ನವದೆಹಲಿ(ಏ.17): ಕೊರೋನಾ ವೈರಸ್ ಹೊಡೆತಕ್ಕೆ ನಲುಗಿರುವ ದೇಶದ ಆರ್ಥಿಕತೆಗೆ ಟಾನಿಕ್ ನೀಡಲು ರಿಸರ್ವ್ ಬ್ಯಾಂಕ್ ಮುಂದಾಗಿದೆ. RBI ಮಹತ್ವದ ಘೋಷಣೆ ಮಾಡಿದ್ದು  50 ಸಾವಿರ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿದೆ. 

ಕಳೆದ 4 ತಿಂಗಳಿನಿಂದ ಉತ್ಪಾದನಾ ವಲಯ ಕುಸಿತ ಕಂಡಿದೆ. ಉತ್ಪಾದನಾ ವಲಯಕ್ಕೆ ಸುಲಭವಾಗಿ ಸಾಲ ಸಿಗಲು ಕ್ರಮ ಕೈಗೊಳ್ಳುವುದಾಗಿ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.  RBI ಗವರ್ನರ್ ಶಕ್ತಿಕಾಂತ್ ದಾಸ್ ಮಹತ್ವದ ಘೋಷಣೆ ಮಾಡಿದ್ದು, NBFC, NABARD MFI ಮೂಲಕ ಉತ್ಪಾದನ ವಲಯಕ್ಕೆ 50 ಸಾವಿರ ಕೋಟಿ ರುಪಾಯಿ ನೆರವು ನೀಡುವುದಾಗಿ ತಿಳಿಸಿದರು. 

40 ವರ್ಷದಲ್ಲಿ ಮೊದಲ ಬಾರಿ ದೇಶದ ಜಿಡಿಪಿ ಮೈನಸ್‌ಗೆ?

ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಆತಂಕದ ನಡುವೆಯೂ ಭವಿಷ್ಯ ಕಟ್ಟೋಣ. ಕೆಲವು ಆರ್ಥಿಕ ವಲಯಗಳು ಸಂಕಷ್ಟದಲ್ಲಿರುವುದು ನಿಜ, ಇದರ ಹೊರತಾಗಿಯೂ ಭಾರತದ ಆರ್ಥಿಕತೆ ಉತ್ತಮವಾಗಿದೆ. IMF ಪ್ರಕಾರ ಭಾರತದ ಆರ್ಥಿಕತೆ ಉತ್ತಮವಾಗಿದೆ. ಲಾಕ್‌ಡೌನ್ ಹೊರತಾಗಿಯೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಬ್ಯಾಂಕ್‌ಗಳಲ್ಲಿ ನಗದು ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ದೇಶದಲ್ಲಿ ಹಣದ ಚಲಾವಣೆ ಹೆಚ್ಚಿಸಲು  1 ಲಕ್ಷ 46 ಸಾವಿರ ಕೋಟಿ ಹೊಸ ನೋಟು ಚಲಾವಣೆಗೆ ರಿಸರ್ವ್ ಬ್ಯಾಂಕ್ ಮುಂದಾಗಿದೆ. ರಿಸರ್ವ್ ಬ್ಯಾಕ್ ಇಂಡಿಯಾದ 150 ಸಿಬ್ಬಂದಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. RBI ಖಜಾನೆಯಲ್ಲಿ ಅಗತ್ಯ ವಿದೇಶಿ ಕರೆನ್ಸಿ ಲಭ್ಯವಿದೆ ಎಂದು ಆರ್‌ಬಿಐ ತಿಳಿಸಿದೆ.