* ಕೊರಿಯಾ ರೀತಿ ಉಕ್ರೇನ್‌ ವಿಭಜಿಸಲು ರಷ್ಯಾ ಯತ್ನ* ರಷ್ಯಾ ವಿರುದ್ಧ ಶೀಘ್ರ ಗೆರಿಲ್ಲಾ ಯುದ್ಧ: ಉಕ್ರೇನ್‌ ಘೋಷಣೆ* ಇದಕ್ಕೆ ನಾವು ಅವಕಾಶ ನೀಡಲ್ಲ: ಉಕ್ರೇನ್‌ ಸೇನಾಧಿಕಾರಿ

ಕೀವ್‌(ಮಾ.28): ಯುದ್ಧ ಆರಂಭವಾಗಿ 32 ದಿನಗಳಾದ ನಂತರ ರಷ್ಯಾ ವಿರುದ್ಧ ಉಕ್ರೇನ್‌ ಹೊಸ ರೀತಿಯ ಸಡ್ಡು ಹೊಡೆದಿದೆ. ಶೀಘ್ರವೇ ರಷ್ಯಾ ವಿರುದ್ಧ ಗೆರಿಲ್ಲಾ ಯುದ್ಧ ತಂತ್ರ ಆರಂಭಿಸುವುದಾಗಿ ಉಕ್ರೇನ್‌ ಗುಪ್ತಚರ ಮುಖ್ಯಸ್ಥರು ಭಾನುವಾರ ಹೇಳಿದ್ದಾರೆ.

‘ರಷ್ಯಾ ಉಕ್ರೇನನ್ನು ಉತ್ತರ ಹಾಗೂ ದಕ್ಷಿಣ ಕೊರಿಯಾ ರೀತಿ 2 ಭಾಗವಾಗಿ ವಿಭಾಗಿಸಲು ಯತ್ನಿಸುತ್ತಿದೆ. ಒಂದು ಭಾಗದಲ್ಲಿ ತನ್ನ ಪ್ರಾಬಲ್ಯ ಇರುವಂತೆ ನೋಡಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಪೂರ್ಣ ಉಕ್ರೇನನ್ನು ವಶಪಡಿಸಿಕೊಳ್ಳುವ ಯೋಜನೆ ರೂಪಿಸಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಪ್ರಾಬಲ್ಯದ ಉಕ್ರೇನ್‌ ಭಾಗಗಳಲ್ಲಿ ರಷ್ಯಾ ಸೇನೆ ವಿರುದ್ಧ ನಮ್ಮ ಯೋಧರು ಗೆರಿಲ್ಲಾ ಯುದ್ಧ ತಂತ್ರ ಆರಂಭಿಸಲಿದ್ದಾರೆ’ ಎಂದು ಉಕ್ರೇನ್‌ ಮಿಲಿಟರಿ ಇಂಟಲಿಜೆನ್ಸ್‌ ಮುಖ್ಯಸ್ಥ ಕಿರಿಲೋ ಬುಡಾನೋವ್‌ ಘೋಷಿಸಿದ್ದಾರೆ.

ಉಕ್ರೇನ್‌ಗೆ ಮತ್ತಷ್ಟುಶಸ್ತ್ರಾಸ್ತ್ರ ಒದಗಿಸಿ: ಜೆಲೆನ್‌ಸ್ಕಿ

ರಷ್ಯಾ ಆಕ್ರಮಣದಿಂದ ಉಕ್ರೇನನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ರಷ್ಯಾವನ್ನು ವಿರೋಧಿಸುವ ಧೈರ್ಯವಿಲ್ಲ ಎಂದು ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಆರೋಪಿಸಿದ್ದಾರೆ. ಜೊತೆಗೆ ರಷ್ಯಾ ದಾಳಿಯನ್ನು ಸಮರ್ಪಕವಾಗಿ ಎದುರಿಸಲು ಉಕ್ರೇನ್‌ಗೆ ಮತ್ತಷ್ಟುಫೈಟರ್‌ ಜೆಟ್‌ಗಳು ಮತ್ತು ಟ್ಯಾಂಕರ್‌ಗಳ ಅವಶ್ಯಕತೆ ಇದೆ. ಹಾಗಾಗಿ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪೂರೈಸುವಂತೆ ಮಿತ್ರ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.