ಕೋಮು ಗಲಭೆಕೋರರಿಗೆ ತಲೆ ಕೆಳಗೆ ನೇತು ಹಾಕಿ ಶಿಕ್ಷೆ: ರಾಮನವಮಿ ಹಿಂಸಾಚಾರ ಬೆನ್ನಲ್ಲೇ ಅಮಿತ್ ಶಾ ಗುಡುಗು

ಬಂಗಾಳ, ಬಿಹಾರದಲ್ಲಿ ರಾಮನವಮಿ ಹಿಂಸೆ ಮತ್ತೆ ಭುಗಿಲೆದ್ದಿದೆ. ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಿಜೆಪಿ ಮೆರವಣಿಗೆ ಮೇಲೆ ಕಲ್ಲುತೂರಾಟ ಮಾಡಲಾಗಿದ್ದು, ಬಿಜೆಪಿ ಶಾಸಕ ಬಿಮನ್‌ ಘೋಷ್‌ಗೆ ಗಾಯವಾಗಿದೆ.  

rioters will be hanged upside down if bjp comes to power in bihar amit shah on ram navami clashes ash

ಪಟನಾ (ಏಪ್ರಿಲ್ 3, 2023): ರಾಮನವಮಿಯಂದು ಮತ್ತು ನಂತರದಲ್ಲೂ ರಾಜ್ಯದ ಹಲವು ಭಾಗಗಳಲ್ಲಿ ಮೇಲೆ ನಡೆದ ದೌರ್ಜನ್ಯಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಹಾರ ರಾಜ್ಯದಲ್ಲಿನ ಕೋಮು ಹಿಂಸಾಚಾರ ತಡೆಯಲು ಜೆಡಿಯು-ಆರ್‌ಜೆಡಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ 2025ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಇಂಥ ಕೋಮು ಗಲಭೆಕೋರರನ್ನು ತಲೆ ಕೆಳಗೆ ನೇತು ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

ನವಾಡಾ ಜಿಲ್ಲೆಯ ಹಿಸುವಾದಲ್ಲಿ ಭಾನುವಾರ ಬಿಜೆಪಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ‘ಬಿಹಾರ ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಮೈತ್ರಿಕೂಟ ಸರ್ಕಾರ ಸಸಾರಾಮ್‌ ಮತ್ತು ಬಿಹಾರ್‌ ಷರೀಫ್‌ಗಳಲ್ಲಿ ನಡೆದ ಕೋಮು ಗಲಭೆಗಳನ್ನು ಹತ್ತಿಕ್ಕುವಲ್ಲಿ ವಿಫಲವಾಗಿದೆ. ಬಿಹಾರದಲ್ಲಿ 2025ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಸರ್ಕಾರ ರಚಿಸಿದರೆ ಗಲಭೆಕೋರರನ್ನು ತಲೆಕೆಳಗಾಗಿ ನೇತು ಹಾಕಲಾಗುವುದು’ ಎಂದು ಎಚ್ಚರಿಸಿದರು.

ಇದನ್ನು ಓದಿ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿರೋ ಭಿಂದ್ರನ್‌ವಾಲೆ 2.0 ಅಮೃತ್ ಪಾಲ್ ಸಿಂಗ್ ಏಳು ಬೀಳು ಹೀಗಿದೆ..

ಅಲ್ಲದೇ ‘2024 ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 40 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಹಾರದ ಜನತೆ ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸತತ 3ನೇ ಬಾರಿಗೆ ಪ್ರಧಾನ ಮಂತ್ರಿಯಾಗಬೇಕು ಎಂದು ದೇಶದ ಜನತೆ ನಿರ್ಧರಿಸಿದ್ದಾರೆ. ಹೀಗಾಗಿ ನಿತೀಶ್‌ ಕುಮಾರ್‌ ಅವರು ಪ್ರಧಾನಿಯಾಗಿ ತಮ್ಮ ಡಿಸಿಎಂ ತೇಜಸ್ವಿ ಯಾದವ್‌ರನ್ನು ಬಿಹಾರ ಸಿಎಂ ಮಾಡುವ ಕನಸು ಛಿದ್ರವಾಗಲಿದೆ’ ಎಂದು ಟೀಕಿಸಿದರು.

ಅಲ್ಲದೇ ‘ಜಾತಿವಾದದ ವಿಷ ಹರಡುವ ನಿತೀಶ್‌ ಕುಮಾರ್‌ ಹಾಗೂ ‘ಜಂಗಲ್‌ ರಾಜ್‌’ ಲಾಲು ಪ್ರಸಾದ್‌ ಜತೆ ಬಿಜೆಪಿ ಎಂದಿಗೂ ಕೈ ಜೋಡಿಸುವುದಿಲ್ಲ. ಬಿಹಾರ ಸಿಎಂ ಪಾಲಿಗೆ ಬಿಜೆಪಿ ಬಾಗಿಲು ಎಂದಿಗೂ ಮುಚ್ಚಿರುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಮತ್ತೆ ಹಿಂಸಾಚಾರ: 45 ಮಂದಿ ಬಂಧನ, ನಿಷೇಧಾಜ್ಞೆ ಜಾರಿ; ಘಟನೆಗೆ ಬಿಜೆಪಿ ಕಾರಣ ಎಂದ ದೀದಿ

ಪಶ್ಚಿಮ ಬಂಗಾಳ, ಬಿಹಾರದಲ್ಲಿ ಮತ್ತೆ ಭುಗಿಲೆದ್ದ ರಾಮನವಮಿ ಹಿಂಸೆ
ಕೋಲ್ಕತಾ/ ಪಟನಾ: ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ರಾಮನವಮಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು, 2 ರಾಜ್ಯಗಳಲ್ಲೂ ದುಷ್ಕರ್ಮಿಗಳು ರಾಮನವಮಿ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆಗಳು ವರದಿಯಾಗಿವೆ. ಬಂಗಾಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರಾಮನವಮಿ ಮೆರವಣಿಗೆ ಮೇಲೆ ಉದ್ರಿಕ್ತರು ಕಲ್ಲು ತೂರಿದ್ದಾರೆ. ಬಿಹಾರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಹಿಂಸಾಚಾರದಲ್ಲಿ ಓರ್ವ ಸಾವಿಗೀಡಾಗಿದ್ದಾನೆ.

ಬಂಗಾಳದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ರಾಮನವಮಿ ಮೆರವಣಿಗೆ ಸಮಯದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಈ ಮೆರವಣಿಗೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್‌ ಘೋಷ್‌ ಸಹ ಭಾಗಿಯಾಗಿದ್ದರು. ಮೆರವಣಿಗೆ ಹೂಗ್ಲಿ ರಿಶ್ರಾ ಪ್ರದೇಶದಲ್ಲಿ ಸಾಗುತ್ತಿದ್ದ ಸಮಯದಲ್ಲಿ ಉದ್ರಿಕ್ತರ ಗುಂಪು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದೆ. ಇದರಿಂದ ತಪ್ಪಿಸಿಕೊಳ್ಳಲು ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕ ಬಿಮನ್‌ ಘೋಷ್‌ ಕಲ್ಲೇಟಿನಿಂದ ಗಾಯಗೊಂಡಿದ್ದಾರೆ.

ಈ ನಡುವೆ ಬಿಹಾರದಲ್ಲೂ ಹಿಂಸಾಚಾರ ಮುಂದುವರೆದಿದ್ದು, ಅಂಗಡಿ, ಮಾರುಕಟ್ಟೆಗಳನ್ನು ಭಾನುವಾರವೂ ಮುಚ್ಚಲಾಗಿತ್ತು. ಬಿಹಾರದ ಘಟನೆಗೆ ಕೋಮು ಸಂಘರ್ಷ ಕಾರಣ ಎಂದು ಹೇಳಲಾಗುತ್ತಿದ್ದು, ಈವರೆಗೆ ಸುಮಾರು 112 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಸಾರಾಂನಲ್ಲಿ ಉದ್ರಿಕ್ತರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಈ ದುರ್ಘಟನೆಯಲ್ಲಿ 6ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಳೆದ ಗುರುವಾರ ಪಶ್ಚಿಮ ಬಂಗಾಳದ ಹೌರಾದಲ್ಲಿ ಭಾರಿ ಪ್ರಮಾಣದ ಹಿಂಸಾಚಾರ ನಡೆಸಿದ್ದು, ಉದ್ರಿಕ್ತರು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಆದರೆ ಇದೀಗ ಹೌರಾದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಅಂಗಡಿ ಮತ್ತು ಮಾರುಕಟ್ಟೆಗಳನ್ನು ಮತ್ತೆ ತೆರೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Latest Videos
Follow Us:
Download App:
  • android
  • ios