ತಲೆಹರಟೆ ಮಾಡಿದ ಯೂಟ್ಯೂಬರ್‌ಗೆ ಇಕ್ಕಳದಲ್ಲಿ ಬಾರಿಸಿದ ಸಾಧು: ವೀಡಿಯೋ ವೈರಲ್
ಮಹಾಕುಂಭ ಮೇಳದಲ್ಲಿ ಸಾಧುವೊಬ್ಬರು ಯೂಟ್ಯೂಬರ್‌ಗೆ ಇಕ್ಕಳದಿಂದ ಹೊಡೆದು ಓಡಿಸಿದ ಘಟನೆ ವೈರಲ್ ಆಗಿದೆ. ಯೂಟ್ಯೂಬರ್‌ನ ಕಿರಿಕಿರಿ ಪ್ರಶ್ನೆಗಳಿಂದ ಸಿಟ್ಟಿಗೆದ್ದ ಸಾಧು ಈ ರೀತಿ ವರ್ತಿಸಿದ್ದಾರೆ.
ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮಾರಂಭ ಮಹಾಕುಂಭ ಮೇಳಕ್ಕೆ ಕೋಟ್ಯಾಂತರ ಸಂಖ್ಯೆಯಲ್ಲಿ ಜನ ಬಂದು ಸೇರುತ್ತಿದ್ದಾರೆ. ಸಾಧುಗಳು ಸಂತರು ಮಾತ್ರವಲ್ಲದೇ, ಅನೇಕ ಸೆಲೆಬ್ರಿಟಿಗಳು ಇಲ್ಲಿನ ಪ್ರಯಾಗ್‌ರಾಜ್ ಸಂಗಮದಲ್ಲಿ ಕುಂಭಸ್ನಾನ ಮಾಡುತ್ತಿದ್ದಾರೆ. ನಡುಗುವ ಉತ್ತರ ಭಾರತದ ಚಳಿಯ ನಡುವೆಯೇ ಗಂಗೆಯಲ್ಲಿ ಮುಳುಗೇಳುವ ಮೂಲಕ 40 ಕೋಟಿಗೂ ಅಧಿಕ ಜನ ಇಂದು ಮೊದಲ ಪುಣ್ಯ ಸ್ನಾನ ಮಾಡಿದ್ದಾರೆ. ತೀವ್ರವಾದ ಆಧ್ಯಾತ್ಮಿಕ ವಾತಾವರಣದ ನಡುವೆಯೇ ಕುಂಭಮೇಳದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕುಂಭಮೇಳಕ್ಕೆ ಬಂದಿರುವ ಸಾವಿರಾರು ನಾಗಸಾಧುಗಳು ಅವರ ವೇಷಭೂಷಣಗಳು, ಆಚರಣೆಗಳು ಸೇರಿದಂತೆ ಸಾಕಷ್ಟು ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ಈಗ ಸಾಧನೆ ಮಾಡುತ್ತಿರುವ ಸಾಧುವೊಬ್ಬರ ತನಗೆ ನಿರಂತರವಾಗಿ ಒಂದಾದ ಮೇಲೊಂದರಂತೆ ಪ್ರಶ್ನೆಗಳನ್ನು ಕೇಳಿದ ಯೂಟ್ಯೂಬರ್ ಓರ್ವನಿಗೆ ಇಕ್ಕಳದಲ್ಲಿ ಹೊಡೆದು ಪೆಂಡಾಲ್‌ನಿಂದ ಓಡಿಸಿದ ವೀಡಿಯೋವೊಂದು ವೈರಲ್ ಆಗುತ್ತಿದೆ. ಯೂಟ್ಯೂಬರ್‌ವೊಬ್ಬ ಸಾಧುವೊಬ್ಬರ ಟೆಂಟ್‌ಗೆ ಹೋಗಿ ಅವರ ಸಂದರ್ಶನ ಮಾಡುತ್ತಾನೆ. ಆದರೆ ಯೂಟ್ಯೂಬರ್‌ನ ಕಿರಿಕಿರಿವುಂಟು ಮಾಡುವ ಪ್ರಶ್ನೆಗಳಿಂದ ಸಾಧುವಿಗೆ ಸಿಟ್ಟು ಬಂದಿದ್ದು, ತನ್ನ ಕೈಗೆ ಸಿಕ್ಕ ಇಕ್ಕಳದಿಂದಲೇ ಆತನ ಬೆನ್ನಿಗೆರಡು ಏಟು ಕೊಟ್ಟು ಅಲ್ಲಿಂದ ಓಡಿಸುತ್ತಾನೆ. ಅಲ್ಲದೇ ಈ ಘಟನೆಗೆ ಸಾಕ್ಷಿಯಾದ ಅಲ್ಲಿದ್ದವರನ್ನು ಉದ್ದೇಶಿಸಿ ಮಾತನಾಡಿದ ಸಾಧು ಕೇಳಿದ್ರ ಆತ ಹೇಗೆ ಅಸಂಬಂದ್ಧವಾಗಿ ಮಾತನಾಡುತ್ತಿದ್ದ ಎಂದು ಹೇಳುತ್ತಾರೆ.
ಜನತಾ ದರ್ಬಾರ್ ಎಂಬ ಇನ್ಸ್ಟಾಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು. 18.5 ಮಿಲಿಯನ್‌ಗೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಸಾವಿರಾರು ಜನರು ಕಾಮೆಂಟ್ ಮಾಡಿದ್ದು, ಸಾಧುವಿನ ನಡೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಈ ಘಟನೆಯನ್ನು ತಮಾಷೆಯಾಗಿ ತೆಗೆದುಕೊಂಡರೆ ಮತ್ತೆ ಕೆಲವರು ಗಂಭೀರವಾದ ಚರ್ಚೆ ಮಾಡಿದ್ದಾರೆ. ಸಿಲ್ಲಿ ಸಿಲ್ಲಿ ಪ್ರಶ್ನೆಗಳಿಂದ ಸಾಧುಗಳಿಗೆ ಕಿರಿಕಿರಿ ಮಾಡಿದರೆ ಹೀಗೆ ಆಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಅವರ ಏಕಾಂತವನ್ನು ಗೌರವಿಸಿ ಎಲ್ಲವೂ ಕಂಟೆಂಟ್ ಆಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಬೇರೆಯವರ ಶಾಂತಿಯನ್ನು ಭಂಗಗೊಳಿಸುವವರಿಗೆ ಇದೊಂದು ಪಾಠ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಯೂಟ್ಯೂಬರ್ ಲಿಮಿಟ್ ಮೀರಿದ್ದಾನೆ. ನೀವು ಏನೇನೋ ಕೇಳಿದರು ಜನ ಸುಮ್ಮನಿರಬೇಕು ಎಂದು ಬಯಸಬಾರದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.