ಉಚಿತ, ಉಚಿತ ಕೊಡ್ತಾ ಇದ್ರೆ ಶ್ರೀಲಂಕಾ ಆಗೋದು ಖಚಿತ: ಮೋದಿ ಎದುರು ಅಧಿಕಾರಿಗಳ ಕಳವಳ
ಹಲವಾರು ರಾಜ್ಯಗಳು ಹೀಗೇ ಉಚಿತ ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದ್ದರೆ ಆ ರಾಜ್ಯಗಳು ಕೂಡಾ ಶ್ರೀಲಂಕಾ ಮಾದರಿಯಲ್ಲಿ ಆರ್ಥಿಕ ಅದಃಪತನಕ್ಕೆ ಇಳಿಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆಯಲ್ಲಿ ಕೆಲ ಹಿರಿಯ ಅಧಿಕಾರಿಗಳ ಕಳವಳ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಏ.05): ಹಲವಾರು ರಾಜ್ಯಗಳು ಹೀಗೇ ಉಚಿತ ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದ್ದರೆ ಆ ರಾಜ್ಯಗಳು ಕೂಡಾ ಶ್ರೀಲಂಕಾ (Srilanka) ಮಾದರಿಯಲ್ಲಿ ಆರ್ಥಿಕ ಅದಃಪತನಕ್ಕೆ ಇಳಿಬಹುದು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗಿನ ಸಭೆಯಲ್ಲಿ ಕೆಲ ಹಿರಿಯ ಅಧಿಕಾರಿಗಳ ಕಳವಳ ವ್ಯಕ್ತಪಡಿಸಿದ್ದಾರೆ. ಭಾನುವಾರ ಪ್ರಧಾನಿ ಮೋದಿ ತಮ್ಮ ಅಧಿಕೃತ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಕಾರ‍್ಯದರ್ಶಿಗಳೊಂದಿಗೆ ಸುದೀರ್ಘ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದರು.
ಈ ವೇಳೆ ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳಲ್ಲಿನ ಲೋಪದೋಷಗಳನ್ನು ಸೂಚಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಮಾತನಾಡಿ, ಇತ್ತೀಚೆಗೆ ಚುನಾವಣೆಗೆ ಒಳಪಟ್ಟರಾಜ್ಯಗಳೂ ಸೇರಿ ಕೆಲವು ರಾಜ್ಯಗಳ ಉಚಿತ ಯೋಜನೆಗಳು ಆರ್ಥಿಕ ಸುಸ್ಥಿರತೆಯನ್ನು ಕಾಯ್ದುಕೊಳ್ಳುವಂಥವಲ್ಲ. ಇವು ಭಾರತವನ್ನು ಶ್ರೀಲಂಕಾ ಹಾದಿಗೆ ಕೊಂಡೊಯ್ಯಬಹುದು ಎಂದು ದೂರು ಹೇಳಿದರು. ಎಲ್ಲಾ ಸಲಹೆಗಳನ್ನು ಪ್ರಧಾನಿ ಮೋದಿ ಅವರು ಮುಕ್ತ ಮನಸ್ಸಿನಿಂದ ಆಲಿಸಿದರು ಎಂದು ಮೂಲಗಳು ತಿಳಿಸಿವೆ.
ಪಂಜಾಬ್ ಗೆದ್ದ ಆಪ್ ಕಣ್ಣು ಈಗ ಮೋದಿ ತವರು ನಾಡಿನ ಮೇಲೆ: ಕೇಜ್ರೀವಾಲ್ ಬೃಹತ್ ರೋಡ್ ಶೋ
ಶ್ರೀಲಂಕಾ ಸದ್ಯ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇಂಧನ, ಅಡುಗೆ ಅನಿಲ, ವಿದ್ಯುತ್ ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪ್ರಧಾನಮಂತ್ರಿಗಳ ಪ್ರಧಾನ ಕಾರ‍್ಯದರ್ಶಿ ಪಿ.ಕೆ.ಮಿಶ್ರಾ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಸೇರಿದಂತೆ ಕೇಂದ್ರ ಸರ್ಕಾರದ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಸತತ ಎರಡನೇ ಬಾರಿ ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ ರದ್ದು: ವಿವಿಧ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಏಪ್ರಿಲ್ 5 ರಂದು ಕರ್ನಾಟಕಕ್ಕೆ ಆಗಮಿಸಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ರದ್ದಾಗಿದೆ. ಸತತ ಎರಡನೇ ಬಾರಿ ಪ್ರಧಾನಿ ರಾಜ್ಯ ಪ್ರವಾಸ ರದ್ದಾಗಿದೆ. ಈ ಕುರಿತು ಸಿಎಂ ಕಚೇರಿಗೆ ಪ್ರಧಾನಿಗಳ ಕಚೇರಿಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೋದಿ ಪ್ರವಾಸ ಕುರಿತು ಮಾಹಿತಿ ಬಹಿರಂಗ ಪಡಿಸಿದ್ದರು. ಏಪ್ರಿಲ್ 5 ರಂದು ಪ್ರಧಾನಿ ಭೇಟಿ ನೀಡುವ ಸಾಧ್ಯತೆ ಇದೆ ಎಂದಿದ್ದರು.
ಇದೇ ವೇಳೆ ಏಪ್ರಿಲ್ 1 ರಂದು ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದರು. ಇದರಲ್ಲಿ ಪ್ರಧಾನಿ ಮೋದಿ ಪ್ರವಾಸ ರದ್ದಾಗಿದೆ ಎಂದು ಸಿಎಂ ಕಚೇರಿ ಹೇಳಿದೆ. ಮಾರ್ಚ್ ತಿಂಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸಕ್ಕೆ ದಿನಾಂಕ ನಿಗದಿಯಾಗಿತ್ತು. ಹಲವು ಕಾರ್ಯಕ್ರಮಗಳ ನಿಮಿತ್ತ ಕರ್ನಾಟಕ ಪ್ರವಾಸ ಮಾಡಲು ಮೋದಿ ಸಜ್ಜಾಗಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ರಾಜ್ಯ ಪ್ರವಾಸ ರದ್ದಾಗಿತ್ತು. ಇದೀಗ ಸತತ ಎರಡನೇ ಬಾರಿ ಪ್ರವಾಸ ರದ್ದಾಗಿದೆ. ಮೋದಿ ರಾಜ್ಯ ಪ್ರವಾಸ ರದ್ದಾಗಲು ಸ್ಪಷ್ಟ ಕಾರಣ ಬಹಿರಂಗವಾಗಿಲ್ಲ.
ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲು ರದ್ದಾದರೆ ದಂಗೆ ಆಗುತ್ತೆ: ಕೇಂದ್ರದ ವಾದ
ಹೊಳಲೂರು ಗ್ರಾಮಕ್ಕೆ ಮೋದಿ ಭೇಟಿ ರದ್ದು?: ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಹಿನ್ನೆಲೆಯಲ್ಲಿ ಏ.24ರಂದು ಶಿವಮೊಗ್ಗ ಜಿಲ್ಲೆಯ ಹೊಳಲೂರು ಗ್ರಾಪಂಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಕಾರ್ಯಕ್ರಮ ಬಹುತೇಕ ರದ್ದಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಅಧಿಕೃತವಾಗಿ ಸರ್ಕಾರ ಪ್ರಕಟಿಸದೇ ಇದ್ದರೂ, ಅಂದು ಪ್ರಧಾನಿಗಳು ಕಾಶ್ಮೀರಕ್ಕೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹೀಗಾಗಿ ರಾಜ್ಯಕ್ಕೆ ಬರುವ ಕಾರ್ಯಕ್ರಮ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಭೇಟಿ ರದ್ದು ಕುರಿತು ಪ್ರಧಾನಮಂತ್ರಿ ಕಾರ್ಯಾಲಯದಿಂದ ಇಲ್ಲಿನ ಜಿ.ಪಂ.ಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ ಎಂದು ಜಿ.ಪಂ. ಸಿಇಓ ಎಂ.ಎಲ್. ವೈಶಾಲಿ ತಿಳಿಸಿದ್ದಾರೆ. ಆದರೆ ತಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಅಂದು ಪ್ರಧಾನಿಗಳು ಕಾಶ್ಮೀರದ ಪ್ರವಾಸದ ಪ್ರೋಗ್ರಾಂ ಹಾಕಿಕೊಂಡಿದ್ದಾರೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.