ಕಡೇ ಗಳಿಗೆಯಲ್ಲಿ ಶತಾಬ್ದಿ ಬಿಜೆಪಿ ಸೇರ್ಪಡೆಗೆ ತಡೆ| ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದ ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಶತಾಬ್ದಿ ರಾಯ್| ನಾನು ಟಿಎಂಸಿಯಲ್ಲೇ ಉಳಿಯಲಿದ್ದೇನೆ ಎಂದು ಶುಕ್ರವಾರ ರಾತ್ರಿ ರಾಯ್‌ ಸ್ಪಷ್ಟನೆ

ಕೋಲ್ಕತಾ(ಜ.16): ಶನಿವಾರ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದ ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಶತಾಬ್ದಿ ರಾಯ್‌, ಕೊನೆಯ ಗಳಿಗೆಯಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

Add Asianetnews Kannada as a Preferred SourcegooglePreferred

ನಾನು ಶನಿವಾರ ದೆಹಲಿಗೆ ತೆರಳುತ್ತಿಲ್ಲ, ನಾನು ಟಿಎಂಸಿಯಲ್ಲೇ ಉಳಿಯಲಿದ್ದೇನೆ ಎಂದು ಶುಕ್ರವಾರ ರಾತ್ರಿ ರಾಯ್‌ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಹೇಳಿಕೆ ನೀಡಿದ್ದ ಶತಾಬ್ದಿ ‘ ನಾನು ಮೂರು ಬಾರಿಯ ಸಂಸದೆ. ಆದರೆ ನನ್ನ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ನನಗೆ ಮಾಹಿತಿಯನ್ನೇ ನೀಡುತ್ತಿಲ್ಲ. ನನ್ನನ್ನು ಕಡೆಗಣಿಸಲಾಗುತ್ತಿದೆ. ಇದನ್ನು ನೋಡಿಕೊಂಡು ನಾನು ಸುಮ್ಮನೆ ಕೂರಲಾಗದು. ಶನಿವಾರ ದೆಹಲಿಗೆ ತೆರಳಿ ಅಮಿತ್‌ ಶಾ ಭೇಟಿ ಮಾಡುವೆ’ ಎಂದಿದ್ದರು.

ಆದರೆ ಈ ಹೇಳಿಕೆ ಬೆನ್ನಲ್ಲೇ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ, ಶತಾಬ್ದಿ ಅವರೊಂದಿಗೆ ಮಾತುಕತೆ ನಡೆಸಿ, ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ‘ನನ್ನ ಅಸಮಾಧಾನ ಕುರಿತು ಅಭಿಷೇಕ್‌ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ಪರಿಹಾರದ ಭರವಸೆ ನೀಡಿದ್ದಾರೆ. ದಿಲ್ಲಿ ಪ್ರವಾಸ ರದ್ದಾಗಿದೆ’ ಎಂದು ಶತಾಬ್ದಿ ಹೇಳಿದ್ದಾರೆ.