Rs 40,000 Crore Property Dispute: ಗ್ವಾಲಿಯರ್ ಸಿಂಧಿಯಾ ರಾಜಮನೆತನದ 40 ಸಾವಿರ ಕೋಟಿ ಆಸ್ತಿ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಆಸ್ತಿ ವಿಭಾಗದ ದಾಖಲೆಗಳಲ್ಲಿ ಮೋಸದಿಂದ ಸಹಿ ಪಡೆಯಲಾಗಿದೆ ಎಂದು ಪ್ರತಿಮಾ ದೇವಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಆರೋಪವನ್ನು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಇತರರು ವಿರೋಧಿಸಿದ್ದು, ಅಕ್ಟೋಬರ್ 14ರಂದು ಕೋರ್ಟ್ ಮಹತ್ವದ ತೀರ್ಪು ನೀಡಲಿದೆ.

ನವದೆಹಲಿ (ಅಕ್ಟೋಬರ್ 8): ಗ್ವಾಲಿಯರ್ ಸಿಂಧಿಯಾ ರಾಜಮನೆತನದ 40 ಸಾವಿರ ಕೋಟಿ ಆಸ್ತಿ ವಿವಾದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೀರ್ಘಕಾಲ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಹೊಸ ತಿರುವು ಸಿಗುವ ಲಕ್ಷಣ ಕಾಣ್ತಿದೆ. ಅದೇ ಕಾರಣ ಈ ವಿವಾದ ಮತ್ತೆ ಸುದ್ದಿಯಲ್ಲಿದೆ.

ಸಿಂಧಿಯಾ ಕುಟುಂಬದ ಸದಸ್ಯೆ ಪ್ರತಿಮಾ ದೇವಿ ನ್ಯಾಯಾಲಯಕ್ಕೆ ಹೆಚ್ಚುರಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ಇದು ಆಸ್ತಿ ವಿಭಾಗದ ದಾಖಲೆಗಳಲ್ಲಿನ ಸಹಿಯ ಬಗ್ಗೆ ಗಂಭೀರ ಪ್ರಶ್ನೆಯನ್ನ ಹುಟ್ಟಿಹಾಕಿದೆ. ಆಸ್ತಿ ದಾಖಲೆಗೆ ಸಂಬಂಧಿ ಮಾಡಲಾಗಿರುವ ಸಿಗ್ನೇಚರ್‍‌ಗಳಲ್ಲಿ ಕೆಲವೊಂದಕ್ಕೆ ನನ್ನ ಒಪ್ಪಿಗೆ ಇರಲಿಲ್ಲ. ಒಪ್ಪಿಗೆ ಇಲ್ಲದೇ ಮೋಸದಿಂದ ಸಹಿ ಪಡೆಯಲಾಗಿದೆ ಎಂದು ಕೋರ್ಟ್‌ಗೆ ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ. ಪ್ರತಿಮಾ ದೇವಿ ಆರೋಪಕ್ಕೆ ಜ್ಯೋತಿರಾದಿತ್ಯ ಸಿಂದಿಯಾ ಸೇರಿದಂತೆ ಕುಟುಂಬದ ಹಲವು ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಪ್ರತಿಮಾ ದೇವಿ ಆರೋಪಗಳು ಏನು?

  • ಆಸ್ತಿ ವಿಭಾಗಕ್ಕೆ ಸಂಬಂಧಿಸಿದ ಸಹಿಗಳಿಗೆ ನನ್ನ ಒಪ್ಪಿಗೆ ಇಲ್ಲ
  • ಕೆಲವೊಂದಕ್ಕೆ ಒಪ್ಪಿಗೆ ಇಲ್ಲದೇ ಮೋಸ ಮಾಡಿ ಸಹಿ ಹಾಕಿಸಿಕೊಂಡಿದ್ದಾರೆ
  • ಆಸ್ತಿ ವಿಭಜನೆಗೆ ಸಂಬಂಧಿಸಿದ ದಾಖಲೆಗಳು ನನಗೆ ತೋರಿಸಿಲ್ಲ
  • ನೋಟಿಸ್‌ಗಳ ಬಗ್ಗೆ ನನಗೆ ಯಾವುದೇ ಮಾಹಿತಿಯನ್ನ ನೀಡಿಲ್ಲ
  • ಕೆಲವು ದಾಖಲೆಗಳನ್ನ, ನೋಟಿಸ್‌ಗಳನ್ನ ತಪ್ಪಾದ ವಿಳಾಸಕ್ಕೆ ಕಳುಹಿಸಿದ್ದಾರೆ
  • ಅಗತ್ಯ ಮಾಹಿತಿಗಳನ್ನ ನೀಡದೇ ಇದ್ದಾಗ ನನಗೆ ಅನುಮಾನ ಬರೋದು ಸಹಜ
  • ಅದೇ ಕಾರಣಕ್ಕೆ ಕೆಲವು ಸಿಹಿಗಳಿಗೆ ನನ್ನ ಒಪ್ಪಿಗೆ ಇಲ್ಲ ಎಂದು ಆರೋಪಿಸಿದ್ದಾರೆ

ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಕುಟುಂಬ ವಿರೋಧ

ಪ್ರತಿಮಾ ದೇವಿ ಮಾಡಿರುವ ಆರೋಪಗಳನ್ನ ಜ್ಯೋತಿರಾದಿತ್ಯ ಸಿಂದಿಯಾ ಹಾಗೂ ಅವರ ಕುಟುಂಬದ ಕೆಲವು ಸದಸ್ಯರು ತೀವ್ರವಾಗಿ ಪ್ರಶ್ನೆ ಮಾಡಿದ್ದಾರೆ. ಸಿಂದಿಯಾ, ಉಷಾ ರಾಜೆ, ವಸುಂಧರಾ ರಾಜೆ, ಯಶೋಧರಾ ರಾಜೆ ಅವರು ಪ್ರತಿಮಾ ದೇವಿ ಆರೋಪವನ್ನು ಪ್ರಶ್ನಿಸಿದ್ದಾರೆ. ಆಸ್ತಿ ವಿಭಜನೆಗೆ ಸಂಬಂಧಿಸಿದ ದಾಖಲೆಗಳಿಗೆ ಅವರ ಒಪ್ಪಿಗೆ ಪಡೆದೇ ಸಹಿ ಮಾಡಿಸಿಕೊಳ್ಳಲಾಗಿದೆ. ಅವರ ಒಪ್ಪಿಗೆ ಮೇರೆಗೆ ನಾವು ಕೂಡ ಸಹಿ ಮಾಡಿದ್ದೇವೆ ಎಂದು ವಾದಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣದ ವಿಚಾರಣೆ ವೇಳೆ ವಕೀಲರು ಪ್ರಮುಖ ಮಾಹಿತಿಯನ್ನ ಬಹಿರಂಗ ಪಡಿಸಿದ್ದಾರೆ. ಆಸ್ತಿ ವಿಭಜನೆ ಬಳಿಕ ಇಡೀ ಕುಟುಂಬ ಮನೆಯ ಎಲ್ಲಾ ಸದಸ್ಯರಿಗೂ ಭೋಜನ ಕೂಟ ಆಯೋಜಿಸಿತ್ತು. ಅದರಲ್ಲಿ ಎಲ್ಲರೂ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ರಾಜಮನೆತನದ ಕುಟುಂಬದ ಸದಸ್ಯರು ಗ್ರೂಪ್ ಫೋಟೋ ಕೂಡ ತೆಗೆಯಲಾಗಿದೆ ಎಂದು ಕೋರ್ಟ್‌ಗೆ ಪ್ರದರ್ಶಿಸಿದ್ದಾರೆ. ಹೀಗಿರುವಾಗ ಅದಕ್ಕೆ (ಸಹಿಗೆ) ಒಪ್ಪಿಗೆ ಎಲ್ಲ ಎಂದರೆ ಹೇಗೆ ಅಂತಾ ಪ್ರಶ್ನೆ ಮಾಡಿದ್ದಾರೆ. ಸದ್ಯ ವಾದ-ಪ್ರತಿವಾದ ಆಲಿಸಿರುವ ಕೋರ್ಟ್‌, ಅಕ್ಟೋಬರ್ 14ಕ್ಕೆ ಮಹತ್ವದ ತೀರ್ಪು ನೀಡಲಿದೆ. ರಾಜಮನೆತನದ 40 ಸಾವಿರ ಕೋಟಿ ಮೌಲ್ಯದ ಆಸ್ತಿ ವಿವಾದ ಏನಾಗಲಿದೆ ಎಂಬ ಕುತೂಹಲ ದೇಶದ ಜನರಲ್ಲಿ ಹೆಚ್ಚಾಗಿದೆ.

ಇನ್ನು ಸಿಂಧಿಯಾ ರಾಜಮನೆತದ ಆಸ್ತಿ ವಿವಾದ ಇಲ್ಲಿಗೆ ಸೀಮಿತವಾಗಿಲ್ಲ. ಜೈ ವಿಲಾಸ್ ಅರಮನೆ ಸೇರಿದಂತೆ ಕುಟುಂಬದ ಆಸ್ತಿಗಳ ಮೌಲ್ಯಮಾಪನದ ಬಗ್ಗೆಯೂ ಕಾನೂನು ಹೋರಾಟ ನಡೆಯುತ್ತಿದೆ. ಸದ್ಯ ಎರಡು ಕಡೆ ವಾದ-ಪ್ರತಿವಾದವನ್ನು ಕೋರ್ಟ್ ಆಲಿಸಿದ್ದು, ತೀರ್ಪು ಬರೋದೊಂದೇ ಬಾಕಿ ಇದೆ.