು ವಶಪಡಿಸಿಕೊಂಡಿದ್ದ 62 ಲಕ್ಷ ರೂ. ಮೌಲ್ಯದ 33,632 ಮದ್ಯದ ಬಾಟಲ್‌ಗಳನ್ನು ಅಡ್ಡಾಂಕಿ ಬಳಿಯ ನಾಗುಲಾಪಲೇಂ ರಸ್ತೆಯಲ್ಲಿ ರೋಡ್‌ ರೋಲರ್‌ ಸಹಾಯದಿಂದ ನಾಶ ಮಾಡಿದ್ದರು. 33,632 ಮದ್ಯದ ಬಾಟಲ್‌ಗಳನ್ನು 1,824 ಪ್ರಕರಣಗಳಡಿ ವಶಪಡಿಸಿಕೊಳ್ಳಲಾಗಿತ್ತು. ವಿವಿಧ ರೀತಿಯ ಮದ್ಯದ ಬ್ರ್ಯಾಂಡ್‌ಗಳ ಬಾಟಲ್‌ಗಳನ್ನು ಜುಲೈ 14 ರಂದು ನಾಶ ಮಾಡಲಾಗಿತ್ತು. 

2020 ರಲ್ಲಿ ಸಹ ಆಂಧ್ರ ಪ್ರದೇಶದ ಮಚಿಲಿಪಟ್ಟಂನ ಪೊಲೀಸ್‌ ಪರೇಡ್‌ ಮೈದಾನದಲ್ಲಿ 72 ಲಕ್ಷ ರೂ. ಮೌಲ್ಯದ ಸಾವಿರಾರು ಮದ್ಯದ ಬಾಟಲ್‌ಗಳನ್ನು ರೋಡ್‌ ರೋಲರ್‌ನಡಿ ಇಟ್ಟು ಕೃಷ್ಣ ಜಿಲ್ಲಾ ಪೊಲೀಸರು ನಾಶ ಮಾಡಿದ್ದರು ಎಂಬುದನ್ನು ಸಹ ನಾವಿಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.