ಲೀಸ್ ರದ್ದು ಮಾಡಿದ ಯೋಗಿ ಆದಿತ್ಯನಾಥ್, ಸಂಸದ ಅಜಮ್ ಖಾನ್ ಕಚೇರಿ, ಶಾಲೆಯನ್ನು ಸೀಲ್ ಮಾಡಿದ ಸರ್ಕಾರ!
ಪೊಲೀಸರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಶುಕ್ರವಾರ ಶಾಲೆ ಮತ್ತು ಸಮಾಜವಾದಿ ಪಕ್ಷದ ಕಚೇರಿ ಆವರಣಕ್ಕೆ ಆಗಮಿಸಿ ಪೀಠೋಪಕರಣಗಳು ಮತ್ತು ಇತರ ವಸ್ತುಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿತು.

ನವದೆಹಲಿ (ನ.11): ಸಮಾಜವಾದಿ ಪಕ್ಷದ ಹಿರಿಯ ನಾಯಕ ಮೊಹಮ್ಮದ್ ಅಜಂ ಖಾನ್ ಅವರ ಜೌಹರ್ ಟ್ರಸ್ಟ್ ನಡೆಸುತ್ತಿರುವ ರಾಂಪುರ ಪಬ್ಲಿಕ್ ಸ್ಕೂಲ್ ಹಾಗೂ ಟ್ರಸ್ಟ್‌ಗೆ ನೀಡಿದ್ದ ಗುತ್ತಿಗೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದ ನಂತರ ಅಲ್ಲಿನ ಎಸ್‌ಪಿ ಕಚೇರಿಯನ್ನು ಶುಕ್ರವಾರ ರಾಂಪುರ ಆಡಳಿತ ಸೀಲ್ ಮಾಡಿದೆ. “ಜೌಹರ್ ಟ್ರಸ್ಟ್‌ನ ಗುತ್ತಿಗೆಯನ್ನು ಸರ್ಕಾರವು ರದ್ದುಗೊಳಿಸಿದೆ. ಇದನ್ನು ಅನುಸರಿಸಿ ಶುಕ್ರವಾರ ರಾಂಪುರ ಪಬ್ಲಿಕ್ ಸ್ಕೂಲ್ ಮತ್ತು ಅವರ ಸಮಾಜವಾದಿ ಪಕ್ಷದ ಕಚೇರಿಯನ್ನು ತೆರವು ಮಾಡಲಾಯಿತು ಮತ್ತು ಜೌಹರ್ ಟ್ರಸ್ಟ್‌ನ ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಲಾಯಿತು. ಪ್ರೌಢ ಶಿಕ್ಷಣ ಇಲಾಖೆಯು ಅದರ ಭೂಮಿ ಮತ್ತು ಕಟ್ಟಡವನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಆಡಳಿತ ಲಲತಾ ಪ್ರಸಾದ್ ಶಾಕ್ಯಾ ಹೇಳಿದ್ದಾರೆ. ಪೊಲೀಸರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಶುಕ್ರವಾರ ಶಾಲೆ ಮತ್ತು ಸಮಾಜವಾದಿ ಪಕ್ಷದ ಕಚೇರಿ ಆವರಣಕ್ಕೆ ಆಗಮಿಸಿ ಪೀಠೋಪಕರಣಗಳು ಮತ್ತು ಇತರ ವಸ್ತುಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿತು.
ಶಾಲೆಯನ್ನು ತೆರವುಗೊಳಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಶಾಲಾ ಆಡಳಿತ ಮಂಡಳಿ ಒತ್ತಾಯಿಸಿದರೂ ಆಡಳಿತ ಮಂಡಳಿ ನಿರಾಕರಿಸಿದ್ದು, ಗುರುವಾರಕ್ಕೆ ಗಡುವು ಮುಕ್ತಾಯವಾಗಿದೆ ಎಂದು ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ ಇತ್ತೀಚೆಗೆ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಮಂದರ್ ಅವರಿಂದ ವರದಿಯನ್ನು ಸ್ವೀಕರಿಸಿದ ನಂತರ ಗುತ್ತಿಗೆಯನ್ನು ರದ್ದುಗೊಳಿಸಿತು, ನಂತರ ಆಡಳಿತವು ಜೌಹರ್ ಟ್ರಸ್ಟ್‌ಗೆ ಕಟ್ಟಡ ಮತ್ತು ಭೂಮಿಯನ್ನು ತೆರವು ಮಾಡುವಂತೆ ನೋಟಿಸ್ ನೀಡಿತು.
ಸಮಾಜವಾದಿ ಪಕ್ಷದ ಕೆಲವು ಕಾರ್ಯಕರ್ತರು ಶುಕ್ರವಾರ ಈ ಕ್ರಮವನ್ನು ವಿರೋಧಿಸಿದರೂ, ಅವರನ್ನು ಪೊಲೀಸರು ಅವರನ್ನು ಚದುರಿಸುವಲ್ಲಿ ಯಶಸ್ವಿಯಾದರು. “ರಾಂಪುರ್ ಪಬ್ಲಿಕ್ ಶಾಲೆಯನ್ನು ಖಾಲಿ ಮಾಡುವಂತೆ ಜೌಹರ್ ಟ್ರಸ್ಟ್‌ಗೆ ನೋಟಿಸ್ ಬಂದಿತ್ತು. ಸಮಾಜವಾದಿ ಪಕ್ಷದ ಕಚೇರಿಗೂ ಆ ಭೂಮಿಗೂ ಕಟ್ಟಡಕ್ಕೂ ಯಾವುದೇ ಸಂಬಂಧವಿಲ್ಲ. ಇನ್ನು, ಆಡಳಿತ ಮಂಡಳಿ ಎಸ್‌ಪುಇ ಕಚೇರಿಗೆ ಸೀಲ್ ಹಾಕಿದೆ. ಈ ಕ್ರಮವನ್ನು ಏಕೆ ತೆಗೆದುಕೊಂಡಿತು ಎಂದು ಆಡಳಿತವೇ ಹೇಳಬೇಕು, ”ಎಂದು ಎಸ್‌ಪಿ ನಾಯಕ ಅಸೀಂ ರಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೋಗಿ ಆದಿತ್ಯನಾಥ್ ವಿರುದ್ಧ ದ್ವೇಷ ಭಾಷಣ, ಅಜಂ ಖಾನ್‌ಗೆ ಎರಡು ವರ್ಷ ಜೈಲು ಶಿಕ್ಷೆ
ತೋಪ್ಖಾನಾ ರಸ್ತೆಯಲ್ಲಿರುವ ಶಿಕ್ಷಣ ಇಲಾಖೆಯ ಕಟ್ಟಡವನ್ನು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಆಡಳಿತದಲ್ಲಿ ವರ್ಷಕ್ಕೆ ₹ 100 ಗೆ ಅಜಂ ಖಾನ್ ಅವರ ಜೌಹರ್ ಟ್ರಸ್ಟ್‌ಗೆ ಗುತ್ತಿಗೆಗೆ ನೀಡಲಾಗಿತ್ತು. ಅದೇ ಕಟ್ಟಡದಲ್ಲಿ ಖಾಸಗಿ ರಾಂಪುರ ಪಬ್ಲಿಕ್ ಸ್ಕೂಲ್ ಮತ್ತು ಎಸ್ಪಿ ಕಚೇರಿ "ದಾರುಲ್ ಅವಾಮ್" ತೆರೆಯುವ ಮೂಲಕ ಜೌಹರ್ ಟ್ರಸ್ಟ್ ಗುತ್ತಿಗೆಯ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸುತ್ತಿದೆ ಎಂದು ಬಿಜೆಪಿಯ ರಾಂಪುರ ಶಾಸಕ ಆಕಾಶ್ ಸಕ್ಸೇನಾ ದೂರಿದ್ದರು. ತನಿಖೆಯ ವೇಳೆ ದೂರು ನಿಜವೆಂದು ತಿಳಿದುಬಂದಿದೆ.
ಮೋದಿ ವಿರುದ್ಧ ದ್ವೇಷ ಭಾಷಣ: ಆಜಂ ಖಾನ್ ಖುಲಾಸೆ