ಭಾರತದ ರಕ್ಷಣಾ ಸಂಶೋಧನಾ ಸಂಸ್ಥೆ DRDO ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ವೇಗವಾಗಿ ಸಾಗುತ್ತಿದೆ. ಬ್ರಹ್ಮೋಸ್ ವ್ಯಾಪ್ತಿ ಹೆಚ್ಚಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡಲಾಗುತ್ತಿದೆ.

ನವದೆಹಲಿ: ಭಾರತದ ಪ್ರಮುಖ ರಕ್ಷಣಾ ಸಂಶೋಧನಾ ಸಂಸ್ಥೆ DRDO (Defence Research and Development Organisation) ದೇಶದ ಸೇನೆಯ ಸಾಮರ್ಥ್ಯವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತದೆ. ದೇಶದ ಸೇನೆಗೆ ಆಧುನಿಕ ಮತ್ತು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಒದಗಿಸುವ ಕೆಲಸವನ್ನು DRDO ಮಾಡುತ್ತದೆ. ಸುಧಾರಿತ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಹೈಪರ್ಸಾನಿಕ್ ಕ್ಷಿಪಣಿಗಳು, ಹೈ-ಎನರ್ಜಿ ಲೇಸರ್‌ಗಳು, ಸ್ಟೆಲ್ತ್ ಫೈಟರ್ ಜೆಟ್‌ಗಳು, ಡ್ರೋನ್ ವಿರೋಧಿ ತಂತ್ರಜ್ಞಾನ ಮತ್ತು ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಡಿಆರ್‌ಡಿಒ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುತ್ತಿರುತ್ತದೆ.

ಮುಂದಿನ ಪೀಳಿಗೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವತ್ತ ಭಾರತ ಹೇಗೆ ವೇಗವಾಗಿ ಸಾಗುತ್ತಿದೆ ಎಂಬುದರ ಬಗ್ಗೆ ಡಿಆರ್‌ಡಿಒ ಮುಖ್ಯಸ್ಥ ಡಾ. ಸಮೀರ್ ವಿ ಕಾಮತ್ ಮಾಹಿತಿ ನೀಡಿದ್ದಾರೆ. ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಡಾ. ಸಮೀರ್ ವಿ ಕಾಮತ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಬ್ರಹ್ಮೋಸ್ ವ್ಯಾಪ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ

ಸದ್ಯ ಬ್ರಹ್ಮೋಸ್-NG (ನೆಕ್ಸ್ಟ್ ಜನರೇಷನ್) ಕ್ರೂಸ್ ಕ್ಷಿಪಣಿಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇದು ಈಗಾಗಲೇ ಲಭ್ಯವಿರುವ ಬ್ರಹ್ಮೋಸ್ ಕ್ಷಿಪಣಿಗಿಂತ ಹಗುರ ಮತ್ತು ಗಾತ್ರದಲ್ಲಿ ಚಿಕ್ಕದಾಗಿರಲಿದೆ. ವಿವಿಧ ಪ್ರಕಾರದ ಯುದ್ಧ ವಿಮಾನಗಳಲ್ಲಿ ಅಳವಡಿಸುವ ಗುರಿಯನ್ನು ಹೊಂದಿದೆ. ಸದ್ಯ ಬ್ರಹ್ಮೋಸ್ ಅನ್ನು Su-30MKI ನಂತಹ ಭಾರೀ ಜೆಟ್‌ಗಳಲ್ಲಿ ಮಾತ್ರ ಅಳವಡಿಸಬಹುದಾಗಿದೆ. ಡಿಆರ್‌ಡಿಒ ಬ್ರಹ್ಮೋಸ್ ವ್ಯಾಪ್ತಿಯನ್ನು ಹೆಚ್ಚಿಸುವ ಮತ್ತು ಗಾತ್ರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಸಮೀರ್ ವಿ. ಕಾಮತ್ ಹೇಳುತ್ತಾರೆ.

ಎರಡು ಹೈಪರ್ಸಾನಿಕ್ ಕ್ಷಿಪಣಿ

ಇದರೊಂದಿಗೆ ಎರಡು ಹೈಪರ್ಸಾನಿಕ್ ಕ್ಷಿಪಣಿಗಳ ಕೆಲಸ ನಡೆಯುತ್ತಿರುವ ವಿಷಯನ್ನು ಸಹ ಕಾಮತ್ ಹಂಚಿಕೊಂಡರು. ಈ ಎರಡರ ಪೈಕಿ ಹೈಪರ್ಸಾನಿಕ್ ಗ್ಲೈಡ್ ವೆಹಿಕಲ್ (HGV) ಒಂದಾಗಿದ್ದು, ಅಂತಿಮ ಹಂತದ ಪರೀಕ್ಷೆಗಳು ನಡೆಯುತ್ತಿವೆ. ಮುಂದಿನ ಎರಡ್ಮೂರು ವರ್ಷಗಳಲ್ಲಿ ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದೆ. ಮತ್ತೊಂದೆಡೆ 1000 ಸೆಕೆಂಡು ಕಾರ್ಯನಿರ್ವಹಿಸುವ ಸ್ಕ್ರಾಮ್‌ಜೆಟ್ ಎಂಜಿನ್ ತಂತ್ರಜ್ಞಾನದಲ್ಲಿಯೂ ಡಿಆರ್‌ಡಿಒ ಪ್ರಗತಿಯನ್ನು ಸಾಧಿಸುತ್ತಿದೆ. ಸರ್ಕಾರ ಅನುಮೋದನೆ ನೀಡಿದ್ರೆ ಮುಂದಿನ 5-6 ವರ್ಷಗಳಲ್ಲಿ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ ಸಿದ್ದವಾಗಬಹುದು ಎಂದು ಡಾ. ಸಮೀರ್ ವಿ ಕಾಮತ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಏರ್ ಟು ಏರ್ ಮಿಸೈಲ್

ವಾಯುಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಲು ನಿಟ್ಟಿನಲ್ಲಿ ಡಿಆರ್‌ಡಿಒ ಏರ್ ಟು ಏರ್ ಚಿಮ್ಮುವ 'ಅಸ್ಟ್ರಾ Mk-2 ಮತ್ತು Mk-3' ಕ್ಷಿಪಣಿಗಳ ಮೇಲೆ ಕೆಲಸ ಮಾಡುತ್ತಿದೆ. ಭೂಮಿಯಿಂದ ಲಾಂಚ್ ಮಾಡುವ ಕ್ಷಿಪಣಿಗಳಾದ 'ರುದ್ರಮ್-2', 'ರುದ್ರಮ್-3' ಮತ್ತು 'ರುದ್ರಮ್-4' ಸೇನಾಪಡೆಯ ಶಕ್ತಿಯನ್ನು ಹೆಚ್ಚಿಸುತ್ತಿವೆ. ಎದುರಾಳಿಯ ಡ್ರೋನ್ ಎದುರಿಸಲು DO ಲೇಸರ್ ಮತ್ತು ಹೈ ಪವರ್ ಮೈಕ್ರೋವೇವ್ ತಂತ್ರಜ್ಞಾನ ಹೊಂದಿರುವ ನಿರ್ದೇಶಿತ ಇಂಧನ ಶಸ್ತ್ರಾಸ್ತ್ರ ವ್ಯವಸ್ಥೆಯ ಮೇಲೆಯೂ ಕೆಲಸ ಮಾಡುತ್ತಿದೆ. ವಾಯು ರಕ್ಷಣಾ ಜಾಲವನ್ನು ಬಲಪಡಿಸಲು 'ಕುಶಾ' ಹೆಸರಿನ ಲಾಂಗ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಮ್‌ನ ಅಭಿವೃದ್ದಿ ಕೆಲಸವೂ ವೇಗದಿಂದ ನಡೆಯುತ್ತಿದೆ.

ಸ್ವದೇಶಿ ನಿರ್ಮಿತ ಸ್ಟೆಲ್ತ್ ಫೈಟರ್ ಜೆಟ್

ಇನ್ನು ಸ್ವದೇಶಿ ನಿರ್ಮಿತ ಸ್ಟೆಲ್ತ್ ಫೈಟರ್ ಜೆಟ್, AMCAನ್ನು (ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್) ಹೊಸ ಪಾಲುದಾರಿಕೆ ಮಾಡೆಲ್‌ನಲ್ಲಿ ನಿರ್ಮಿಸಲಾಗುತ್ತಿದೆ. ಈ ಯೋಜನೆಯಲ್ಲಿ HAL ಜೊತೆ ವಿವಿಧ ಖಾಸಗಿ ಕಂಪನಿಗಳು ಸೇರ್ಪಡೆಯಾಗಲಿದ್ದು, ಇದೊಂದು ಪಾಲುದಾರಿಕೆ ಪ್ರಕ್ರಿಯೆಯಾಗಿರಲಿದೆ. ಇತ್ತೀಚೆಗಷ್ಟೇ ADA ಇತ್ತೀಚೆಗೆ EOI (Expression of Interest) ಜಾರಿ ಮಾಡಿದೆ. ಭೂಮಿಯಿಂದ ಲಾಂಚ್ ಮಾಡಲಾಗುವ ಲೈಟ್ ಟ್ಯಾಂಕ್ 'ಜೋರಾವ್' ಬಹುತೇಕ ಪೂರ್ಣಗೊಂಡಿದ್ದು, ಲಡಾಖ್ ಮತ್ತು ಸಿಕ್ಕಿಂನಂತಹ ಎತ್ತರದ ಪ್ರದೇಶಗಳಿಗಾಗಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಜೋರಾವ್ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿದೆ. ಇವುಗಳನ್ನು ಕ್ಷೇತ್ರಗಳಿಗೆ ರವಾನಿಸಲಾಗುತ್ತದೆ. ಇಂದು ಡಿಆರ್‌ಡಿಒದ ಕಾರ್ಯತಂತ್ರ ಸಂಪೂರ್ಣವಾಗಿ ಬದಲಾಗಿದೆ. ನಮ್ಮ ಎಲ್ಲಾ ಶಸ್ತ್ರಾಸ್ತ್ರಗಳು ಎಲೆಕ್ಟ್ರಾನಿಕ್ ನಿರ್ಬಂಧಿತ ಪರಿಸರದಲ್ಲಿ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ, ಸಂಪೂರ್ಣ ಸ್ವಾಯತ್ತ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ ಎಂದು ಡಾ.ಕಾಮತ್ ಹೇಳುತ್ತಾರೆ.