ನವದೆಹಲಿ (ಜೂ. 28): ಬ್ಯಾಂಕುಗಳಿಗೆ 14500 ಕೋಟಿ ರು. ವಂಚಿಸಿ ನಾಪತ್ತೆಯಾಗಿರುವ ಗುಜರಾತ್‌ ಮೂಲದ ಸಂದೇಸರ ಸೋದರರ ಅಕ್ರಮ ಸಂಬಂಧ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಅಹಮದ್‌ ಪಟೇಲ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ.

13500 ಕೋಟಿ ರು. ಮೊತ್ತದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಹಗರಣಕ್ಕಿಂತ ಸಂದೇಸರ ಪ್ರಕರಣ ದೊಡ್ಡ ಹಗರಣವಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಾಜಿ ರಾಜಕೀಯ ಕಾರ್ಯದರ್ಶಿಯಾಗಿರುವ ಹಾಲಿ ಕಾಂಗ್ರೆಸ್‌ ಖಜಾಂಚಿ ಅಹಮದ್‌ ಪಟೇಲ್‌ ಅವರನ್ನು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಲ್ಯೂಟನ್ಸ್‌ ದೆಹಲಿಯ ಪಟೇಲ್‌ ನಿವಾಸಕ್ಕೆ ಬೆಳಗ್ಗೆ 11.30ರ ವೇಳೆಗೆ ಮಾಸ್ಕ್‌, ಗ್ಲೌಸ್‌ ಧರಿಸಿ ಕಡತ ಹಿಡಿದು ಬಂದ ಮೂವರು ಅಧಿಕಾರಿಗಳು ಬಹುಹೊತ್ತಿನವರೆಗೆ ವಿಚಾರಣೆ ನಡೆಸಿದರು. ಈ ಹಿಂದೆಯೇ ವಿಚಾರಣೆಗೆ ಬರಲು ಪಟೇಲ್‌ ಅವರಿಗೆ ಇ.ಡಿ. ಎರಡು ಬಾರಿ ನೋಟಿಸ್‌ ನೀಡಿತ್ತು. ಆದರೆ ತಮಗೆ 70 ವರ್ಷವಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಹೊರಗೆ ಬರುವಂತಿಲ್ಲ ಎಂದು ಅಹಮದ್‌ ಪಟೇಲ್‌ ಹೇಳಿದ್ದರು. ಕೊನೆಗೆ ಇ.ಡಿ.ಯೇ ಪಟೇಲ್‌ ವಿಚಾರಣೆಗೆ ತಂಡ ರಚನೆ ಮಾಡಿತ್ತು.

ಚೀನಾ ಮತ್ತೆ ಕುತಂತ್ರ: ಶಾಂತಿ ಮಂತ್ರ ಪಠಿಸುತ್ತಲೇ ಹೆಲಿಪ್ಯಾಡ್‌ ನಿರ್ಮಾಣ!

ಗುಜರಾತ್‌ನ ವಡೋದರಾ ಮೂಲದ ಸ್ಟರ್ಲಿಂಗ್‌ ಬಯೋಟೆಕ್‌ ಕಂಪನಿಯ ಒಡೆಯರಾದ ನಿತಿನ್‌ ಸಂದೇಸರ, ಚೇತನ್‌ ಸಂದೇಸರ, ದೀಪ್ತಿ ಸಂದೇಸರ 14500 ಕೋಟಿ ರು. ಸಾಲ ಮರುಪಾವತಿಸದೆ ತಲೆಮರೆಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಧ್ಯವರ್ತಿಯೊಬ್ಬರಿಂದ 25 ಲಕ್ಷ ರು. ಲಂಚ ಸ್ವೀಕರಿಸಿದ ಆರೋಪ ಅಹಮದ್‌ ಪಟೇಲ್‌ ಮೇಲಿದೆ.

ಇನ್ನು ಪಟೇಲ್‌ ಅವರ ಪುತ್ರ ಫೈಸಲ್‌ಗೆ ಪಾರ್ಟಿ ಮಾಡಲು 10 ಲಕ್ಷ ಭರಿಸಿದ್ದೆ, ನೈಟ್‌ ಕ್ಲಬ್‌ವೊಂದರ ಪ್ರವೇಶಕ್ಕೆ 5 ಲಕ್ಷ ರು. ನೀಡಿದ್ದೆ ಎಂದು ಸಂದೇಸರ ಕಂಪನಿಯ ನೌಕರನೊಬ್ಬ ಹೇಳಿಕೆ ನೀಡಿದ್ದ. ಜೊತೆಗೆ ಸಂದೇಸರ ಕಂಪನಿಯ ನೌಕರನೊಬ್ಬ ತಾನು ಹಲವು ಬಾರಿ ಅಹಮದ್‌ ಪಟೇಲ್‌ ಅವರ ಪುತ್ರ ಮತ್ತು ಅಳಿಯನ ಮನೆಗೆ ತೆರಳಿ ಹಣ ನೀಡಿದ್ದೆ. ಅಲ್ಲದೆ ಕಂಪನಿಯ ಪರವಾಗಿ ಹಲವು ಕಾಂಗ್ರೆಸ್‌ ನಾಯಕರಿಗೂ ಹಣ ತಲುಪಿಸಿದ್ದಾಗಿ ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕಳೆದ ವರ್ಷವೇ ಫೈಸಲ್‌ ಹಾಗೂ ಪಟೇಲ್‌ ಅಳಿಯ ಇರ್ಫಾನ್‌ ಸಿದ್ಧಿಖಿ ಅವರನ್ನು ಇ.ಡಿ. ವಿಚಾರಣೆಗೆ ಒಳಪಡಿಸಿತ್ತು.