Asianet Suvarna News Asianet Suvarna News

ದೇವರನಾಡಿನಲ್ಲಿ ಆಡಳಿತರೂಢ ಪಕ್ಷ ಮತ್ತೆ ಅಧಿಕಾರಕ್ಕೆ: ನಾಲ್ಕು ದಶಕದ ಇತಿಹಾಸ!

ಕೇರಳ ಚುನಾವಣೆಯಲ್ಲಿ ಗೆಲುವಿನತ್ತ ದಾಪುಗಾಲಿಡುತ್ತಿದೆ ಆಡಳಿತಾರೂಢ ಎಲ್‌ಡಿಎಫ್‌| ಮುನ್ನಡೆ ಕಾಯ್ದುಕೊಂಡ ಪಿಣರಾಯಿ ವಿಜಯನ್| ನಾಲ್ಕು ದಶಕದ ಇತಿಹಾಸ

Ruling Left Alliance Set To Break 40 Year Old Tradition Retain Power pod
Author
Bangalore, First Published May 2, 2021, 1:30 PM IST

ತಿರುವನಂತಪುರಂ(ಮೇ.02): ಕೇರಳದ ಚುನಾವಣಾ ಫಲಿತಾಂಶ ಬಹುತೇಕ ಲಭಿಸಿದ್ದು, ಆಡಳಿತಾರೂಢ ಎಲ್‌ಡಿಎಫ್‌ ಮೈತ್ರಿ ಗೆಲುವಿನತ್ತ ದಾಪುಗಾಲಿಡುತ್ತಿದೆ. ಕೇರಳದಲ್ಲಿ ನಾಲ್ಕು ದಶಕದಲ್ಲಿ ಆಡಳಿತ ಪಕ್ಷವೊಂದು ಮತ್ತೆ ಅಧಿಕಾರಕ್ಕೇರುತ್ತಿರುವುದು ಇದೇ ಮೊದಲು. ಈವರೆಗಿನ ಫಲಿತಾಂಶದನ್ವಯ 89 ಕ್ಷೇತ್ರಗಳಲ್ಲಿ ಎಲ್‌ಡಿಎಫ್‌ ಮುನ್ನಡೆ ಸಾಧಿಸಿದೆ. ಈ ಮೂಲಕ ಬಹುಮತ ಸಾಧಿಸಲು ಬೇಕಾದ 71 ಸ್ಥಾನಗಳ ಲಕ್ಷ್ಮಣ ರೇಖೆ ದಾಟಿದೆ. ಇನ್ನು ಅತ್ತ ಕಾಂಗ್ರೆಸ್‌ ಮೈತ್ರಿ ಯುಡಿಎಫ್‌ 46 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. 

ಅತ್ತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಧರ್ಮಾದಮ್ ಕ್ಷೇತ್ರದಲ್ಲಿ ವಿರೋಧಿ ಅಭ್ಯರ್ಥಿಗಿಂತ ಭಾರೀ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಪಲಕ್ಕಾಡ್‌ನಿಂದ ಕಣಕ್ಕಿಳಿದಿದ್ದ ಮೆಟ್ರೋ ಮ್ಯಾನ್ ಶ್ರೀಧರನ್ ಎರಡು ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆಂಬುವುದು ಬಿಜೆಪಿ ಪಾಲಿನ ಖುಷಿಯ ವಿಚಾರ. ಅವರು ಯುಡಿಎಫ್‌ ಅಭ್ಯರ್ಥಿ ಶಫಿ ಪರಾಂಬಿಲ್‌ರನ್ನು ಹಿಂದಿಕ್ಕಿದ್ದಾರೆ. ಇನ್ನು ಶಫಿ ಈ ಕ್ಷೇತ್ರದಿಂದ ಮೂರನೇ ಬಾರಿ ಕಣಕ್ಕಿಳಿದಿದ್ದರು.  

ಇನ್ನು ಎಲ್ಲಾ ಮತಗಟ್ಟೆ ಸಮೀಕ್ಷೆಗಳು ರಾಜ್ಯದಲ್ಲಿ ಆಡಳಿತಾರೂಢ ಲೆಫ್ಟ್‌ ಡೆಮಾಕ್ರಟಿಕ್ ಫ್ರಂಟ್ ಮೈತ್ರಿ ಹಾಗೂ ಕಾಂಗ್ರೆಸ್‌ ಮೈತ್ರಿಯ ಯುಡಿಎಫ್ ನಡುವೆ ಭಾರೀ ಪೈಪೋಟಿ ಏರ್ಪಡಲಿದೆ ಎಂದಿದ್ದವು. ಈ ಸಮೀಕ್ಷೆಗಳು ನಿಜವಾಗಿದ್ದು, ಎರಡು ಮೈತ್ರಿ ಪಾಳಯಗಳ ನಡುವೆ ಭಾರೀ ಹಣಾಹಣಿ ಏರ್ಪಟ್ಟಿದ್ದು, ಯುಡಿಎಫ್ ಸದ್ಯ ಎರಡನೇ ಸ್ಥಾನದಲ್ಲಿದೆ. 

ಕೇರಳ ಚುನಾವಣೆ: ಎಡರಂಗಕ್ಕೆ ಕಾಂಗ್ರೆಸ್‌, ಬಿಜೆಪಿ ಸವಾಲು!: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

ಕಳೆದ ಚುನಾವಣೆ ಹೇಗಿತ್ತು?

2016ರ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್‌ 140 ಸ್ಥಾನಗಳಲ್ಲಿ 90 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ವಿಜಯ ಪತಾಕೆ ಹಾರಿಸಿತ್ತು. ಕಾಂಗಗ್ರೆಸ್‌ 47 ಸ್ಥಾನಗಳಲ್ಲಿ ಗೆದ್ದು ಸಮಾಧಾನಪಟ್ಟುಕೊಂಡಿತ್ತು. ಇನ್ನು ಬಿಜೆಪಿ ಮೊದಲ ಬಾರಿ ಒಂದು ಸ್ಥಾನದಲ್ಲಿ ಗೆದ್ದು ತನ್ನ ಖಾತೆ ತೆರೆದಿತ್ತು. 

ನಲ್ವತ್ತು ವರ್ಷದ ಇತಿಹಾಸ

ಕೇರಳದಲ್ಲಿ ಇದಕ್ಕೂ ಮುನ್ನ 1980ರ ದಶಕದಿಂದ ಸತತವಾಗಿ ಒಂದೇ ಪಕ್ಷ ಸರ್ಕಾರ ರಚಿಸಿದೆ.  1970 ರಿಂದ 72 ಹಾಗೂ 1977ರ ಚುನಾವಣೆಯಲ್ಲಿ 111 ಸ್ಥಾನಗಳಲ್ಲಿ ಗೆದ್ದು ಸಂಯುಕ್ತ ಮೋರ್ಚಾ ಸತತ ಎರಡು ಬಾರಿ ಗೆದ್ದು ಸರ್ಕಾರ ರಚಿಸಿತ್ತು. ಇದಾದ ಬಳಿಕ ಎಲ್‌ಡಿಎಫ್‌ ಹಾಗೂ ಯುಡಿಎಫ್‌ ನಡುವೆ ಅಧಿಕಾರ ಅದಲು ಬದಲಾಗುತ್ತಿತ್ತು. 

ಕಡಿಮೆ ಮತದಾನ:

ಕೇರಳ ವಿಧಾನಸಭಾ ಚುನಾವಣೆಯಲ್ಲಿ 1.32ಕೋಟಿ ಪುರುಷರು ಹಾಗೂ 1.41 ಕೋಟಿ ಮಹಿಳಾ ಮತದಾರರಿದ್ದಾರೆ. ಆದರೆ ಈ ಬಾರಿ ಚುನಾವಣೆಯಲ್ಲಿ ಕೇವಲ ಶೇ.74.57 ರಷ್ಟು ಮಂದಿ ಮತ ಚಲಾಯಿಸಿದ್ದರು. ಅಂದರೆ ಕಳೆದ ಬಾರಿಗಿಂತ ಶೇ. 2 ರಷ್ಟು ಕಡಿಮೆ.

"

Follow Us:
Download App:
  • android
  • ios