- ನೇರ ಮಾತುಕತೆ ನಡೆಸಿ: ಪುಟಿನ್‌-ಝೆಲೆನ್‌ಸ್ಕಿಗೆ ಮೋದಿ ಆಗ್ರಹ - ಉಭಯ ನಾಯಕರ ಜತೆ ಪ್ರಧಾನಿ ಫೋನ್‌ ಮಾತುಕತೆ - ಭಾರತೀಯರ ಸುರಕ್ಷತೆಗೆ ಪುಟಿನ್‌ಗೂ ಮನವಿ

ನವದೆಹಲಿ(ಮಾ.08): ರಷ್ಯಾ-ಉಕ್ರೇನ್‌ ನಡುವಿನ ಯುದ್ಧ ಬಿಕ್ಕಟ್ಟು ಶಮನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಯತ್ನ ಆರಂಭಿಸಿದ್ದಾರೆ. ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಹಾಗೂ ರಷ್ಯಾ ಅಧ್ಯಕ್ಷ ವೊಲೊದಿಮಿರ್‌ ಪುಟನ್‌ ಅವರಿಗೆ ಆಗ್ರಹಿಸಿದ್ದಾರೆ. ಸೋಮವಾರ ಉಭಯ ದೇಶಗಳ ನಾಯಕರ ಜತೆ ಮೋದಿ ಪ್ರತ್ಯೇಕವಾಗಿ ದೂರವಾಣಿಯಲ್ಲಿ ಚರ್ಚೆ ನಡೆಸಿದರು. ‘ಈಗ ನಡೆಯುತ್ತಿರುವ ನಿಮ್ಮ ನಿಯೋಗ ಮಟ್ಟದ ಮಾತುಕತೆಗಳ ಹೊರತಾಗಿ ನೇರಾನೇರ ನೀವೇ ಮಾತುಕತೆ ನಡೆಸಿ’ ಎಂದು ಮೋದಿ ಕೋರಿದರು ಎಂದು ಮೂಲಗಳು ಹೇಳಿವೆ.

ಉಕ್ರೇನ್‌ ಅಧ್ಯಕ್ಷರ ಜತೆಗಿನ ಮಾತುಕತೆ ವೇಳೆ ಮೋದಿ ಅವರಿಗೆ ಜೆಲೆನ್‌ಸ್ಕಿ ಅವರು ಈಗ ನಡೆದಿರುವ ನಿಯೋಗ ಮಟ್ಟದ ಮಾತುಕತೆಗಳ ಬಗ್ಗೆ ಮಾಹಿಗತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ಕೂಡಲೇ ಹಿಂಸೆ ನಿಲ್ಲಿಸಬೇಕು. ಭಾರತ ಯಾವತ್ತೂ ಉಭಯ ದೇಶಗಳ ಬಿಕ್ಕಟ್ಟನ್ನು ಶಾಂತ ರೀತಿ ಪರಿಹರಿಸುವ ಹಾಗೂ ನೇರ ಮಾತುಕತೆಯ ಪರವಾಗಿದೆ’ ಎಂದರು ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.

Petrol Diesel Price ಯುದ್ಧ, ರೂಪಾಯಿ ಮೌಲ್ಯ ಕುಸಿತ,ಮಧ್ಯರಾತ್ರಿಯಿಂದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಾಧ್ಯತೆ!

ಇನ್ನು ಪುಟಿನ್‌ಗೂ ಇದೇ ಮಾತು ಹೇಳಿದ ಮೋದಿ, ‘ನಿಯೋಗ ಮಟ್ಟದ ಮಾತುಕತೆ ಹೊರತಾಗಿ ಜೆಲೆನ್‌ಸ್ಕಿ ಜತೆ ನೇರ ಮಾತುಕತೆ ನಡೆಸಿ’ ಎಂದು ಕೋರಿದರು. ಆಗ ನಿಯೋಗ ಮಟ್ಟದ ಮಾತುಕತೆಯ ವಿದ್ಯಮಾನಗಳ ಬಗ್ಗೆ ಪುಟಿನ್‌ ಮಾಹಿತಿ ನೀಡಿದರು. ನಿಯೋಗ ಮಟ್ಟದ ಮಾತುಕತೆ ಬಗ್ಗೆಯೂ ಮೋದಿ ಶ್ಲಾಘಿಸಿದರು ಎಂದು ಮೂಲಗಳು ಹೇಳಿವೆ.

ಪುಟಿನ್‌, ಜೆಲೆನ್‌ಸ್ಕಿಗೆ ಮೋದಿ ಫೋನ್‌ ಕರೆ
ಉಕ್ರೇನ್‌ ಯುದ್ಧದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಅವರ ಜತೆ ಸೋಮವಾರ ಪ್ರತ್ಯೇಕವಾಗಿ ಸುದೀರ್ಘ ದೂರವಾಣಿ ಚರ್ಚೆ ನಡೆಸಿದ್ದಾರೆ. ಈ ವೇಳೆ, ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಮನವಿ ಮಾಡಿರುವ ಅವರು, ಉಕ್ರೇನ್‌ನಲ್ಲಿನ ಭಾರತೀಯರ ತೆರವು ಕಾರ್ಯಾಚರಣೆಗೆ ಬೆಂಬಲ ನೀಡಬೇಕು ಎಂದು ಕೋರಿದ್ದಾರೆ.

Ukraine Russia crisis: ಅತ್ತ ಕದನ ವಿರಾಮ, ಇತ್ತ ರಾಕೆಟ್ ಸಂಗ್ರಾಮ

ಜೆಲೆನ್‌ಸ್ಕಿ ಜತೆ 35 ನಿಮಿಷ ದೂರವಾಣಿಯಲ್ಲಿ ಮೋದಿ ಮಾತುಕತೆ ನಡೆಸಿದರು. ‘ಉಕ್ರೇನ್‌ನ ಸುಮಿಯಲ್ಲಿ 700 ಭಾರತೀಯರು ಸಿಲುಕಿ ಸಂಕಷ್ಟದಲ್ಲಿದ್ದಾರೆ. ಅವರ ಸುರಕ್ಷಿತ ತೆರವಿಗೆ ಸಹಕರಿಸಬೇಕು ಎಂದು ಮೋದಿ ಕೋರಿದರು. ದೇಶದಲ್ಲಿನ ಯುದ್ಧ ಹಾಗೂ ಮಾನವೀಯತೆ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ಈವರೆಗೆ ಸುಮಾರು 20 ಸಾವಿರ ಜನರನ್ನು ಉಕ್ರೇನ್‌ನಿಂದ ತೆರವುಗೊಳಿಸಲಾಗಿದ್ದು, ಇದಕ್ಕೆ ಸಹಕರಿಸಿದ್ದಕ್ಕೆ ಜೆಲೆನ್‌ಸ್ಕಿಗೆ ಧನ್ಯವಾದ ತಿಳಿಸಿದರು’ ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ.

ಮಾತುಕತೆ ಬಗ್ಗೆ ಟ್ವೀಟ್‌ ಮಾಡಿರುವ ಜೆಲೆನ್‌ಸ್ಕಿ, ‘ರಷ್ಯಾ ದಾಳಿಯನ್ನು ಹೇಗೆ ಎದುರಿಸುತ್ತಿರುವುದಾಗಿ ಮೋದಿ ಅವರಿಗೆ ತಿಳಿಸಿದೆ. ಭಾರತೀಯ ಜನರ ರಕ್ಷಣೆಗೆ ನಾವು ಕೈಗೊಂಡ ಕ್ರಮಗಳ ಬಗ್ಗೆ ಮೋದಿ ಪ್ರಶಂಸಿಸಿದರು. ಶಾಂತಿ ಮಾತುಕತೆಗೆ ನಾವು ಬದ್ಧರಾಗಿದ್ದೇವೆ’ ಎಂದಿದ್ದಾರೆ. ಅಲ್ಲದೆ, ‘ಉಕ್ರೇನ್‌ ಜನತೆಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದ’ ಎಂದೂ ಮೋದಿ ಅವರಿಗೆ ತಿಳಿಸಿದ್ದಾರೆ.

ಭಾರತೀಯರ ಸುರಕ್ಷತೆಗೆ ಪುಟಿನ್‌ಗೂ ಮನವಿ:
ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಜತೆಗೂ ಮೋದಿ 55 ನಿಮಿಷ ಕಾಲ ದೂರವಾಣಿಯಲ್ಲಿ ಚರ್ಚಿಸಿದರು. ‘ಸುಮಿಯಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಯ ಮಹತ್ವದ ಬಗ್ಗೆ ವಿವರಿಸಿದರು. ಜನರ ಸುರಕ್ಷಿತ ತೆರವಿಗೆ ಉಕ್ರೇನ್‌ನ ಹಲವು ಕಡೆ ರಷ್ಯಾ ಸಾರಿರುವ ಯುದ್ಧವಿರಾಮದ ಬಗ್ಗೆಯೂ ಪ್ರಶಂಸಿಸಿದರು’ ಎಂದು ಮೂಲಗಳು ಹೇಳಿವೆ.