ಮೂವರು ಕಾರ್ಮಿಕರಿಗೆ ಆದಾಯ ತೆರಿಗೆ ಇಲಾಖೆ 45 ಕೋಟಿ ರೂ. ತೆರಿಗೆ ನೋಟಿಸ್ ನೀಡಿದೆ. ಕಾರ್ಮಿಕರ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಖಾಸಗಿ ಕಂಪನಿಗಳು ವಹಿವಾಟು ನಡೆಸಿದ್ದು ತನಿಖೆಯಿಂದ ತಿಳಿದುಬಂದಿದೆ.

ಆಲಿಗಢ: ಮಾಸಿಕ 15000 ರು. ಆಸುಪಾಸು ವೇತನ ಹೊಂದಿರುವ ಉತ್ತರಪ್ರದೇಶದ ಮೂವರು ಕಾರ್ಮಿಕರಿಗೆ ಆದಾಯ ತರಿಗೆ ಇಲಾಖೆ ಒಟ್ಟು 45 ಕೋಟಿ ರು. ತೆರಿಗೆ ಪಾವತಿಸುವಂತೆ ನೋಟಿಸ್‌ ಜಾರಿ ಮಾಡಿದೆ. ಇದನ್ನು ನೋಡಿ ಕಾರ್ಮಿಕರು ಆಘಾತಕ್ಕೆ ತುತ್ತಾಗಿದ್ದಾರೆ.

ಘಟನೆ ಕುರಿತು ಪ್ರಾಥಮಿಕ ತನಿಖೆ ನಡೆಸಿದ ವೇಳೆ ಮೂವರು ಕಾರ್ಮಿಕರ ಆಧಾರ್‌ ಕಾರ್ಡ್‌, ಪಾನ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆಯನ್ನು ಕೆಲ ಖಾಸಗಿ ಕಂಪನಿಗಳು ದುರ್ಬಳಕೆ ಮಾಡಿಕೊಂಡು ಅದರ ಮೂಲಕ ವಹಿವಾಟು ನಡೆಸಿದ್ದು ಗೊತ್ತಾಗಿದೆ. ಹೀಗಾಗಿ ಆ ಕಂಪನಿಗಳು ನಡೆಸಿದ ವಹಿವಾಟಿಗಾಗಿ ಕಾರ್ಮಿಕರಾದ ಕಿರಣ್‌ ಕುಮಾರ್‌ಗೆ 33.88 ಕೋಟಿ ರು., ಮೋಹಿತ್‌ ಕುಮಾರ್‌ಗೆ 3.87 ಕೋಟಿ ರು., ಅಮಿತ್‌ಗೆ 7.79 ಕೋಟಿ ರು. ನೋಟಿಸ್‌ ಅನ್ನು ಮಾರ್ಚ್‌ನಲ್ಲಿ ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಥಾಯ್ಲೆಂಡ್‌, ಶ್ರೀಲಂಕಾ ಪ್ರವಾಸ
ಪ್ರಧಾನಿ ನರೇಂದ್ರ ಮೋದಿ, ಗುರುವಾರದಿಂದ ನಾಲ್ಕು ದಿನಗಳ ಕಾಲ ಥಾಯ್ಲೆಂಡ್‌, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಏ.3, 4 ರಂದು ಥಾಯ್ಲೆಂಡ್‌ಗೆ ಭೇಟಿ ನೀಡಲಿರುವ ಪ್ರಧಾನಿ ಬಿಮ್‌ಸ್ಟೆಕ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಥಾಯ್ಲೆಂಡ್‌ಗೆ ನೀಡುತ್ತಿರುವ ಮೂರನೇ ಭೇಟಿಯಾಗಿದ್ದು, ಈ ವೇಳೆ ಪ್ರಧಾನಿ ಪೆಟೋಂಗ್ಟರ್ನ್ ಶಿನಾವಾತ್ರಾ ಅವರನ್ನು ಭೇಟಿಯಾಗಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ. 

ಇದನ್ನೂ ಓದಿ: ಕರ್ನಾಟಕ ವಕ್ಫ್‌ ಗದ್ದಲ ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರುಗೇಟು!

ಜೊತೆಗೆ 6ನೇಯ ಬಿಮ್‌ಸ್ಟೆಕ್ ಸಮ್ಮೇಳನದಲ್ಲಿಯೂ ಭಾಗಿಯಾಗಲಿದ್ದು, ಸದಸ್ಯ ರಾಷ್ಟ್ರಗಳೊಡನೆ ಕಡಲ ಸಹಕಾರ ಒಪ್ಪಂದಕ್ಕೆ ಸಹಿಹಾಕುವ ಸಾಧ್ಯತೆಯಿದೆ. ಸಮ್ಮೇಳನದಲ್ಲಿ ಮೋದಿ ನೇಪಾಳ ಪ್ರಧಾನಿ ಕೆ.ಪಿ ಓಲಿ ಶರ್ಮಾ, ಬಾಂಗ್ಲಾದ ಮದ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಯೂನಸ್‌ ಅವರನ್ನೂ ಭೇಟಿ ಮಾಡಲಿದ್ದಾರೆ. ಆ ಬಳಿಕ ಏ.5 ಹಾಗೂ 6ರಂದು ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: ರತನ್ ಟಾಟಾ ಮುದ್ದಿನ ನಾಯಿ ಖರ್ಚಿಗೆ ಲಕ್ಷ ಲಕ್ಷ ರೂ, ವಿಲ್‌ನಲ್ಲಿ ಹೃದಯಶ್ರೀಮಂತಿಗೆ ಮೆರೆದ ಉದ್ಯಮಿ