Ukraine Crisis ಆಪರೇಶನ್ ಗಂಗಾ ಯಶಸ್ವಿ ಕಾರ್ಯಾಚರಣೆ, 76 ವಿಮಾನದಲ್ಲಿ 15,920 ವಿದ್ಯಾರ್ಥಿಗಳ ರಕ್ಷಣೆ!
- ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯರ ರಕ್ಷಣಾ ಕಾರ್ಯ
- ಭಾರತದ ಯಶಸ್ವಿ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಸಚಿವ
- 76 ವಿಮಾನದಲ್ಲಿ 15,920 ವಿದ್ಯಾರ್ಥಿಗಳ ಕರೆತಂದ ಭಾರತ
ನವದೆಹಲಿ(ಮಾ.06): ಉಕ್ರೇನ್ ಮೇಲೆ ರಷ್ಯಾ ಸಾರಿದ ಯುದ್ಧ 11 ದಿನಗಳು ಕಳೆದಿದೆ. ಒಂದೊಂದೆ ನಗರದ ಮೇಲೆ ದಾಳಿ ಮಾಡಿ ಧ್ವಂಸ ಮಾಡುತ್ತಿದೆ. ಈ ಯುದ್ಧ ನಾಡಿನಲ್ಲಿ ಸುಲಿಕಿದ್ದ ನಾಗರೀಕರ ರಕ್ಷಣೆ ಅತ್ಯಂತ ಸವಾಲಿನಿಂದ ಕೂಡಿತ್ತು. ಆದರೆ ಭಾರತ ಆಪರೇಶನ್ ಗಂಗಾ ಮಿಶನ್ ಅಡಿಯಲ್ಲಿ ಯಶಸ್ವಿಯಾಗಿ 15,920 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ ಭಾರತಕ್ಕೆ ಕರೆ ತರಲಾಗಿದೆ.ಈ ಕುರಿತು ಕೇಂದ್ರ ವಿಮಾನಯಾನ ಸಚಿವ, ರಕ್ಷಣಾ ಕಾರ್ಯದಲ್ಲಿ ನಿರತವಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ ಮಾಹಿತಿ ನೀಡಿದ್ದಾರೆ.
ಆಪರೇಶನ್ ಗಂಗಾ ಮಿಶನ್ ಅಡಿಯಲ್ಲಿ ಇದುವರೆಗೆ 76 ವಿಮಾನಗಳ ಬಳಕೆ ಮಾಡಲಾಗಿದೆ. ಈ ಮೂಲಕ 15,920 ವಿದ್ಯಾರ್ಥಿಗಳನ್ನು ಯುದ್ಧಪೀಡಿತ ಉಕ್ರೇನ್‌ನಿಂದ ರಕ್ಷಿಸಿ ಯಶಸ್ವಿಯಾಗಿ ಭಾರತಕ್ಕೆ ಕರೆ ತರಲಾಗಿದೆ. ಇದರಲ್ಲಿ ರೋಮಾನಿಯಾದಿಂದ 31 ವಿಮಾನದ ಮೂಲಕ 6,680 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತರಲಾಗಿದೆ. ಪೊಲೆಂಡ್‌ನಿಂದ 13 ವಿಮಾನದ ಮೂಲಕ 2,822 ಭಾರತೀಯರನ್ನು ರಕ್ಷಿಸಲಾಗಿದೆ. ಇನ್ನು ಹಂಗೇರಿಯಿಂದ 26 ವಿಮಾನದ ಮೂಲಕ 5,300 ಮಂದಿಯನ್ನು ರಕ್ಷಿಸಲಾಗಿದೆ. ಸ್ಲೋವಾಕಿಯಾದಿಂದ 1,118 ವಿದ್ಯಾರ್ಥಿಗಳನ್ನು 6 ವಿಮಾನಗಳ ಮೂಲಕ ರಕ್ಷಿಸಿ ಭಾರತಕ್ಕೆ ಯಶಸ್ವಿಯಾಗಿ ಕರೆ ತರಲಾಗಿದೆ.
Russia Ukraine war : ಭಾರತಕ್ಕೆ 9 ಬಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಆಮದು ಇನ್ನೂ ಬಾಕಿ!
ಖಾರ್ಕೀವ್‌ನಿಂದ ಬಹುತೇಕ ಎಲ್ಲಾ ಭಾರತೀಯರ ರಕ್ಷಣೆ
ಉಕ್ರೇನ್‌ನಲ್ಲಿ ಭಾರತೀಯರು ಅತಿಹೆಚ್ಚಿನ ಸಂಖ್ಯೆಯಲ್ಲಿದ್ದ ನಗರವಾದ ಖಾರ್ಕೀವ್‌ನಿಂದ ಬಹುತೇಕ ಎಲ್ಲಾ ಭಾರತೀಯರನ್ನೂ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ ಎಂದು ಭಾರತ ಸರ್ಕಾರ ಶನಿವಾರ ಹೇಳಿದೆ. ಖಾರ್ಕೀವ್ ನಂತರ ಈಗ ಸುಮಿ ನಗರದಿಂದ ಭಾರತೀಯರನ್ನು ಸ್ಥಳಾಂತರಿಸುವತ್ತ ಸರ್ಕಾರ ಗಮನ ಹರಿಸಿದೆ.
ಸಚಿವ ಕಿರಣ್ರಿಜಿಜು, ಹರ್ದೀಪ್‌ಪುರಿ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ವಿ.ಕೆ.ಸಿಂಗ್ ಅವರನ್ನು ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಉಕ್ರೇನ್‌ನ ನೆರೆಯ ದೇಶಗಳಿಗೆ ಕಳುಹಿಸಲಾಗಿದೆ.ನಾಲ್ವರು ಸಚಿವರು ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
Russia Ukraine War ರಷ್ಯಾ ಯುದ್ಧವಿಮಾನ ಹೊಡೆದುರುಳಿಸಿದ ಉಕ್ರೇನ್, ಪುಟಿನ್ ಪಡೆಗೆ ತೀವ್ರ ಹಿನ್ನಡೆ!
ಸುಮಿ ಆಪರೇಶನ್ ಸವಾಲು
ಯುದ್ಧಪೀಡಿತ ಉಕ್ರೇನ್‌ನ ಸುಮಿ ಪ್ರದೇಶದಲ್ಲಿ ಸಿಲುಕಿರುವ 15-20 ಕನ್ನಡಿಗರ ಸಂಪರ್ಕ ಕಷ್ಟವಾಗುತ್ತಿದೆ. ಶೀಘ್ರ ಅಲ್ಲಿಯೂ ಬಸ್ ಸೌಲಭ್ಯ ವ್ಯವಸ್ಥೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಉಕ್ರೇನ್ ಕನ್ನಡಿಗರ ರಕ್ಷಣಾ ಕಾರ್ಯದ ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಸೋಚಿನ್‌ನಲ್ಲಿ 37, ಸುಮಿಯಲ್ಲಿ 15-20 ಕನ್ನಡಿಗರು ಇದ್ದಾರೆ. ಸುಮಿ ಪ್ರದೇಶದಲ್ಲಿ ಶೆಲ್ ದಾಳಿ ನಡೆಯುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳ ಸಂಪರ್ಕ ಕಷ್ಟವಾಗುತ್ತಿದೆ. ಅವರು ಹೊರ ಬರದಂತಹ ಸ್ಥಿತಿಯಲ್ಲಿದ್ದಾರೆ. ಈ ಎರಡು ಪ್ರದೇಶದಲ್ಲಿಯೂ ಉಕ್ರೇನ್ ಮತ್ತು ರಷ್ಯಾ ರಾಯಭಾರಿ ಕಚೇರಿ ಅಧಿಕಾರಿಗಳ ನೆರವಿನೊಂದಿಗೆ ವಿದ್ಯಾರ್ಥಿಗಳನ್ನು ಗಡಿಗೆ ತರಲು ಬಸ್ ವ್ಯವಸ್ಥೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ದೇಶಗಳ ನಾಗರಿಕರ ಸ್ಥಳಾಂತರಕ್ಕೆ ಬಸ್ಸುಗಳ ವ್ಯವಸ್ಥೆ ಮಾಡುವುದಾಗಿ ರಷ್ಯಾ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಶನಿವಾರ ಮಾಹಿತಿ ನೀಡಿದೆ. ಸದ್ಯ ಪೂರ್ವ ಉಕ್ರೇನ್‌ನ ಖಾರ್ಕಿವ್ ಮತ್ತು ಸುಮಿ ನಗರಗಳಲ್ಲಿ ಬಸ್ ಸಂಚಾರ ವ್ಯವಸ್ಥೆ ಮಾಡಿದ್ದಾಗಿ ರಷ್ಯಾ ತಿಳಿಸಿದೆ. ರಷ್ಯಾ, ಉಕ್ರೇನ್‌ನಲ್ಲಿರುವ ನ್ಯುಕ್ಲಿಯರ್ ಪವರ್ ಪ್ಲಾಂಟ್ ವಶಕ್ಕೆ ಪಡೆದ ಬೆನ್ನಲ್ಲೇ ಭದ್ರತಾ ಮಂಡಳಿಯ 15 ರಾಷ್ಟ್ರಗಳು ಶುಕ್ರವಾರ ತುರ್ತು ಸಭೆ ನಡೆಸಿದವು. ಈ ಸಭೆಯಲ್ಲಿ ರಷ್ಯಾದ ಶಾಶ್ವತ ಪ್ರತಿನಿಧಿ, ‘ವಿದೇಶಿಯರ ಶಾಂತಿಯುತ ಸ್ಥಳಾಂತರ ಪ್ರಕ್ರಿಯೆಗೆ ರಷ್ಯಾ ಮಿಲಿಟರಿ ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದೆ. ಆದರೆ ಉಕ್ರೇನ್ 3700 ಭಾರತೀಯರು, 2700 ವಿಯೆಟ್ನಾಂ, ಚೀನಾದ 121 ಜನರು ಸೇರಿ ಅನೇಕರನ್ನು ಖಾರ್ಕಿವ್ ಮತ್ತು ಸುಮಿನಲ್ಲಿ ಒತ್ತೆಯಾಗಿರಿಸಿಕೊಂಡಿದೆ’ ಎಂದು ಆರೋಪಿಸಿದ್ದಾರೆ.