ಮುಂಬೈ(ನ.25): ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಜೊತೆ ಸೇರಿ ಸರ್ಕಾರ ರಚಿಸಿರುವ ಬಿಜೆಪಿಯನ್ನು ಚಂಬಲ್ ಡಕಾಯಿತರ ಪಕ್ಷ ಎಂದು ಶಿವಸೇನೆಯ ಸಂಜಯ್ ರಾವುತ್ ಲೇವಡಿ ಮಾಡಿದ್ದಾರೆ.

ಚಂಬಲ್ ಡಕಾಯಿತರಂತೆ ಬಂದು ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಸರ್ಕಾರ ರಚಿಸಿದೆ ಎಂದು ಸಂಜಯ್ ರಾವುತ್ ಹರಿಹಾಯ್ದಿದ್ದಾರೆ.

ಅಧಿಕಾರ ಇಲ್ಲದಿದ್ದರೆ ಬಿಜೆಪಿ ನಾಯಕರು ಹುಚ್ಚರಾಗುತ್ತಾರೆ ಎಂದು ಹೇಳಿರುವ ರಾವುತ್, ಈ ಹುಚ್ಚರಿಗೆ ಚಿಕಿತ್ಸೆ ನೀಡಲು ಮಹಾರಾಷ್ಟ್ರದಾದ್ಯಂತ ಹುಚ್ಚರ ಆಸ್ಪತ್ರೆ ತೆರಯಲಾಗಿದೆ ಎಂದು ಕಿಚಾಯಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿಕೂಟ ಸರ್ಕಾರ ರಚಿಸುವುದು ಶತಸಿದ್ಧ ಎಂದಿರುವ ರಾವುತ್, ಬಹುಮತ ಸಾಬೀತುಪಡಿಸುವಲ್ಲಿ ಬಿಜೆಪಿ ವಿಫಲವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಬಹುಮತ ಯಾರಿಗಿದೆ ಎಂಬುದು ರಾಜ್ಯಪಾಲರಿಗೆ ಚೆನ್ನಾಗಿ ಗೊತ್ತಿದ್ದು, ಅದಾಗ್ಯೂ ಬಿಜೆಪಿ ಸರ್ಕಾರ ರಚಿಸುವಲ್ಲಿ  ಅವರ ಪಾತ್ರ ಮಹತ್ವದ್ದು ಎಂದು ಭಗತ್ ಸಿಂಗ್ ಕೊಶ್ಯಾರಿ ವಿರುದ್ಧವೂ ರಾವುತ್ ಹರಿಹಾಯ್ದಿದ್ದಾರೆ.

ಇಂದು ಸಂಜೆ ಗ್ರ್ಯಾಂಡ್ ಹಯಾತ್‌ನಲ್ಲಿ ಶಿವಸೇನೆ, ಕಾಂಗ್ರಸ್-ಎನ್‌ಸಿಪಿ ಮೈತ್ರಿಕೂಟ ಸಭೆ ಸೇರುತ್ತಿದ್ದು, ಎಲ್ಲ 162 ಶಾಸಕರು ಹಾಜರಿರುವುದನ್ನು ರಾಜ್ಯಪಾಲರು ಬಂದು ಬೇಕಾದರೆ ನೋಡಲಿ ಎಂದು ಸಂಜಯ್ ರಾವುತ್ ಸವಾಲೆಸೆದಿದ್ದಾರೆ. 

ಇದಕ್ಕೂ ಮುನ್ನ ಮಹಾರಾಷ್ಟ್ರ ರಾಜಕೀಯ ವಿಪ್ಲವ ಕುರಿತಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ನಾಳೆ(ನ.26)ಗೆ ತೀರ್ಪು ಕಾಯ್ದಿರಿಸಿದೆ.