ತಿರುವನಂತಪುರಂ(ಅ.11): ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದ ಹುಟ್ಟಿಸಿದ್ದ. ದಕ್ಷಿಣ ಭಾರತದ ಪ್ರಸಿದ್ಧ ಯಾತ್ರ ಸ್ಥಳಗಳಲ್ಲೊಂದಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ದ್ವಾರ ಅ.16 ರಿಂದ ತೆರೆಯಲಿದೆ. ಹೀಗಿರುವಾಗ ಒಂದು ದಿನ ಕೇವಲ 250 ಭಕ್ತರಿಗಷ್ಟೇ ದರ್ಶಕನ ಪಡೆಯಲು ಅವಕಾಶ ಸಿಗಲಿದೆ. ಇನ್ನು ಐದು ದಿನಗಳವರೆಗೆ ನಡೆಯುವ ಈ ಪೂಜಾ ವಿಧಿ ವಿಧಾನ  ಅ.16ರಿಂದ ಆರಂಭವಾಗಲಿದೆ.

ಇನ್ನು  ಶಬರಿಮಲೆ ಯಾತ್ರೆ ಕೈಗೊಳ್ಳುವ ಭಕ್ತರು ನೀಲಕ್ಕಳ್ ಕ್ಯಾಂಪ್‌ನಲ್ಲಿ ಕಡ್ಡಾಯವಾಗಿ ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಬೇಕು. ಇಲ್ಲಿ ನೆಗೆಟಿವ್ ಬಂದರಷ್ಟೇ ಮುಂದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇನ್ನು ದರ್ಶನಕ್ಕೆ ಬೇಕಾದ ಅಗತ್ಯ ಕೋವಿಡ್‌ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇರಳ ಸರಕಾರ ಹೇಳಿದ್ದು, ಇಲ್ಲಿಗಾಗಮಿಸುವ 24 ಗಂಟೆಯೊಳಗಿನ ಕೊರೋನಾ ವರದಿಯನ್ನಷ್ಟೇ ಪರಿಗಣಿಸಲಾಗುವುದೆಂದು ದೇವಸ್ವಂ ಬೋರ್ಡ್‌ ತಿಳಿಸಿದೆ.

 ಅನ್ಯರಾಜ್ಯದಿಂದ ಬರುವವರು ಇಂತಹ ಪ್ರಮಾಣಪತ್ರ ತಂದಿದ್ದರೂ ನೀಲಕ್ಕಲ್‌ನಲ್ಲಿ ಮತ್ತೊಮ್ಮೆ ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು. 60 ವರ್ಷ ಮೇಲ್ಪಟ್ಟವರು ತಮಗೆ ಯಾವುದೇ ಕಾಯಿಲೆ ಇಲ್ಲ ಎಂಬ ವರದಿಯನ್ನೂ ತರುವಂತಿರಬೇಕು ಎಂದು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದೆ.

ಇದಲ್ಲದೇ ದೇವಾಲಯದ ಬಳಿ ಯಾರೂ ಉಳಿದುಕೊಳ್ಳುವಂತಿಲ್ಲ. ಜೊತೆಗೆ ಕೊರೋನಾ ಪಾಸಿಟಿವ್‌ ಬರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಪಂಬಾ ಸೇರಿ ಹಲವೆಡೆ ಸಣ್ಣ ಆಸ್ಪತ್ರೆಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಇನ್ನು ದೇಶದಲ್ಲಿ ಲಾಕ್‌ಡೌನ್‌ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ದೇವಾಲಯ ತೆರೆಯುತ್ತಿದೆ.

ಮಾಸ್ಕ್ ಬಗ್ಗೆ ಏನು ಮಾಡೋದೆಂಬುವುದೇ ಡೌಟ್

ಇನ್ನು ಭಕ್ತರಿಗೆ ಮಾಸ್ಕ್ ಕಡ್ಡಾಯಗೊಳಿಸಬೇಕೋ? ಬೇಡವೋ ಎಂಬ ಬಗ್ಗೆ ಗೊಂದಲ ಮುಂದುವರಿದಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಕಡಿದಾದ ಬೆಟ್ಟಗಳನ್ನು ಹತ್ತಬೇಕಿದೆ. ಮಾಸ್ಕ್ ಧರಿಸುವುದರಿಂದ ಭಕ್ತರು ಸುಸ್ತಾಗಿ ಉಸಿರಾಟದ ತೊಂದರೆ ಅನುಭವಿಸುತ್ತಾರೆ. ಹೀಗಾಗಿ ಮಾಸ್ಕ್‌ ಹಾಕಿಕೊಂಡೇ ಭಕ್ತರು ಬೆಟ್ಟ ಹತ್ತುವುದು ಕಷ್ಟ ಸಾಧ್ಯ ಎನ್ನುವುದು ವೈದ್ಯರ ಸಲಹೆ. ಕಳೆದ ವರ್ಷ 30 ಯಾತ್ರಾರ್ಥಿಗಳು ಹೃದಯ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದರು.