ತಿರುವನಂತಪುರ (ನ.15) : ವಾರ್ಷಿಕ ಮಂಡಲಂ-ಮಕರವಿಳಕ್ಕು ಯಾತ್ರೆ ಪ್ರಯುಕ್ತ ಸೋಮವಾರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವನ್ನು ತೆರೆಯಲಾಗುತ್ತದೆ ಎಂದು ಕೇರಳ ಸರ್ಕಾರ ತಿಳಿಸಿದೆ. 

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು 24 ತಾಸಿಗೂ ಮುನ್ನ ಕೊರೋನಾ ಪರೀಕ್ಷೆಗೆ ಒಳಗಾಗಿ, ನೆಗೆಟಿವ್‌ ವರದಿ ಹೊಂದಿರುವುನ್ನು ಕಡ್ಡಾಯ ಮಾಡಲಾಗಿದೆ. 

ಶಬರಿಮಲೆ ದೇಗುಲದಿಂದ ಮಹತ್ವದ ಆದೇಶ : ಭಕ್ತರೇ ಗಮನಿಸಿ ...

ಇದಕ್ಕಾಗಿಯೇ ಪಂಪಾ ಮತ್ತು ನೀಲಕ್ಕಲ್‌ ಬೇಸ್‌ ಕ್ಯಾಂಪ್‌ನಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ದೇವಾಲಯಕ್ಕೆ ಆಗಮಿಸುವ ಹಾದಿಯಲ್ಲಿ ಮಾಸ್ಕ್‌ ಕಡ್ಡಾಯ ಅಲ್ಲ. ಜೊತೆಗೆ ಎಂದಿನಂತೆ ನೂಕುನುಗ್ಗಲಿಗೆ ಅವಕಾಶ ನೀಡದೆ ಸರದಿ ಸಾಲಿನಲ್ಲೇ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ತಿಳಿಸಿದ್ದಾರೆ.

ಇಂದಿನಿಂದ ಮುಂದಿನ ವರ್ಷದ ಸಂಕ್ರಾಂತಿಯ ವರೆಗೂ ದೇವಾಲಯ ತೆರೆದಿರುತ್ತದೆ. ಅಂತಿಮ ಹಂತದ ಮುಂಜಾಗ್ರತಾ ಕ್ರಮ ಪರಿಶೀಲನೆಗೆ ಕಳೆದ ಶುಕ್ರವಾರ ಉನ್ನತ ಮಟ್ಟದ ಸಭೆ ಕರೆಯಲಾಗಿತ್ತು.