ವಾರಣಾಸಿಯಲ್ಲಿ ರಾಜಕಾರಣಿ ಮಹೇಂದ್ರ ರಾಜ್‌ಭರ್ ಅವರಿಗೆ ಸನ್ಮಾನದ ನಂತರ ಥಳಿಸಲಾಗಿದೆ. ಈ ಘಟನೆಯನ್ನು ಅಖಿಲೇಶ್ ಯಾದವ್ ಖಂಡಿಸಿದ್ದಾರೆ.
ವಾರಣಾಸಿ: ರಾಜಕಾರಣಗಳಿಗೆ ಹಾರ ತುರಾಯಿ ಹಾಕಿ ಶಾಲು ಹೊದಿಸಿ ಹಿಂಬಾಲಕರು ಸ್ವಾಗತಿಸುವುದು ಸಾಮಾನ್ಯ ಆದರೆ ಇಲ್ಲೊಂದು ಕಡೆ ವಿಚಿತ್ರ ಹಾಗೂ ಆಘಾತಕಾರಿ ಎನಿಸುವ ಘಟನೆ ನಡೆದಿದೆ. ರಾಜಕಾರಣಿಯೊಬ್ಬರನ್ನು ಅದ್ದೂರಿಯಾದ ಭಾಷಣದೊಂದಿಗೆ ಆತ್ಮೀಯವಾಗಿ ಸ್ವಾಗತಿಸಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ ಬಳಿಕ ಅವರಿಗೆ ಹಿಗ್ಗಮುಗ್ಗಾ ಥಳಿಸಲಾಗಿದೆ. ಉತ್ತರ ಪ್ರದೇಶ ವಾರಾಣಾಸಿಯ ಟೌನ್‌ಪುರ ಜಿಲ್ಲೆಯ ಜಲಾಲ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಹಿರಿಯ ರಾಜಕಾರಣಿ ಮಹಾರಾಜ ಸುಹೇಲ್ ದೇವ್ ಅವರ ಜನ್ಮ ದಿನಾಚರಣೆಯ ಪ್ರಮುಕ್ತ ಜಲಾಲ್‌ಪುರ ಪ್ರದೇಶದಲ್ಲಿ ಅವರ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿರಿಯ ರಾಜಕಾರಣಿ ಮಹೇಂದ್ರ ರಾಜ್‌ಭರ್ ಅವರನ್ನು ಆಹ್ವಾನಿಸಲಾಗಿತ್ತು. ಹೀಗಾಗಿ ಕಾರ್ಯಕ್ರಮಕ್ಕೆ ಬಂದ ಮಹೇಂದ್ರ ರಾಜ್‌ಭರ್ ಅವರನ್ನು ಅಲ್ಲಿ ಆರಂಭದಲ್ಲಿ ಉತ್ತಮವಾದ ಭಾಷಣದೊಂದಿಗೆ ಆತ್ಮೀಯವಾಗಿಯೇ ಸ್ವಾಗತಿಸಲಾಗಿತ್ತು. ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯ್ತು. ಇದಾದ ಬಳಿಕ ಸುಹೇಲ್‌ದೇವ್ ಸ್ವಾಭಿಮಾನ್ ಪಕ್ಷದ ನಾಯಕನಾದ ಬ್ರಜೇಶ್ ರಾಜ್‌ಭರ್ ಎಂಬುವವರು ಮಹೇಂದ್ರ ರಾಜ್‌ಭರ್ ಅವರಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
2017ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಹೇಂದ್ರ ರಾಜ್‌ಭರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕಟ್ಟಪ್ಪ ಎಂದು ಕರೆದಿದ್ದರು. 2017ರ ಚುನಾವಣೆಯಲ್ಲಿ ಅವರು ಮೌ ಸದರ್ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷ ಮತ್ತು ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಗ್ಯಾಂಗ್‌ಸ್ಟಾರ್ ಆಗಿದ್ದು ರಾಜಕಾರಣಿಯಾಗಿ ಬದಲಾಗಿದ್ದ ಮುಖಾರ್ ಅನ್ಸಾರಿ ವಿರುದ್ಧ ಮಹೇಂದ್ರ ರಾಜ್‌ಭರ್ ಇಲ್ಲಿ ಸ್ಪರ್ಧೆ ಮಾಡಿದ್ದರು.
ಆದರೆ ನಂತರ 2019ರಲ್ಲಿ ಅವರು SBSP ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರ ವಿರುದ್ಧ ತಮ್ಮದೇ ಆದ ಸುಹೇಲ್ ದೇವ್ ಸ್ವಾಭಿಮಾನ್ ಪಕ್ಷವನ್ನು ರಚಿಸಿದರು. ಇದಾದ ನಂತ 2022 ರಲ್ಲಿ ಅವರು ಸಮಾಜವಾದಿ ಪಕ್ಷವನ್ನು ಸೇರಿ ಅಖಿಲೇಶ್ ಯಾದವ್‌ಗೆ ಆತ್ಮೀಯರಾದರು .
ಇತ್ತ ಮಹೇಂದ್ರ ರಾಜ್‌ಭರ್ ಅವರ ಮೇಲಿನ ದಾಳಿಯನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಖಂಡಿಸಿದ್ದಾರೆ. ಮಹೇಂದ್ರ ರಾಜ್‌ಭರ್ ಮೇಲಿನ ಹಿಂಸಾತ್ಮಕ ದಾಳಿಯು ಬಿಜೆಪಿ ನೇತೃತ್ವದ ಸರ್ಕಾರದ ಕೆಳಗೆ ನಿರಂತರವಾಗಿ ಹೆಚ್ಚುತ್ತಿರುವ ಅವಮಾನಕರ ನಡವಳಿಕೆ ಮತ್ತು ದೌರ್ಜನ್ಯಗಳಿಗೆ ಮತ್ತೊಂದು ಖಂಡನೀಯ ಉದಾಹರಣೆಯಾಗಿದೆ. ಒಂದು ವೇಳೆ ಈ ದಾಳಿಯಲ್ಲಿ ಬಿಜೆಪಿಯ ನಿರ್ಲಕ್ಷ ಭಾಗಿಯಾಗಿಲ್ಲದಿದ್ದರೆ, ಹಲ್ಲೆಕೋರನನ್ನು ತಕ್ಷಣವೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜಾನ್‌ಪುರ ಎಸ್‌ಪಿ ಕೌಸ್ತುಬ್ ಸಂಜೆ ಮಾತನಾಡಿದ್ದು,ಮಹೇಂದ್ರ ರಾಜ್‌ಭರ್ ಮೇಲಿನ ಹಲ್ಲೆಯ ವೈರಲ್ ವೀಡಿಯೊವನ್ನು ನಾವು ಗಮನಿಸಿದ್ದೇವೆ ಮತ್ತು ಬ್ರಜೇಶ್ ರಾಜ್‌ಭರ್ ವಿರುದ್ಧ ಜಲಾಲ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ಬಂದಿದೆ. ಈ ವಿಷಯದಲ್ಲಿ ಪೊಲೀಸ್ ತನಿಖೆ ಆರಂಭವಾಗಿದೆ ಮತ್ತು ಅದರ ಫಲಿತಾಂಶಗಳ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರ ಆದೇಶದ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಮಾಜವಾದಿ ಪಕ್ಷದೊಳಗಿನ ರಾಜ್‌ಭರ್ ಸಮುದಾಯದ ನಾಯಕರು ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಬ್ರಜೇಶ್ ಅವರು ಮಹೇಂದ್ರ ರಾಜ್‌ಬರ್ ಅವರನ್ನು ಸನ್ಮಾನಿಸಲು ವೇದಿಕೆಗೆ ಕರೆದಿದ್ದರು. ಅಲ್ಲದೇ ಈ ಕಾರ್ಯಕ್ರಮದ ವೈರಲ್ ವಿಡಿಯೋದಲ್ಲಿ, ಸಮುದಾಯದ ಈ ದುಸ್ಥಿತಿಗೆ ತನ್ನದೇ ಜನರೇ ಕಾರಣ ಎಂದು ಬ್ರಿಜೇಶ್ ತಮ್ಮ ಭಾಷಣದಲ್ಲಿ ಹೇಳಿರುವುದು ಕಂಡುಬಂದಿದೆ. ನಮ್ಮದೇ ಜನರು ಅಧಿಕಾರದಲ್ಲಿರುವಾಗ, ಅವರು ತಮ್ಮ ಸಮುದಾಯವನ್ನು ಬೆಂಬಲಿಸುವುದಿಲ್ಲ, ಬದಲಾಗಿ ತಮ್ಮನ್ನು ತಾವು ಸೇವೆ ಮಾಡಿಕೊಳ್ಳಲು ಮತ್ತು ತಮ್ಮ ಕುಟುಂಬಗಳಿಗಾಗಿ ಕೆಲಸ ಮಾಡಲು ಬಯಸುತ್ತಾರೆ. ಘಾಜಿಯ ಮನೋಭಾವದಿಂದ ಬಳಲುತ್ತಿರುವ ಅನೇಕ ನಾಯಕರು ದಬ್ಬಾಳಿಕೋರರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಇದಾದ ತಕ್ಷಣ, ಬ್ರಿಜೇಶ್ ಅವರು ಮಹೇಂದ್ರ ಅವರಿಗೆ ಹಾರ ಹಾಕಿ ನಂತರ ವೇದಿಕೆಯಲ್ಲಿದ್ದ ಇತರರು ತಡೆಯುವವರೆಗೆ ಅವರಿಗೆ ಥಳಿಸುವುದನ್ನು ವೀಡಿಯೋದಲ್ಲಿ ಕಾಣಬಹುದು.
