ಮುಂಬೈ ಲೋಕಲ್ ಟ್ರೈನಲ್ಲಿ ಸಂಚರಿಸಿ ಪ್ರಯಾಣಿಕರಿಗೆ ಸರ್ಫ್ರೈಸ್ ನೀಡಿದ ಸಾಂತಾಕ್ಲಾಸ್...!
ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಮುಂಬೈ ಲೋಕಲ್ ರೈಲಿನಲ್ಲಿ ಸಂತಾಕ್ಲಾಸ್ ವೇಷ ಧರಿಸಿದ ವ್ಯಕ್ತಿಯೊಬ್ಬರು ಪ್ರಯಾಣಿಕರೊಂದಿಗೆ ಸಂಚರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರಿಸ್‌ಮಸ್ ನಿನ್ನೆಯಷ್ಟೇ ಕಳೆದು ಹೋಯ್ತು, ಆದರೆ ವರ್ಷಾಂತ್ಯ ಹಾಗೂ ಹೊಸವರ್ಷದ ಸಂಭ್ರಮ ಇನ್ನೂ ಮುಗಿದಿಲ್ಲ, ಈ ಮಧ್ಯೆ ಸಂತಾಕ್ಲಾಸ್ ಮುಂಬೈನ ಲೋಕಲ್ ರೈಲಿನಲ್ಲಿ ಸಂಚರಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಸಂತಾಕ್ಲಾಸ್ ವಿಶೇಷಚೇತನರಿಗೆ ಮೀಸಲಿರುವ ಬೋಗಿಯಲ್ಲಿ ಬಾಗಿಲಲ್ಲಿ ನಿಂತು ಸಂಚರಿಸುತ್ತಿರುವ ವೀಡಿಯೋ ವೈರಲ್ ಆಗಿದೆ.
ವೆಸ್ಟರ್ನ್ ರೈಲ್ವೆಗೆ ಸೇರಿದ ಟ್ರೈನ್‌ನಲ್ಲಿ ಸಂತಾಕ್ಲಾಸ್ ವೇಷ ಧರಿಸಿದ ವ್ಯಕ್ತಿಯೊಬ್ಬ ಸಂಚರಿಸಿದ್ದಾರೆ. ವಿಶೇಷಚೇತನರಿಗೆ ಮೀಸಲಾದ ಈ ರೈಲಲ್ಲಿ ಇತರ ಸಾಮಾನ್ಯ ಪ್ರಯಾಣಿಕರು ಕೂಡ ತುಂಬಿಕೊಂಡಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ. ಸಾಮಾನ್ಯವಾಗಿ ಮುಂಬೈ ಲೋಕಲ್ ರೈಲಿನಲ್ಲಿ ಪ್ರತಿದಿನವೂ ಲಕ್ಷಾಂತರ ಜನ ಪ್ರಯಾಣಿಸುತ್ತಿದ್ದು, ಈ ಲೋಕಲ್ ರೈಲು ಮುಂಬೈ ನಗರದ ಜನರ ಜೀವನಾಡಿಯಾಗಿದೆ. ಹೀಗಿರುವಾಗ ಕ್ರಿಸ್‌ಮಸ್ ದಿನ ಪ್ರಯಾಣಿಕರಿಗೆ ಈ ರೈಲಿನಲ್ಲಿ ವಿಶೇಷ ಅತಿಥಿಯ ದರ್ಶನವಾಗಿದೆ. ಬಿಳಿ ಹಾಗೂ ಕೆಂಪು ಮಿಶ್ರಿತವಾದ ಸಂತಾಕ್ಲಾಸ್ ವೇಷ ಧರಿಸಿದ ಸಂತಾ ರೈಲಿನ ಬಾಗಿಲಿನಲ್ಲಿ ಇತರ ಪ್ರಯಾಣಿಕರೊಂದಿಗೆ ಸೇರಿಕೊಂಡು ಪ್ರಯಾಣಿಸಿದ್ದಾರೆ. ಈ ಸಂತಾಕ್ಲಾಸ್ ಜನರತ್ತ ಕೈ ಬೀಸುತ್ತಾ ಆ ಕ್ಷಣವನ್ನು ಎಂಜಾಯ್ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಹೀಗೆ ರೈಲಿನಲ್ಲಿ ಸಂಚರಿಸುತ್ತಿದ್ದ ಸಂತಾಕ್ಲಾಸ್‌ನ ವೀಡಿಯೋ ವೈರಲ್ ಆಗುತ್ತಿದ್ದಂತೆ ಇನಸ್ಟಾಗ್ರಾಮ್ ಬಳಕೆದಾರರೊಬ್ಬರು ಅವರನ್ನು ಗುರುತಿಸಿದ್ದಾರೆ. ಇವರ ಹೆಸರು ರವಿ, ನಾವು ಅವರನ್ನು ರವಿ ಅಂಕಲ್ ಎಂದು ಕರೆಯುತ್ತೇವೆ. ಬೇರೆಯವರನ್ನು ನಗಿಸುವ ವಿಚಾರದಲ್ಲಿ ಅರೊಬ್ಬ ಅತ್ಯುತ್ತಮ ವ್ಯಕ್ತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು Unexplored_Vasai ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, 1 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಂತಾ ಸಾಂತಾಕ್ರೂಜ್‌ಗೆ ಬಂದ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ಸಾಂತಾಕ್ಲಾಸ್ ವಿಶೇಷಚೇತನ ಬೋಗಿಯೇರಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಸಾಂತಾ ನ ಈ ವೀಡಿಯೋ ಸಖತ್ ವೈರಲ್ ಆಗಿದೆ.