ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕನ್ನಡದ ‘ಕಾಂತಾರ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟ ಜಯರಾಮ್‌ರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿದ್ದಾರೆ.
ತಿರುವನಂತಪುರಂ: ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕನ್ನಡದ ‘ಕಾಂತಾರ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟ ಜಯರಾಮ್‌ರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿ 2019ರಲ್ಲಿ ಶಬರಿಮಲೆ ದೇಗುಲದ ಚಿನ್ನದ ಕವಚಗಳನ್ನು ಪೂಜೆಗೆಂದು ಚೆನ್ನೈಗೆ ತೆಗೆದುಕೊಂಡು ಹೋಗಿದ್ದ. ಆತನ ಜತೆ ಜಯರಾಮ್ ದೇಗುಲವೊಂದರಲ್ಲಿ ಕವಚ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದು ವಿಡಿಯೋದಲ್ಲೂ ದಾಖಲಾಗಿತ್ತು. ಹೀಗಾಗಿ, ಪೊಟ್ಟಿ ಜೊತೆ ಹಣದ ವಹಿವಾಟು ನಡೆದಿರುವ ಶಂಕೆಯ ಮೇರೆಗೆ ಜಯರಾಮ್‌ರ ವಿಚಾರಣೆ ನಡೆದಿದೆ.
ಪ್ರಕರಣದಲ್ಲಿ ಬಂಧಿತರಾಗಿದ್ದ, ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿಯ ಇಬ್ಬರು ಆಡಳಿತಾಧಿಕಾರಿಗಳನ್ನು ಜಾಮೀನಿನ ಮೇಲೆ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು.
ವೆನಿಜುವೆಲಾ ಅಧ್ಯಕ್ಷೆ ಜತೆ ಮೋದಿ ಮಾತು: ನಂಟಿಗೆ ಬಲ
ನವದೆಹಲಿ: ಇತ್ತೀಚೆಗೆ ವೆನಿಜುವೆಲಾ ಅಧ್ಯಕ್ಷ ಮಡುರೋ ಪದಚ್ಯುತಿ ಬಳಿಕ ಅಧಿಕಾರ ವಹಿಸಿಕೊಂಡಿರುವ ವೆನಿಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಜತೆ ಶುಕ್ರವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಫೋನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ವೆನಿಜುವೆಲಾ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಕೆಂಗಣ್ಣು ಬೀರಿದ ಬೆನ್ನಲ್ಲೇ ಮೋದಿ ಮಾತುಕತೆ ಮಹತ್ವ ಪಡೆದಿದೆ.
‘ರೊಡ್ರಿಗಸ್ ಜತೆ ಮಾತನಾಡಿದೆ. ಮುಂಬರುವ ವರ್ಷಗಳಲ್ಲಿ ಭಾರತ-ವೆನಿಜುವೆಲಾ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬದ್ಧತೆ ವ್ಯಕ್ತಪಡಿಸಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯನ್ನು ಇನ್ನಷ್ಟು ಆಳಗೊಳಿಸಲು ಮತ್ತು ವಿಸ್ತರಿಸಲು ನಾವು ಒಪ್ಪಿಕೊಂಡಿದ್ದೇವೆ’ ಎಂದಿದ್ದಾರೆ.
400 ಮೀ. ಕ್ಯಾಬ್ ಸಂಚಾರಕ್ಕೆ 18,000 ಶುಲ್ಕ!
ಮುಂಬೈ: ಅಮೆರಿಕದಿಂದ ಮುಂಬೈಗೆ ಬಂದಿದ್ದ ಮಹಿಳಾ ಪ್ರವಾಸಿಗರಿಗೆ ಕ್ಯಾಬ್ ಚಾಲಕನೊಬ್ಬ 400 ಮೀ. ಪ್ರಯಾಣಕ್ಕೆ ಬರೋಬ್ಬರಿ 18,000 ಶುಲ್ಕ ವಿಧಿಸಿರುವ ಘಟನೆ ನಡೆದಿದೆ. ಈ ಸಂಬಂಧ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ,
50 ವರ್ಷದ ದೇಶರಾಜ್ ಯಾದವ್ ಬಂಧಿತ ಆರೋಪಿ. ಈತ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಿಳಾ ಪ್ರವಾಸಿಗಳನ್ನು ಅರ್ಧ ಕಿ.ಮೀಗಿಂತಲೂ ಕಡಿಮೆ ದೂರವಿದ್ದ ಪಂಚತಾರಾ ಹೋಟೆಲ್‌ಗೆ ಕರೆದುಕೊಂಡು ಹೋಗಲು 20 ನಿಮಿಷ ಸುತ್ತಾಡಿಸಿದ್ದಾನೆ. ಆ ಬಳಿಕ ಅದೇ ಹೋಟೆಲ್‌ಗೆ ಕರೆದುಕೊಂಡು ಬಿಟ್ಟು 18,000 ರು. ವಸೂಲಿ ಮಾಡಿದ್ದಾನೆ.
ಅಮೆರಿಕದ ಮಹಿಳೆ ಮುಂಬೈ ದುಬಾರಿ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದನ್ನು ಗಮನಿಸಿದ ಪೊಲೀಸರು ಚಾಲಕನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೂರು ಗಂಟೆಯಲ್ಲೇ ಬಂಧಿಸಿದ್ದಾರೆ.
ಆರ್-ಕಾಂ ₹40,000 ಕೋಟಿ ವಂಚನೆ: ಮಾಜಿ ಅಧ್ಯಕ್ಷ ಗರ್ಗ್ ಬಂಧನ
ನವದೆಹಲಿ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್-ಕಾಮ್) ವಿರುದ್ಧದ 40 ಸಾವಿರ ಕೋಟಿ ರು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮಾಜಿ ಅಧ್ಯಕ್ಷ ಪುನಿತ್ ಗರ್ಗ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ.
2001ರಿಂದ 2025ರ ವರೆಗೆ ಹಿರಿಯ ವ್ಯವಸ್ಥಾಪಕ ಮತ್ತು ನಿರ್ದೇಶಕರಾಗಿದ್ದ ಗರ್ಗ್, ಬ್ಯಾಂಕ್ ವಂಚನೆಯಿಂದ ಬಂದ ಆದಾಯದ ಸ್ವಾಧೀನ, ಮರೆಮಾಚುವಿಕೆ, ವೆಚ್ಚದಲ್ಲಿ ಭಾಗಿಯಾಗಿದ್ದರು. ಆದಕಾರಣ ಇವರನ್ನು ಗುರುವಾರ ಇ.ಡಿ. ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದರು. ಬಳಿಕ 9 ದಿನ ಅವರನ್ನು ಇ.ಡಿ. ವಶಕ್ಕೆ ನೀಡಿ ದೆಹಲಿಯ ಪಿಎಂಎಲ್‌ಎ ಕೋರ್ಟ್ ಆದೇಶ ಹೊರಡಿಸಿದೆ.


