* ಅರ್ಧ ತಾಸಲ್ಲಿ ಕೋವಿಡ್‌ ವರದಿ: ಬಂದಿದೆ ಹೊಸ ಟೆಸ್ಟ್‌*  ಆರ್‌ಟಿಎಲ್‌ಎಎಂಪಿ ವಿಧಾನ ಬಳಸಲು ಸರ್ಕಾರಕ್ಕೆ ತಜ್ಞರ ಸಲಹೆ* ರೂಪಾಂತರಿ ಪರೀಕ್ಷೆ ಅಗತ್ಯವಿದೆಯೋ ಇಲ್ಲವೊ ಎಂಬುದನ್ನು ಕೂಡಾ ತಿಳಿಸುತ್ತದೆ* ಸದ್ಯ ನಡೆಸುತ್ತಿರುವ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ  ಐದು ಗಂಟೆಗಳಲ್ಲಿ ವರದಿ 

ಬೆಂಗಳೂರು(ಡಿ. 17) ಕೊರೋನಾ (Coronavirus) ಸೋಂಕನ್ನು ತ್ವರಿತವಾಗಿ ಪತ್ತೆಹಚ್ಚಲು ಆರ್‌ಟಿಎಲ್‌ಎಎಂಪಿ (RTLAMP) ಎಂಬ ನೂತನ ಪರೀಕ್ಷಾ ವಿಧಾನವನ್ನು ಬಳಸುವಂತೆ ಕೆಲ ತಜ್ಞರು ರಾಜ್ಯ ಸರ್ಕಾರಕ್ಕೆ ಶಿಫಾರಸು ನೀಡಿದ್ದಾರೆ ಎನ್ನಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (IMA) ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಅಭಿವೃದ್ಧಿ ಪಡಿಸಿರುವ ಈ ನೂತನ ತಂತ್ರಜ್ಞಾನವು 30 ನಿಮಿಷಗಳಲ್ಲಿ ಕೊರೋನಾ ವರದಿಯನ್ನು ನೀಡುತ್ತದೆ. 

ಅಲ್ಲದೆ, ರೂಪಾಂತರಿ (Delta) ಪರೀಕ್ಷೆ ಅಗತ್ಯವಿದೆಯೋ ಇಲ್ಲವೊ ಎಂಬುದನ್ನು ಕೂಡಾ ತಿಳಿಸುತ್ತದೆ. ಸದ್ಯ ರಾಜ್ಯದಲ್ಲಿ ಆ ಪರೀಕ್ಷಾ ಉಪಕರಣ ಲಭ್ಯವಿಲ್ಲ. ಭವಿಷ್ಯದಲ್ಲಿ ಬಳಸಿಕೊಳ್ಳಲು ಕ್ರಮವಹಿಸಿ ಎಂದು ತಜ್ಞರು ಸೂಚಿಸಿದ್ದಾರೆ.

ಸದ್ಯ ನಡೆಸುತ್ತಿರುವ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ನಾಲ್ಕರಿಂದ ಐದು ಗಂಟೆಗಳಲ್ಲಿ ವರದಿ ಬರುತ್ತದೆ. ಈ ನೂತನ ವಿಧಾನ ಅತಿ ವೇಗವಾಗಿ ಸೋಂಕಿನ ವಿಶ್ಲೇಷಣೆ ನಡೆಸಲಿದೆ. ರಾಜ್ಯದ ವಿಮಾನ ನಿಲ್ದಾಣ, ಮಾಲ್‌, ಸಿನಿಮಾ ಮಂದಿರ, ಜನದಟ್ಟಣೆ ಇರುವಲ್ಲಿ ಈ ವಿಧಾನ ಬಳಸಬಹುದಾಗಿದೆ.

ಓಮಿಕ್ರೋನ್‌ ಚಿಕಿತ್ಸೆ ಹೆಸರಿನಲ್ಲಿ ವಂಚನೆ: ಓಮಿಕ್ರೋನ್‌ ( Omicron Covid variant) ಸೋಂಕು ಬಾರದ ಹಾಗೆ ಔಷಧ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ನಕಲಿ ವೈದ್ಯನೊಬ್ಬನ ಕ್ಲಿನಿಕ್‌ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ದಾಳಿ ನಡೆಸಿದ ಘಟನೆ ಗುರುವಾರ ಚಿಕ್ಕನಾಯಕನಹಳ್ಳಿ ದಸೂಡಿ ಗ್ರಾಮದಲ್ಲಿ ನಡೆದಿದೆ. ಸಾದತ್‌ ಎಂಬಾತ ‘ಖಲಂದರಿಯಾ ಮೆಡಿಕಲ್‌’ ಹೆಸರಲ್ಲಿ ಕ್ಲಿನಿಕ್‌ ನಡೆಸುತ್ತಿದ್ದ. ಯಾರಾದರೂ ನೆಗಡಿ, ಕೆಮ್ಮು ಎಂದು ಈತನ ಮೆಡಿಕಲ್‌ಗೆ ಹೋದರೆ ಓಮಿಕ್ರೋನ್‌ ಲಕ್ಷಣ ಎಂದು ಹೆದರಿಸಿ ಅದು ಬಾರದ ಹಾಗೆ ಮಾತ್ರೆ ಕೊಡುತ್ತೇನೆಂದು ಹೇಳಿ ಹಣ ಸಂಪಾದಿಸುತ್ತಿದ್ದ ಎನ್ನಲಾಗಿದೆ. ಬಿ​-ಫಾರ್ಮಾ ಮಾಡಿಕೊಂಡಿದ್ದ ಸಾದತ್‌ ತಾನು ಎಂ.ಎಸ್‌. ಮಾಡಿದ್ದೇನೆಂದು ಸುಳ್ಳು ಹೇಳಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಡಿಎಚ್‌ಒ ದಾಳಿ ನಡೆಸಿದರು. ಆದರೆ ಆವೇಳೆ ಸಾದತ್‌ ತನ್ನ ಮೆಡಿಕಲ್‌ಗೆ ಬಾಗಿಲು ಮುಚ್ಚಿ ಪರಾರಿಯಾಗಿದ್ದ. ಮೆಡಿಕಲ್‌ ಹೊರಗೆ ಮಾತ್ರೆಗಳು, ಸಿರಿಂಜ್‌ಗಳು ಬಿದ್ದಿದ್ದವು. ಅವುಗಳೆಲ್ಲವನ್ನು ವಶಕ್ಕೆ ಪಡೆದು ಠಾಣೆಯಲ್ಲಿ ದೂರು ನೀಡಲಾಗಿದೆ.

ಕರ್ನಾಟಕದಲ್ಲಿಯೂ ಓಮಿಕ್ರೋನ್ ಸ್ಫೋಟ, ಒಂದೆ ದಿನ ಐದು ಕೇಸ್

ಓಮಿಕ್ರಾನ್‌ ಬಾರದ ಹಾಗೆ ಔಷಧ ಕೊಡಿಸುವುದಾಗಿ ನಂಬಿಸಿ ಗ್ರಾಮಸ್ಥರನ್ನು ವಂಚಿಸುತ್ತಿದ್ದ. ಈ ಸಂಬಂಧ ಚಿಕ್ಕನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಡಿಎಚ್‌ಒಗೆ ದೂರು ಬಂದಿತ್ತು. 

ಬ್ರಿಟನ್ನಲ್ಲಿ (England) ಕೋವಿಡ್‌ ಸ್ಫೋಟ:  ಬ್ರಿಟನ್‌ನಲ್ಲಿ ಕೊರೋನಾ ಸ್ಫೋಟಗೊಂಡಿದ್ದು ಗುರುವಾರ 78,610 ಹೊಸ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕದ ಆರಂಭದಿಂದಲೂ ಒಂದೇ ದಿನ ದಾಖಲಾದ ಪ್ರಕರಣಗಳಲ್ಲಿ ಇದು ಗರಿಷ್ಟವಾಗಿದೆ. ಈ ಹಿಂದೆ ಜ.8ರಂದು 68,053 ಮಂದಿಗೆ ಸೋಂಕು ಹಬ್ಬಿದ್ದು, ಈವರೆಗಿನ ಅತಿಹೆಚ್ಚು ದೈನಂದಿನ ಕೇಸ್‌ ಆಗಿತ್ತು. ಒಮಿಕ್ರೋನ್‌ ಹಾಗೂ ಡೆಲ್ಟಾರೂಪಾಂತರಿಯ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಕೊರೋನಾ ಪ್ರಕರಣಗಳ ಸಂಖ್ಯೆ ವೇಗವಾಗಿ ದ್ವಿಗುಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮಹಾಮಾರಿ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಎಚ್ಚರಿಕೆ ನೀಡಿದ್ದಾರೆ.

ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಇದರಿಂದ ಎಚ್ಚೆತ್ತ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸ್‌ನ್‌ ಬೂಸ್ಟರ್‌ ಡೋಸ್‌ ನೀಡುವ ಅಭಿಯಾನ ಚುರುಕುಗೊಳಿಸಲು ನಿರ್ಧರಿಸಿದ್ದಾರೆ. ಬ್ರಿಟನ್‌ನಲ್ಲಿ ಬುಧವಾರ 656,711 ಬೂಸ್ಟರ್‌ ಡೋಸ್‌ಗಳನ್ನು ನೀಡಲಾಗಿದೆ. ಒಟ್ಟಾರೆ 6.7 ಕೋಟಿ ಜನಸಂಖ್ಯೆ ಹೊಂದಿದ ಬ್ರಿಟನ್‌ನಲ್ಲಿ ಈವರೆಗೆ 1.1 ಕೋಟಿ ಜನ ಸೋಂಕಿಗೆ ತುತ್ತಾಗಿದ್ದು, 1.46 ಲಕ್ಷ ಜನರನ್ನು ಸೋಂಕು ಬಲಿತೆಗೆದುಕೊಂಡಿದೆ.