ನವದೆಹಲಿ  (ಮೇ. 09): ಕೊರೋನಾ ವೈರಸ್‌ ಶಿಕ್ಷಣ ವ್ಯವಸ್ಥೆ ಮೇಲೂ ಕರಿನೆರಳು ಬೀರಿದೆ. ಈಗಾಗಲೇ ಅನೇಕ ಪರೀಕ್ಷೆಗಳು ರದ್ದಾಗಿವೆ ಅಥವಾ ಮುಂದೂಡಿಕೆಯಾಗಿವೆ. ಜೂನ್‌ನಿಂದ ಆರಂಭವಾಗಲಿರುವ ಮುಂಬರುವ ಶೈಕ್ಷಣಿಕ ವರ್ಷದ ಮೇಲೂ ವೈರಾಣುವಿನ ಛಾಯೆ ಮೂಡುವ ಅತಂಕ ಎದುರಾಗಿದೆ.

ಇದಕ್ಕೆಂದೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವೈರಾಣು ಹರಡುವಿಕೆ ತಡೆಗೆ ಯೋಜನೆ ರೂಪಿಸುವ ಬಗ್ಗೆ ಚಿಂತನೆ ನಡೆಸಿದೆ. ಅದು ‘ಸಮ-ಬೆಸ’ ವ್ಯವಸ್ಥೆ.

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ಅಂದರೆ ಒಂದು ದಿನಕ್ಕೆ ಕೇವಲ ಶೇ.50 ರಷ್ಟುವಿದ್ಯಾರ್ಥಿಗಳು ಮಾತ್ರ ಶಾಲೆಗೆ ಬರುವಂತೆ ನೋಡಿಕೊಳ್ಳುವುದು. ಈ ದಿನ ಶಾಲೆಗೆ ಹಾಜರಾದ ಮಕ್ಕಳು ಮರುದಿನ ಮನೆಯಲ್ಲಿರುತ್ತಾರೆ. ಈ ದಿನ ಮನೆಯಲ್ಲಿದ್ದ ಮಕ್ಕಳು ಮರುದಿನ ಶಾಲೆಗೆ ಬರುತ್ತಾರೆ. ಇದರಿಂದ ಶಾಲೆಯಲ್ಲಿ ಜನಸಂದಣಿ ತಪ್ಪಿದಂತಾಗಿ ಶಾಲಾ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಂತಾಗುತ್ತದೆ ಎಂಬುದು ಸಚಿವಾಲಯದ ಚಿಂತನೆ. ಈಗಾಗಲೇ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಪರಿಷತ್ತು) ಜತೆ ಈ ಬಗ್ಗೆ ಸಚಿವಾಲಯ ಚರ್ಚೆ ನಡೆಸಿದೆ.

ಆದರೆ ಸಮ-ಬೆಸ ವ್ಯವಸ್ಥೆಯನ್ನು ದಿನದ ಬದಲು ವಾರದ ಆಧಾರದಲ್ಲಿ ಮಾಡಬೇಕು ಎಂದೂ ಸರ್ಕಾರದ ಮುಂದೆ ಇರುವ ಇನ್ನೊಂದು ಚಿಂತನೆ. ಅಂದರೆ ಒಂದು ವಾರ ಶೇ.50 ಮಕ್ಕಳು ಮನೆಯಲ್ಲಿದ್ದರೆ, ಉಳಿದ ಮಕ್ಕಳು ಆ ವಾರ ಶಾಲೆಗೆ ಬರಬೇಕು. ಮನೆಯಲ್ಲಿದ್ದ ಮಕ್ಕಳು ಮುಂದಿನ ವಾರ ಶಾಲೆಗೆ ಬರಬೇಕು ಎಂಬದೂ ಆ ಚಿಂತನೆ.

ಶಾಲಾ ಕಾಲೇಜುಗಳನ್ನು ಯಾವಾಗ ಆರಂಭಿಸಬೇಕು ಎಂದು ಘೋಷಿಸುವ ಸಂದರ್ಭದಲ್ಲಿ ‘ಸಮ-ಬೆಸ’ ವ್ಯವಸ್ಥೆ ಬಗ್ಗೆ ಕೂಡ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ರೀತಿ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ಗಮನ ಇಡಲೂ ಅನುವಾಗುತ್ತದೆ ಎಂಬುದು ಸರ್ಕಾರದ ಅನಿಸಿಕೆ. ಅಲ್ಲದೆ, ಆನ್‌ಲೈನ್‌ ಮೂಲಕ ಹಾಗೂ ಟೀವಿ ಮೂಲಕ ಕಲಿಕೆಗೂ ಎನ್‌ಸಿಇಆರ್‌ಟಿ ಯೋಜನೆ ಸಿದ್ಧಪಡಿಸುತ್ತಿದೆ.