2023ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀ​ಯ ಬಾಲ ಪುರಸ್ಕಾರಕ್ಕೆ ಬೆಂಗಳೂರಿನ ಬಾಲಕ ರಿಷಿ ಶಿವ​ಪ್ರ​ಸ​ನ್ನ​ (​8) ಭಾಜ​ನ​ರಾ​ಗಿ​ದ್ದಾರೆ. ಬಾಲಕನ ಐಕ್ಯೂ(ಬುದ್ಧಿಮತ್ತೆ) ಪ್ರಖ್ಯಾತ ವಿಜ್ಞಾನಿಗಳಾದ ಆಲ್ಬರ್ಚ್‌ ಐನ್‌ಸ್ಟೀನ್‌, ಸ್ಟೀಫನ್‌ ಹಾಕಿನ್ಸ್‌ ಅವರಿಗಿಂತ ಅಧಿಕವಾಗಿದೆ!

ನವ​ದೆ​ಹ​ಲಿ (ಜ.24): 2023ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀ​ಯ ಬಾಲ ಪುರಸ್ಕಾರಕ್ಕೆ ಬೆಂಗಳೂರಿನ ಬಾಲಕ ರಿಷಿ ಶಿವ​ಪ್ರ​ಸ​ನ್ನ​ (​8) ಭಾಜ​ನ​ರಾ​ಗಿ​ದ್ದಾರೆ.

ಸೋಮ​ವಾರ ದೆಹ​ಲಿಯ ವಿಜ್ಞಾನ ಭವ​ನ​ದಲ್ಲಿ ನಡೆದ ಕಾರ‍್ಯ​ಕ್ರ​ಮ​ದಲ್ಲಿ ರಾಷ್ಟ್ರ​ಪತಿ ದ್ರೌಪದಿ ಮುರ್ಮು(President draupadi murmu) ಅವರು 6 ಕ್ಷೇತ್ರ​ಗ​ಳಲ್ಲಿ ಸಾಧನೆ ಮಾಡಿದ 11 ಮಕ್ಕ​ಳಿಗೆ ಗೌರವ ಪ್ರದಾನ ಮಾಡಿದರು. ಈ ಪೈಕಿ ಸೃಜ​ನ​ಶೀ​ಲತೆ ವಿಭಾ​ಗ​ದಲ್ಲಿ ರಿಷಿ ಈ ಪುರ​ಸ್ಕಾ​ರಕ್ಕೆ ಭಾಜ​ನ​ರಾ​ಗಿ​ದ್ದಾರೆ.

ಬಾಲ ಪುರ​ಸ್ಕಾರ(Bala puraskar) ಪಡೆದ ಮಕ್ಕ​ಳಿಗೆ ಪ್ರಶಸ್ತಿ ಪತ್ರ, ಮೆಡಲ್‌ ಮತ್ತು 1 ಲಕ್ಷ ರು. ನಗದು ಬಹು​ಮಾನ ವಿತ​ರಿ​ಸ​ಲಾ​ಗು​ತ್ತದೆ. ಈ ಬಾರಿ 6 ಬಾಲ​ಕರು ಮತ್ತು 5 ಬಾಲ​ಕಿ​ಯರು ಪ್ರಶಸ್ತಿ ಪಡೆ​ದು​ಕೊಂಡಿ​ದ್ದಾರೆ. ಅಸಾ​ಧಾ​ರಣ ಸಾಧ​ನೆ​ಗ​ಳನ್ನು ಮಾಡಿದ 5ರಿಂದ 18 ವರ್ಷದ ಮಕ್ಕ​ಳಿಗೆ ಈ ಪ್ರಶ​ಸ್ತಿ​ಯ​ನ್ನು ನೀಡ​ಲಾ​ಗು​ತ್ತದೆ.

ಮೋಟಾರ್ ಸ್ಪೋರ್ಟ್‌ನಲ್ಲೇ ಮೊದಲು; ಬೆಂಗಳೂರಿನ ಯಶ್‌ಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ

ಬಾಲ ಪುರಸ್ಕಾರಕ್ಕೆ ಭಾಜ​ನ​ರಾದ ಮಕ್ಕಳ ಜೊತೆ ಪ್ರಧಾ​ನಿ ನರೇಂದ್ರ ಮೋದಿ(Narendra Modi) ಮತ್ತು ಸಚಿವೆ ಸ್ಮೃತಿ ಇರಾನಿ(Smriti Irani) ಮಂಗ​ಳ​ವಾರ ಸಂವಾದ ನಡೆ​ಸ​ಲಿ​ದ್ದಾರೆ.

‘ರಿಷಿ 3 ವರ್ಷ​ದ​ವ​ನಿ​ದ್ದಾ​ಗಲೇ, ಸೌರ​ವ್ಯೂ​ಹದ ಬಗ್ಗೆ ವಿವ​ರಿ​ಸು​ತ್ತಿದ್ದ, ಆತನ ಬುದ್ಧಿವಂತಿ​ಕೆಯನ್ನು ನೋಡಿ ನಾವು ಆಶ್ಚ​ರ್ಯ​ಗೊಂಡಿ​ದ್ದೆವು. 2019ರಲ್ಲಿ 5 ವರ್ಷ​ದ​ವ​ನಿ​ದ್ದಾಗಲೇ ಐಕ್ಯೂ​ಗಾ​ಗಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌​ನಿಂದ ಪ್ರಶ​ಸ್ತಿಗೆ ಪಾತ್ರ​ನಾ​ಗಿ​ದ್ದ’ ಎಂದು ರಿಷಿಯ ತಾಯಿ ರಾಜೇ​ಶ್ವರಿ ಹೇಳಿ​ದ್ದಾರೆ.

ಮೂಲತಃ ಮೈಸೂರು ಜಿಲ್ಲೆಯ ನಂಜ​ನ​ಗೂಡಿನ​ವ​ರಾದ ರಿಷಿಯ ಪೋಷ​ಕರು ಸದ್ಯ ಬೆಂಗ​ಳೂ​ರಿ​ನಲ್ಲಿ ನೆಲೆ​ಸಿ​ದ್ದಾರೆ. ಕಿರಿಯ ಆ್ಯಪ್‌ ಡೆವೆ​ಲ​ಪರ್‌ ಮತ್ತು ಬರ​ಹ​ಗಾರ ಎಂದು ಹೆಸರು ಪಡೆ​ದು​ಕೊಂಡಿ​ರುವ ರಿಷಿ, ಮಕ್ಕಳಿಗೋಸ್ಕರ 2 ಪುಸ್ತ​ಕ​ಗ​ಳನ್ನು ಬರೆ​ದಿ​ದ್ದಾರೆ. ‘ಎಲಿಮೆಂಟ್ಸ್‌ ಆಫ್‌ ಅತ್‌ರ್‍’ ಹಾಗೂ ‘ಲರ್ನ್‌ ವಿಟಮಿನ್ಸ್‌ ವಿತ್‌ ಹ್ಯಾರಿ ಪಾಟರ್‌’ ಎಂಬುವೇ ಆ ಪುಸ್ತಕಗಳು.

ರಿಷಿ ಶಿವಪ್ರಸನ್ನ ‘ಐಕ್ಯೂ’ ಐನ್‌ಸ್ಟೀನ್‌ಗಿಂತ ಅಧಿಕ!

‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನವಾಗಿರುವ ಪುತ್ರ ರಿಷಿ ಶಿವಪ್ರಸನ್ನ(Rishi shivaprasanna) ಐಕ್ಯೂ(ಬುದ್ಧಿಮತ್ತೆ) ಪ್ರಖ್ಯಾತ ವಿಜ್ಞಾನಿಗಳಾದ ಆಲ್ಬರ್ಚ್‌ ಐನ್‌ಸ್ಟೀನ್‌, ಸ್ಟೀಫನ್‌ ಹಾಕಿನ್ಸ್‌ ಅವರಿಗಿಂತ ಅಧಿಕವಾಗಿದೆ’ ಎಂದು ತಂದೆ ಪ್ರೊ.ಪ್ರಸನ್ನ ಕುಮಾರ್‌ ತಿಳಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಲು ಪುತ್ರನೊಂದಿಗೆ ದೆಹಲಿಗೆ ತೆರಳಿರುವ ಅವರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ರಿಷಿ ಚಿಕ್ಕವನಿದ್ದಾಗಲೇ ಅವನ ‘ಐಕ್ಯೂ ಹೆಚ್ಚಾಗಿದೆ, ಪರೀಕ್ಷೆ ಮಾಡಿಸಿ’ ಎಂದು ಶಿಕ್ಷಕಿ ಸರಿತಾ ಅವರು ತಿಳಿಸಿದ್ದರು. ಆಗ ಪರೀಕ್ಷಿಸಿದಾಗ 180ಕ್ಕೂ ಹೆಚ್ಚು ಐಕ್ಯೂ ಇರುವುದು ಬೆಳಕಿಗೆ ಬಂತು. ಇದು ಪ್ರಖ್ಯಾತ ವಿಜ್ಞಾನಿಗಳಾದ ಆಲ್ಬರ್ಚ್‌ ಐನ್‌ಸ್ಟೀನ್‌, ಸ್ಟೀಫನ್‌ ಹಾಕಿನ್ಸ್‌ ಅವರಿಗಿಂತ ಅಧಿಕವಾಗಿದೆ ಎಂದು ತಿಳಿಸಿದರು.

ನಾಗರಬಾವಿಯ ಆರ್ಕಿಡ್‌ ಸ್ಕೂಲ್‌(Orchid School, Nagarbavi)ನಲ್ಲಿ ಎಲ್‌ಕೆಜಿಗೆ ಸೇರ್ಪಡೆಯಾದಾಗಲೇ ರಿಷಿಯ ಪ್ರತಿಭೆಯನ್ನು ಅಲ್ಲಿನ ಶಿಕ್ಷಕಿ ಗುರುತಿಸಿದರು. ಬಳಿಕ ಬನಶಂಕರಿಯ ವಿದ್ಯಾಶಿಲ್ಪ ಶಾಲೆಗೆ ರಿಷಿಯನ್ನು ಸೇರಿಸಿದ್ದು ಇದೀಗ ಮೂರನೇ ತರಗತಿ ಅಭ್ಯಾಸ ಮಾಡುತ್ತಿದ್ದಾನೆ. ಮೂರೂವರೆ ವರ್ಷದವನಿದ್ದಾಗಲೇ ರಿಷಿಯಲ್ಲಿನ ಪ್ರತಿಭೆ ಬೆಳಕಿಗೆ ಬಂದಿತ್ತು. ಇದೀಗ ರಾಷ್ಟ್ರೀಯ ಬಾಲ ಪುರಸ್ಕಾರ ಸಂದಿರುವುದು ಸಂತಸ ಹೆಚ್ಚಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಂಗಳೂರಿನ ಬಾಲೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರಧಾನ

ನಾನು ಕುಂಬಳಗೂಡಿನ ರಾಜರಾಜೇಶ್ವರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ ಪ್ರೊಫೆಸರ್‌. ನನ್ನ ಪತ್ನಿ ಐಬಿಎಂನಲ್ಲಿ ಬ್ಯುಸಿನೆಸ್‌ ಅನಾಲಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿರುವ ‘ಮೆನ್ಸಾ’ ಸಂಘಟನೆ ಐಕ್ಯೂ ಹೆಚ್ಚಾಗಿರುವವರಿಗೆ ಮಾತ್ರ ಸದಸ್ಯತ್ವ ನೀಡುತ್ತದೆ. 4.11 ವರ್ಷದವನಿದ್ದಾಗಲೇ ರಿಷಿಗೆ ಇದರ ಸದಸ್ಯತ್ವ ಸಿಕ್ಕಿತು ಎಂದರು.