ಮತಾಂತರಕ್ಕೆ ಅಮೆಜಾನ್ ನೆರವು..? ಆರೆಸ್ಸೆಸ್ ಸಂಬಂಧಿತ ಮಾಸಿಕ ‘ಆರ್ಗನೈಸರ್’ ಗಂಭೀರ ಆರೋಪ
ಈಶಾನ್ಯ ಭಾರತದ ಕ್ರೈಸ್ತ ಸಂಘಟನೆಗೆ ಅಮೆಜಾನ್ ಹಣ ನೀಡುತ್ತಿದ್ದು, ಈ ಸಂಘಟನೆಯಿಂದ ಈಶಾನ್ಯ ಭಾರತದಲ್ಲಿ ಮತಾಂತರ ಮಾಡಲಾಗುತ್ತಿದೆ ಎಂದು ಆರ್‌ಎಸ್‌ಎಸ್ ಸಂಬಂಧಿತ ಮಾಸಿಕ ಆರ್ಗನೈಸರ್ ಗಂಭೀರ ಆರೋಪ ಮಾಡಿದೆ.
ನವದೆಹಲಿ: ಜಗತ್ತಿನ ದೈತ್ಯ ಇ-ಕಾಮರ್ಸ್ ಕಂಪನಿ ‘ಅಮೆಜಾನ್’ (Amazon) ಭಾರತದ ಈಶಾನ್ಯ ರಾಜ್ಯಗಳಲ್ಲಿ (North East India) ಕ್ರೈಸ್ತ ಧರ್ಮಕ್ಕೆ (Christianity) ಜನರನ್ನು ಮತಾಂತರ (Religious Conversion) ಮಾಡಲು ಮಿಷನರಿಗಳಿಗೆ (Missionaries) ಹಣ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆರ್‌ಎಸ್‌ಎಸ್ (RSS) ಜೊತೆ ನಂಟು ಹೊಂದಿರುವ ‘ಆರ್ಗನೈಸರ್’ (Organizer) ಪತ್ರಿಕೆ ಈ ಕುರಿತು ವರದಿ ಮಾಡಿದೆ. ಆಲ್ ಇಂಡಿಯಾ ಮಿಷನ್ (All India Mission) ಎಂಬ ಸಂಸ್ಥೆಗೆ ‘ಅಮೆಜಾನ್ ಸ್ಮೈಲ್’ (Amazon Smile) ಪ್ರತಿಷ್ಠಾನವು ಹಣಕಾಸು ಒದಗಿಸುತ್ತಿದೆ ಎಂದು ವರದಿ ಹೇಳಿದೆ.
ಇ-ಕಾಮರ್ಸ್ ವಲಯದ ದೈತ್ಯ ಕಂಪನಿಯಾದ ಅಮೆರಿಕ ಮೂಲದ ‘ಅಮೆಜಾನ್’ ಮೇಲೆ ಆರೆಸ್ಸೆಸ್ ಸಂಬಂಧಿತ ಮಾಸಿಕ ಪತ್ರಿಕೆ ‘ಆರ್ಗನೈಸರ್’, ಮತಾಂತರಕ್ಕೆ ಹಣ ನೀಡುವ ಗಂಭೀರ ಆಪಾದನೆ ಮಾಡಿದೆ. ‘ಅಮೇಜಿಂಗ್ ಕ್ರಾಸ್ ಕನೆಕ್ಷನ್’ ತಲೆಬರಹದಲ್ಲಿ ಮುಖಪುಟ ವರದಿ ಮಾಡಿರುವ ‘ಆರ್ಗನೈಸರ್’, ‘ಈಶಾನ್ಯ ಭಾರತದ ರಾಜ್ಯಗಳಲ್ಲಿ ‘ಅಮೆರಿಕನ್ ಬ್ಯಾಪ್ಟಿಸ್ಟ್ ಚರ್ಚ್’ ಎಂಬ ಸಂಘಟನೆ ಕೆಲಸ ಮಾಡುತ್ತದೆ. ಇದು ‘ಆಲ್ ಇಂಡಿಯಾ ಮಿಶನ್’ (ಎಐಎಂ) ಹೆಸರಿನಲ್ಲಿ ಕ್ರೈಸ್ತ ಧರ್ಮಕ್ಕೆ ಈಶಾನ್ಯ ಜನರನ್ನು ಮತಾಂತರ ಮಾಡುತ್ತಿದೆ. ಈ ಸಂಘಟನೆಗೆ ಅಮೆಜಾನ್ ಕಂಪನಿಯು ತನ್ನದೇ ಆದ ಪ್ರತಿಷ್ಠಾನವಾದ ‘ಅಮೆಜಾನ್ ಸ್ಮೈಲ್’ ಮೂಲಕ ಹಣ ಒದಗಿಸುತ್ತಿದೆ. ಈ ಆಪಾದನೆಯನ್ನು ಈ ಹಿಂದೆ ಅರುಣಾಚಲ ಪ್ರದೇಶ ನ್ಯಾಯ ವೇದಿಕೆ ಎಂಬ ಸಂಸ್ಥೆ ಈ ಹಿಂದೆಯೇ ಮಾಡಿತ್ತು’ ಎಂದು ಕಿಡಿಕಾರಿದೆ.
ಇದನ್ನು ಓದಿ: Mandya : ಮತಾಂತರಕ್ಕೆ ಯತ್ನ: ಐವರ ಬಂಧನ
‘ಅಮೆಜಾನ್ ಈಗ ಎಐಎಂಗೆ ಹಣ ನೀಡಿ ಭಾರತೀಯರನ್ನು ಖರೀದಿಸುವುದಕ್ಕೆ ಕುಮ್ಮಕ್ಕು ನೀಡುತ್ತಿದೆ. ಎಐಎಂ ಈ ಹಿಂದೆ 25 ಸಾವಿರ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ್ದಾಗಿ ಬಹಿರಂಗವಾಗಿ ಹೇಳಿತ್ತು. ಇದಕ್ಕೆ ಹಣ ನೀಡುವುದರ ಹಿಂದೆ ಅಕ್ರಮ ಹಣ ವರ್ಗಾವಣೆಯ ಬಹುರಾಷ್ಟ್ರೀಯ ಕಂಪನಿಗಳ ಜಾಲವೂ ಇರುವ ಸಾಧ್ಯತೆ ಇದೆ’ ಎಂದು ಸಂದೇಹ ವ್ಯಕ್ತಪಡಿಸಿದೆ.
ಈ ಹಿಂದೆ ಆರೆಸ್ಸೆಸ್ ಸಂಬಂಧಿತ ಇನ್ನೊಂದು ನಿಯತಕಾಲಿಕೆ ‘ಪಾಂಚಜನ್ಯ’ ಕೂಡ ‘ಅಮೆಜಾನ್ ಎಂಬುದು ‘ಈಸ್ಟ್ ಇಂಡಿಯಾ ಕಂಪನಿ-2.0’ ಇದ್ದಂತೆ. ಭಾರತದ ಮಾರುಕಟ್ಟೆಯನ್ನು ಕೈವಶ ಮಾಡಿಕೊಂಡು ಏಕಸ್ವಾಮ್ಯ ಸಾಧಿಸಲು ಹೊರಟಿದೆ’ ಎಂದು ಕಿಡಿಕಾರಿತ್ತು.
ಇದನ್ನೂ ಓದಿ: Hijab ಇಸ್ಲಾಂಗೆ ಮತಾಂತರಗೊಂಡ ಖ್ಯಾತ ನಟಿ ಮೆರೀನ್; ಹಜ್‌ನಲ್ಲಿರುವ ಫೋಟೋ ವೈರಲ್!