Asianet Suvarna News Asianet Suvarna News

Russia Ukraine war ಯುದ್ಧ ನಾಡು ಉಕ್ರೇನ್‌ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ನಿಧನ!

  • ಉಕ್ರೇನ್ ಮೇಲೆ ದಾಳಿ ತೀವ್ರಗೊಳಿಸಿದ ರಷ್ಯಾ
  • ಕರ್ನಾಟಕ ವಿದ್ಯಾರ್ಥಿ ಬಲಿಯಾದ ಬೆನ್ನಲ್ಲೇ ಮತೊರ್ವ ಸಾವು
  • 22 ವರ್ಷದ ಚಂದನ್ ಜಿಂದಾಲ್ ನಿಧನ, ಮಡುಗಟ್ಟಿದ ಶೋಕ
Russia war Indian student chandan jindal dies in Ukraine due to stroke after Naveen Shekarappa death ckm
Author
Bengaluru, First Published Mar 2, 2022, 6:13 PM IST

ನವದೆಹಲಿ(ಮಾ.02): ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಂಡಿದೆ. ಬಹುತೇಕ ಪ್ರದೇಶಗಳು ರಷ್ಯ ಕೈವಶ ಮಾಡಿಕೊಂಡಿದೆ. ಕಟ್ಟಡಗಳು, ಜನವಸತಿ ಪ್ರದೇಶಗಳ ಮೇಲೆ ಕ್ಷಿಪಣಿ, ಬಾಂಬ್ ದಾಳಿಗಳು ನಡೆಯುತ್ತಿದೆ. ಅಮಾಯಕ ನಾಗರೀಕರು ಬಲಿಯಾಗುತ್ತಿದ್ದಾರೆ. ರಷ್ಯಾ ದಾಳಿಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಶೇಕರಪ್ಪ ಖಾರ್ಕೀವ್‌ನಲ್ಲಿ ಬಲಿಯಾಗಿದ್ದರು. ಇದರ ಬೆನ್ನಲ್ಲೇ ಉಕ್ರೇನ್‌ನಲ್ಲಿ ಭಾರತದ 2ನೇ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. 

ಕಳೆದ ಕೆಲ ದಿನಗಳಿಂದ ಪಾರ್ಶ್ವವಾಯು ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಂಜಾಬ್‌ನ 22 ವರ್ಷ ಚಂದನ್ ಜಿಂದಾಲ್ ಇಂದು(ಮಾ.02) ಕೊನೆಯುಸಿರೆಳೆದಿದ್ದಾರೆ. ಉಕ್ರೇನ್‌ನ ವಿನಿಟ್ಸಿಯಾ ನ್ಯಾಷನಲ್ ಪೈರೋಗೋವ್ ಮೆಮೋರಿಯಲ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಚಂದನ್ ಜಿಂದಾಲ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೆದುಳು ಸ್ಟ್ರೋಕ್‌ಗೆ ತುತ್ತಾದ ಚಂದನ್ ಜಿಂದಾಲ್ ಕಳೆದ ಒಂದು ತಿಂಗನಿಂದ ವಿನಿಟ್ಸಿಯಾದಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದನ್ ಜಿಂದಾಲ್ ಆರೋಗ್ಯ ಕಳೆದ 1 ವಾರದಲ್ಲಿ ತೀವ್ರವಾಗಿ ಹದಗೆಟ್ಟಿತ್ತು. ಮೆದಳು ನಿಷ್ಕ್ರೀಯಗೊಂಡಿತ್ತು. ಮಗನನ್ನು ಉಳಿಸಲು ಚಂದನ್ ಪೋಷಕರು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆದರೆ ಯಾವುದು ಕೈಗೂಡಲಿಲ್ಲ. 

ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಪೋಷಕರಿಗೆ ಕರೆ ಮಾಡಿ ಪ್ರಧಾನಿ ಮೋದಿ ಸಾಂತ್ವನ!

ಕಳೆದ ಒಂದು ತಿಂಗಳಿನಿಂದ ಚಂದನ್ ಜಿಂದಾಲ್ ತಂದೆ ವಿನಿಟ್ಸಿಯಾ ಆಸ್ಪತ್ರೆಯಲ್ಲಿ ಇದ್ದು, ಮಗನ ಆರೈಕೆಯಲ್ಲಿ ತೊಡಗಿದ್ದರು. ವಿನಿಟ್ಸಿಯಾ ಸುತ್ತಲು ರಷ್ಯಾ ಸೇನೆ ದಾಳಿ ಮಾಡುತ್ತಿದೆ. ವಿನಿಟ್ಸಿಯಾ ಪ್ರದೇಶದಲ್ಲೂ ಸರ್ಕಾರಿ ಕಚೇರಿಗಳ ಮೇಲೆ ರಷ್ಯಾ ದಾಳಿ ನಡೆಸಿದೆ. 

ಮಗನ ಪಾರ್ಥೀವ ಶರೀರವನ್ನು ಭಾರತಕ್ಕೆ ಕರೆದೊಯ್ಯಲು ನೆರವು ನೀಡುವಂತೆ ಚಂದನ್ ಜಿಂದಾಲ್ ತಂದೆ ಕೇಂದ್ರ ಸರ್ಕಾರ ಹಾಗೂ ಉಕ್ರೇನ್ ಅಧಿಕಾರಗಳಲ್ಲಿ ಮನವಿ ಮಾಡಿದ್ದಾರೆ. ಆಸ್ಪತ್ರೆಯಿಂದ ರೋಮಾನಿಯಾದ ಸೈರೆಟ್ ಗಡಿಗೆ ತೆರಳಲು ಚಂದನ್ ಜಿಂದಾಲ್ ತಂದೆ ಪ್ರಯತ್ನ ಮಾಡುತ್ತಿದ್ದಾರೆ. ಸೈರೆಟ್ ಬಾರ್ಡರ್‌ನಿಂದ ಏರ್ ಆ್ಯಂಬುಲೆನ್ಸ್ ಮೂಲಕ ಮಗನ ಪಾರ್ಥೀವ ಶರೀರ ಪಂಜಾಬ್‌ಗೆ ತೆಗೆದುಕೊಂಡು ಹೋಗಲು ಮನವಿ ಮಾಡಿದ್ದಾರೆ.

ಉಕ್ರೇನ್‌ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು, ಸರ್ಕಾರದ ವಿರುದ್ಧ ಪೋಷಕರು ಆಕ್ರೋಶ

ಮಂಗಳವಾರ(ಮಾ.01) ಉಕ್ರೇನ್‌ಲ್ಲಿ ರಷ್ಯಾ ದಾಳಿಗೆ ಕರ್ನಾಟಕದ ಮೂಲದ ನವೀನ್ ಶೆಕರಪ್ಪ ಬಲಿಯಾಗಿದ್ದರು. ನವೀನ್ ಮೃತದೇಹ ಭಾರತಕ್ಕೆ ತರಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ಯುದ್ಧದ ತೀವ್ರತೆ ಹಾಗೂ ಪರಿಸ್ಥಿತಿ ಪ್ರತಿಕೂಲವಲ್ಲದ ಕಾರಣ ವಿಳಂಬವಾಗುತ್ತಿದೆ. ಇದೀಗ ಉಕ್ರೇನ್‌ನಲ್ಲಿ ಸಾವನ್ನಪ್ಪಿದ ಭಾರತದ ಎರಡನೇ ವಿದ್ಯಾರ್ಥಿ ಚಂದನ್ ಜಿಂದಾಲ್ ಮೃತದೇಹ ರವಾನಗೆ ಪ್ರಯತ್ನಗಳು ನಡೆಯುತ್ತಿದೆ.

ಉಕ್ರೇನ್‌ನಲ್ಲಿ ಮಕ್ಕಳು; ರಾಜ್ಯದಲ್ಲಿ ಪೋಷಕರ ಆತಂಕ
ವಿದ್ಯಾರ್ಥಿ ನವೀನ್‌ ಸಾವಿನಿಂದ ಉಕ್ರೇನ್‌ನಲ್ಲಿರುವ ರಾಜ್ಯದ ವಿದ್ಯಾರ್ಥಿಗಳ ಪೋಷಕರು ಮತ್ತು ಕುಟುಂಬಸ್ಥರ ಆತಂಕ ಹೆಚ್ಚಳವಾಗಿದೆ. ತಮ್ಮ ಮಕ್ಕಳನ್ನು ಕರೆತರುವಂತೆ ಮತ್ತಷ್ಟುಪೋಷಕರು ರಾಜ್ಯ ಸಹಾಯವಾಣಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಜತೆಗೆ ಅವರಿಗೆ ನೆರವು ನೀಡುವಂತೆ 300ಕ್ಕೂ ಹೆಚ್ಚು ಕರೆಗಳನ್ನು ಮಾಡಿದ್ದಾರೆ.

ರಾಜ್ಯ ಸರ್ಕಾರದ ‘ಉಕ್ರೇನ್‌ ಕನ್ನಡಿಗರ ಸಹಾಯವಾಣಿ’ಯಲ್ಲಿ ಕಳೆದ ಗುರುವಾರ (ಮೊದಲ ದಿನ) 260 ಮಂದಿ ನೋಂದಣಿಯಾಗಿದ್ದರು. ನಂತರದ ದಿನಗಳಲ್ಲಿ ಹೆಚ್ಚಾಗುತ್ತಾ ಭಾನುವಾರದ ಅಂತ್ಯಕ್ಕೆ ನೋಂದಣಿ 406ಕ್ಕೆ ತಲುಪಿತ್ತು. ಸೋಮವಾರ ಅಂತ್ಯಕ್ಕೆ 450ಕ್ಕೆ ಹೆಚ್ಚಳವಾಗಿತ್ತು. ಸದ್ಯ ಮಂಗಳವಾರ ಮಧ್ಯಾಹ್ನ ನವೀನ್‌ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಹಾಯವಾಣಿಗೆ ನೋಂದಣಿ ಹೆಚ್ಚಳವಾಗುತ್ತಾ ಸಾಗಿದೆ. ಸೋಮವಾರ 250ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಒಟ್ಟಾರೆ ನೋಂದಣಿಯು 693ಕ್ಕೆ ಹೆಚ್ಚಳವಾಗಿದೆ.

ಮಂಗಳವಾರ ಅಂತ್ಯಕ್ಕೆ ಬೆಂಗಳೂರು ನಗರ 425, ಮೈಸೂರು 28, ಬೆಂಗಳೂರು ಗ್ರಾಮಾಂತರ ಮತ್ತು ಬಾಗಲಕೋಟೆ 20, ತುಮಕೂರು 20, ದಕ್ಷಿಣ ಕನ್ನಡ ಮತ್ತು ವಿಜಯಪುರ ತಲಾ 18, ರಾಯಚೂರು 13, ಹಾಸನ ಹಾಗೂ ಬೆಳಗಾವಿ ತಲಾ 12, ಕೊಡಗು 11, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ಹಾವೇರಿ ತಲಾ 10, ಕೋಲಾರ 9, ಉಡುಪಿ ಮತ್ತು ಚಿಕ್ಕಮಗಳೂರು ತಲಾ 7, ಬಳ್ಳಾರಿ 6, ಚಿತ್ರದುರ್ಗ ಮತ್ತು ಬೀದರ್‌ ತಲಾ 5, ಶಿವಮೊಗ್ಗ, ಕಲಬುರಗಿ, ಧಾರವಾಡ ಹಾಗೂ ಚಾಮರಾಜನಗರ ತಲಾ 4, ರಾಮನಗರ, ಉತ್ತರಕನ್ನಡ 3, ಮಂಡ್ಯ ಹಾಗೂ ಕೊಪ್ಪಳ ತಲಾ 3, ಗದಗ 2.

Follow Us:
Download App:
  • android
  • ios