* ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮಹಾರಾ‍ಷ್ಟ್ರ ರಾಜಕೀಯ ಹೈಡ್ರಾಮಾ* ಶಿಂಧೆ ಸೇರಿ ಹದಿನಾರು ಶಾಸಕರ ಅನರ್ಹತೆ ವಿಚಾರ* ಸರ್ಕಾರ, ಡೆಪ್ಯೂಟಿ ಸ್ಪೀಕರ್‌ಗೆ ನೋಟಿಸ್‌ ಕೊಟ್ಟ ಸುಪ್ರೀಂ 

ಮುಂಬೈ(ಜೂ.27): ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಗೆ ರೋಚಕ ತಿರುವು ಸಿಕ್ಕಿದೆ. ಹೌದು ಕಳೆದೊಂದು ವಾರದಿಂದ ನಡೆಯುತ್ತಿದ್ದ ಈ ಬಿಕ್ಕಟ್ಟಿನ ಭಾಗವಾಗಿ ರೆಬೆಲ್ ನಾಯಕ ಶಿಂಧೆ ಸುಪ್ರೀಂ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಸರ್ಕಾರ, ಶಿವಸೇನೆ ಶಾಸಕಾಂಗ ನಾಯಕ, ಎನ್‌ಸಿಪಿ ಮುಖ್ಯಸ್ಥ ಹಾಗೂ ಡೆಪ್ಯೂಟಿ ಸ್ಪೀಕರ್‌ಗೆ ನೋಟಿಸ್‌ ನೀಡಿದೆ. ಈ ಮೂಲಕ ಮುಂದಿನ ವಿಚಾರಣೆ ಜುಲೈ 11ಕ್ಕೆ ಮುಂದೂಡಲಾಗಿದೆ.

ಮಹಾರಾಷ್ಟ್ರ ವಿಧಾನಸಭೆಯ ಉಪಸಭಾಪತಿ ನರಹರಿ ಝಿರ್ವಾಲ್ ಶಿಂಧೆ ಸೇರಿ 16 ರೆಬೆಲ್ ಶಾಸಕರಿಗೆ ಅನರ್ಹಗೊಳಿಸುವ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ಶಾಸಕರು ಈ ನೋಟಿಸ್‌ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಡೆಪ್ಯೂಟಿ ಸ್ಪೀಕರ್‌ಗೆ ನೋಟಿಸ್‌ ನೀಡಿ ಮುಂದಿನ ಮೂರು ದಿನ ಹಾಗೂ ಶಿಬವಸೇನೆ ಸರ್ಕಾರಕ್ಕೆ ಮುಂದಿನ ಐದು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. . 

ಮತ್ತೊಂದೆಡೆ, ಮಹಾರಾಷ್ಟ್ರದ ರಸ್ತೆಗಳಲ್ಲಿ ಶಿವಸೇನೆ ಕಾರ್ಯಕರ್ತರು ಮತ್ತು ಶಿಂಧೆ ಬೆಂಬಲಿಗರ ಕದನವೂ ಮುಂದುವರೆದಿದೆ ಇಂದು ಥಾಣೆಯಲ್ಲಿ ಶಿಂಧೆ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದು ಶಿವಸೇನೆಯ ಬಂಡಾಯ ನಾಯಕರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದ್ದಾರೆ.

ಮತ್ತೊಂದೆಡೆ ಸಭೆಗಳ ಸುತ್ತು ಕೂಡ ನಡೆಯುತ್ತಿದೆ. ಮಧ್ಯಾಹ್ನ ಏಕನಾಥ್ ಶಿಂಧೆ ಬಂಡಾಯ ಶಾಸಕರ ಜೊತೆ ಸಭೆ ನಡೆಸಲಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತೊಮ್ಮೆ ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ.