ಬೆಂಗಳೂರು(ಮೇ.16): ರಾಜ್ಯದಲ್ಲಿ ಪ್ರತಿ ವಾರ ಕೋವಿಡ್‌ನಿಂದ ಗುಣಮುಖರಾದ ಸುಮಾರು 400 ರೋಗಿಗಳಿಗೆ ಬ್ಲ್ಯಾಕ್‌ ಫಂಗಸ್‌ ಬರುವ ನಿರೀಕ್ಷೆ ಇದೆ ಎಂದು ತಾಂತ್ರಿಕ ಸಮಿತಿ ಅಂದಾಜು ಮಾಡಿದೆ.

"

ಸರ್ಕಾರದ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಈ ವಿಷಯ ತಿಳಿಸಿದ್ದಾರೆ. ಶನಿವಾರ ಕಾರ್ಯಪಡೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಎಷ್ಟುಮಂದಿಗೆ ಬಂದಿದೆ ಎಂಬ ನಿಖರವಾದ ಮಾಹಿತಿ ಇಲ್ಲ. ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.

ಕೋವಿಡ್‌ನಿಂದ ಗುಣಮುಖರಾದವರ ಪೈಕಿ ಮುಖ್ಯವಾಗಿ ಮಧುಮೇಹಿಗಳಲ್ಲಿ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಳ್ಳುತ್ತಿದ್ದು, ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಾರಕ್ಕೆ ಆಂಪೊ್ಕೕಟೆರಿಸಿನ್‌ ಔಷಧಿ​ಯ 20 ಸಾವಿರ ವೈಲ್ಸ್‌ ಪೂರೈಕೆ ಮಾಡಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಬೇಡಿಕೆ ಹೆಚ್ಚಾದ ಕಾರಣಕ್ಕೆ ಈ ಔಷ​ಧಿಯ ಕೊರತೆ ಉಂಟಾಗಿದೆ ಎಂದು ಮಾಹಿತಿ ನೀಡಿದರು.

ಸ್ಟಿರಾಯ್ಡ್‌ನಿಂದ ಸಮಸ್ಯೆ ಹೆಚ್ಚಳ

ಬ್ಲ್ಯಾಕ್‌ ಫಂಗಸ್‌ ಹೊಸತಲ್ಲ. ಇದು ಗಾಳಿ, ಮಣ್ಣು, ಕೆಲವೊಮ್ಮೆ ನಮ್ಮ ಆಹಾರದಲ್ಲೂ ಇರುತ್ತದೆ. ಇದು ವೈರಸ್‌ನಷ್ಟುತೀವ್ರವಲ್ಲ. ಆದರೆ ಸೋಂಕಿತರಿಗೆ ಸ್ಟಿರಾಯ್ಡ್‌ ನೀಡುತ್ತಿರುವ ಪರಿಣಾಮಗಳ ಅವುಗಳ ತೀವ್ರತೆ ಹೆಚ್ಚಿ, ರೋಗಿಗಳಲ್ಲಿ ಸಮಸ್ಯೆಯಾಗುತ್ತಿದೆ.

- ಡಾ| ರಣದೀಪ್‌ ಗುಲೇರಿಯಾ, ಏಮ್ಸ್‌ ಮುಖ್ಯಸ್ಥ

"

ನಿನ್ನೆ ಒಂದೇ ದಿನ 20ಕ್ಕೂ ಹೆಚ್ಚು ಜನಕ್ಕೆ ಬ್ಲ್ಯಾಕ್‌ ಫಂಗಸ್‌

ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಕೊರೋನಾ ಸೋಂಕಿತರಲ್ಲಿ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಳ್ಳುತ್ತಿದ್ದು, ಶನಿವಾರ ಒಂದೇ ದಿನ 20ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಬೀದರ್‌ ಜಿಲ್ಲೆಯಲ್ಲಿ 16 ಪ್ರಕರಣಗಳು ಪತ್ತೆಯಾಗಿವೆ ಎಂದು ಉಸ್ತುವಾರಿ ಸಚಿವ ಪ್ರಭು ಚೌಹಾಣ್‌ ಮಾಹಿತಿ ನೀಡಿದ್ದಾರೆ. ಇನ್ನು ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕೊರೋನಾದಿಂದ ಚೇತರಿಸಿಕೊಂಡ ಇಬ್ಬರು ಮೃತಪಟ್ಟಿದ್ದು, ಇವೆರಡೂ ಬ್ಲ್ಯಾಕ್‌ ಫಂಗಸ್‌ ಪ್ರಕರಣ ಎಂದು ಹೇಳಲಾಗಿದೆ. ಇನ್ನು ಬೆಳಗಾವಿಯಲ್ಲಿ 2 ಮತ್ತು ಮೈಸೂರಲ್ಲಿ ಒಬ್ಬರು ಬ್ಲ್ಯಾಕ್‌ ಫಂಗಸ್‌ಗೆ ತುತ್ತಾಗಿರುವ ಬಗ್ಗೆ ವರದಿಯಾಗಿದೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಮಂದಿಯಲ್ಲಿ ಬ್ಲ್ಯಾಕ್‌ ಫಂಗಸ್‌ ಖಚಿತವಾಗಿತ್ತು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್‌ ಡ್ಯಾಂ ನಿವಾಸಿ ಸಂಜು ಕಿತ್ತೂರು(45) ನಿಪ್ಪಾಣಿಯ ಖಾಸಗಿ ಆಸ್ಪತ್ರೆಯಲ್ಲಿ ಮತ್ತು ಕಲಬುರಗಿ ರಾಜಾಪೂರ ಬಡಾವಣೆ ನಿವಾಸಿ ಶುಕ್ರವಾರ ಮೃತಪಟ್ಟಿದ್ದರೆ, ಕಲಬುರಗಿಯ ಪೊಲೀಸ್‌ ಮುಖ್ಯಪೇದೆ ಮಲ್ಲಿಕಾರ್ಜುನ(45) ದೃಷ್ಟಿದೋಷ, ಪಾರ್ಶ್ವವಾಯುವಿಗೆ ತುತ್ತಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಇವೆರಡೂ ಬ್ಲ್ಯಾಕ್‌ಫಂಗಸ್‌ನಿಂದುಂಟಾದ ಸಾವು ಎಂದು ಚಿಕಿತ್ಸೆ ನೀಡಿರುವ ವೈದ್ಯರು ತಿಳಿಸಿದ್ದರೆ, ಬೆಳಗಾವಿ ಮತ್ತು ಕಲಬುರಗಿ ಜಿಲ್ಲಾಡಳಿತಗಳು ಮಾತ್ರ ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ತಿಳಿಸಿವೆ.

ಬೀದರ್‌ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ ಹಾವಳಿ ಹೆಚ್ಚಾಗಿದ್ದು 16 ಮಂದಿಯಲ್ಲಿ ಕಾಣಿಸಿಕೊಂಡು ಮೂವರ ಕಣ್ಣು ತೆಗೆಯಲಾಗಿದೆ ಎಂದು ಸಚಿವ ಪ್ರಭು ಚೌಹಾಣ್‌ ತಿಳಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರಿಗೆ ಈ ರೋಗ ಕಾಣಿಸಿಕೊಂಡಿದೆ. ಬೀಳಗಿ ಮತ್ತು ಬಾಗಲಕೋಟೆಯ ಇಬ್ಬರು ರೋಗಿಗಳಲ್ಲಿ ಬ್ಲ್ಯಾಕ್‌ ಫಂಗಸ್‌ ಕಂಡು ಬಂದಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನಂತ ದೇಸಾಯಿ ತಿಳಿಸಿದ್ದಾರೆ. ಇನ್ನು ಮೈಸೂರಿನಲ್ಲಿ ಇಬ್ಬರಿಗೆ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಂಡಿದ್ದು ಸೂಕ್ತ ಚಿಕಿತ್ಸೆ ನಡೆಯುತ್ತಿರುವುದಾಗಿ ಸಚಿವ ಎಸ್‌.ಟಿ.ಸೋಮಶೇಖರ್‌ ಶುಕ್ರವಾರವಷ್ಟೇ ತಿಳಿಸಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona