Asianet Suvarna News Asianet Suvarna News

Chandigarh Mayor: ಚುನಾವಣೆಯಲ್ಲಿ ಆಪ್‌ ಗೆದ್ದರೂ ಮೇಯರ್‌ ಹುದ್ದೆ ಬಿಜೆಪಿ ಪಾಲು

ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸಿದ್ದರೂ, ಮೇಯರ್‌ ಸ್ಥಾನ ಪಡೆಯುವಲ್ಲಿ ಸೋತಿದೆ. ಬಿಜೆಪಿಯ ಸರಬ್ಜೀತ್‌ ಕೌರ್‌ ಕೇವಲ 1 ಮತದ ಅಂತರದಲ್ಲಿ ಆಪ್‌ನ ಅಂಜು ಕತ್ಯಾಲ್‌ ಅವರನ್ನು ಸೋಲಿಸಿ ಮೇಯರ್‌ ಆಗಿದ್ದಾರೆ.

Sarabjit is new Mayor as BJP gets ahead of AAP by one vote gvd
Author
Bangalore, First Published Jan 9, 2022, 8:52 AM IST

ಚಂಡೀಗಢ (ಜ. 09): ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ (AAP) ಅತಿ ಹೆಚ್ಚು ಸ್ಥಾನ ಗಳಿಸಿದ್ದರೂ, ಮೇಯರ್‌ ಸ್ಥಾನ ಪಡೆಯುವಲ್ಲಿ ಸೋತಿದೆ. ಬಿಜೆಪಿಯ ಸರಬ್ಜೀತ್‌ ಕೌರ್‌ ಕೇವಲ 1 ಮತದ ಅಂತರದಲ್ಲಿ ಆಪ್‌ನ ಅಂಜು ಕತ್ಯಾಲ್‌ ಅವರನ್ನು ಸೋಲಿಸಿ ಮೇಯರ್‌ ಆಗಿದ್ದಾರೆ. 

ಸರಬ್ಜೀತ್‌ ಕೌರ್‌ 14 ಮತಗಳನ್ನು ಪಡೆದರೆ, ಕತ್ಯಾಲ್‌ 13 ಮತಗಳನ್ನು ಪಡೆದರು. 1 ಮತವನ್ನು ಅಸಿಂಧು ಎಂದು ಗುರುತಿಸಲಾಗಿದೆ. ಪಾಲಿಕೆಯ 35 ಸ್ಥಾನಗಳಲ್ಲಿ ಆಪ್‌ 14, ಬಿಜೆಪಿ 12 ಸ್ಥಾನಗಳನ್ನು ಗೆದ್ದಿತ್ತು. ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ 7 ಮತ್ತು ಶಿರೋಮಣಿ ಅಕಾಲಿ ದಳದ ಓರ್ವ ಸದಸ್ಯ ಭಾಗವಹಿಸಿರಲಿಲ್ಲ. ಹೀಗಾಗಿ 28 ಸದಸ್ಯರು ಮಾತ್ರ ಮತ ಹಾಕಿದರು.

ಚುನಾವಣಾ ಫಲಿತಾಂಶದ ಪ್ರಕಟವಾದ ನಂತರ ಕಾಂಗ್ರೆಸ್‌ನ ಹಪ್ರೀರ್ತ್ ಕೌರ್‌ ಬಿಜೆಪಿಗೆ ಸೇರಿದ್ದರು. ಇದು ಬಿಜೆಪಿಗೆ ಪ್ಲಸ್‌ ಪಾಯಿಂಟ್‌ ಆಯಿತು. ಇನ್ನೊಬ್ಬ ಸದಸ್ಯ ಕೂಡ ಬಿಜೆಪಿಗೆ ಮತ ಹಾಕಿದ್ದರಿಂದ ಬಿಜೆಪಿ ಜಯಿಸಿದೆ. ಆದರೆ 14 ಸದಸ್ಯರ ಪೈಕಿ ಒಬ್ಬ ಸದಸ್ಯನ ಮತ ಅಸಿಂಧುವಾದ ಕಾರಣ ಆಪ್‌ ಸೋತಿದೆ. ಹೊಸ ಮೇಯರ್‌ ಘೋಷಣೆಯಾದ ನಂತರ ಆಮ್‌ ಆದ್ಮಿ ಪಕ್ಷದ ಕೌನ್ಸಿಲರ್‌ಗಳು ಕೋಲಾಹಲವೆಬ್ಬಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

IIT Madras Analysis: ಫೆಬ್ರವರಿ 1ರಿಂದ 15ರೊಳಗೆ ಕೋವಿಡ್‌ ಪರಾಕಾಷ್ಠೆ

ಮೊದಲ ಚುನಾವಣೆಯಲ್ಲೇ ಆಪ್‌ ಜಯಭೇರಿ: ಚಂಡೀಗಢ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಆಮ್‌ ಆದ್ಮಿ ಪಕ್ಷ ನಿರೀಕ್ಷೆಗೂ ಮೀರಿ ಜಯ ಸಾಧಿಸಿದೆ. ಪಾಲಿಕೆಯ 35 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, 35ರ ಪೈಕಿ 14 ಕ್ಷೇತ್ರಗಳಲ್ಲಿ ಆಪ್‌ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ 8 ಸ್ಥಾನ ನಷ್ಟಅನುಭವಿಸುವ ಮೂಲಕ 12 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಯಾವುದೇ ಪಕ್ಷಕ್ಕೆ ಸ್ಪಷ್ಟಬಹುಮತ ಸಿಗದ ಕಾರಣ ಚಂಡೀಗಢ ಪಾಲಿಕೆ ಅತಂತ್ರವಾಗಿದೆ.

ಮುಂದಿನ ವರ್ಷದ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರದ ಗದ್ದುಗೆಗೇರಲಿದೆ ಎಂಬ ಚುನಾವಣೆ ಪೂರ್ವ ಸಮೀಕ್ಷೆಗಳ ಭವಿಷ್ಯದ ಬೆನ್ನಲ್ಲೇ, ಪಂಜಾಬ್‌ ಮತ್ತು ಹರ್ಯಾಣದ ಜಂಟಿ ರಾಜಧಾನಿ ಚಂಡೀಗಢ ಪಾಲಿಕೆ ಚುನಾವಣೆಯಲ್ಲಿ ಆಪ್‌ ಜಯಗಳಿಸಿರುವುದು ರಾಜಕೀಯ ಪಂಡಿತರಲ್ಲಿ ಅಚ್ಚರಿ ಮೂಡಿಸಿದೆ. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಈ ಬಾರಿ 4 ಸ್ಥಾನ ಲಾಭವಾಗಿದ್ದು, ಒಟ್ಟಾರೆ 8 ಸ್ಥಾನ ಸಿಕ್ಕಿದೆ. ಶಿರೋಮಣಿ ಅಕಾಲಿ ದಳ ಕೇವಲ 1 ಸ್ಥಾನ ಪಡೆಯುವಲ್ಲಿ ಶಕ್ತವಾಗಿದೆ.

Assembly Elections 2022: ಪಂಚರಾಜ್ಯ ಚುನಾವಣೆ: 4 ಕಡೆ ಬಿಜೆಪಿಗೆ ಸತ್ವಪರೀಕ್ಷೆ!

ಈ ಹಿಂದೆ ಮೇಯರ್‌ ಆಗಿದ್ದ ಬಿಜೆಪಿಯ ರವಿಕಾಂತ್‌ ಶರ್ಮಾ ಅವರು ಆಪ್‌ನ ದಮನ್‌ಪ್ರೀತ್‌ ಸಿಂಗ್‌ ವಿರುದ್ಧ 828 ಮತಗಳ ಅಂತರದ ಸೋಲು ಅನುಭವಿಸಿದ್ದಾರೆ. ಅದೇ ರೀತಿ ಬಿಜೆಪಿಯ ಮಾಜಿ ಮೇಯರ್‌ ದವೇಶ್‌ ಮೌಡ್ಗಿಲ್‌, ಬಿಜೆಪಿ ಯುವ ಮೋರ್ಚಾ ನಾಯಕ ವಿಜಯ್‌ ಕೌಶಲ್‌ ರಾಣ ಸೇರಿದಂತೆ ಇತರ ಬಿಜೆಪಿಯ ಘಟಾನುಘಟಿ ನಾಯಕರು ಆಪ್‌ ಅಭ್ಯರ್ಥಿಗಳ ಎದುರು ಧೂಳಿಪಟವಾಗಿದ್ದಾರೆ. ಪಾಲಿಕೆಯಲ್ಲಿನ ತಮ್ಮ ಪಕ್ಷದ ಈ ಗೆಲುವನ್ನು ದಿಲ್ಲಿಯ ಆಪ್‌ ಶಾಸಕ ರಾಘವ್‌ ಚಡ್ಡಾ ಅವರು, ಮುಂದಿನ ವರ್ಷದ ವಿಧಾನಸಭೆ ಚುನಾವಣೆಯ ಟ್ರೇಲರ್‌ ಎಂದು ಬಣ್ಣಿಸಿದ್ದಾರೆ.

Follow Us:
Download App:
  • android
  • ios