100 ಕೋಟಿ ಹಫ್ತಾ ಹಗರಣ: ಮಹಾರಾಷ್ಟ್ರ ಸರ್ಕಾರ ತಲ್ಲಣ!
100 ಕೋಟಿ ಹಫ್ತಾ ಹಗರಣ: ಮಹಾರಾಷ್ಟ್ರ ಸರ್ಕಾರ ತಲ್ಲಣ| ಸಚಿವ ದೇಶಮುಖ್ ಹಣೆಬರಹ ಇಂದು ನಿರ್ಧಾರ| ಸಮಗ್ರ ತನಿಖೆಗೆ ಖುದ್ದು ಶರದ್ ಪವಾರ್ ಆಗ್ರಹ
ಮುಂಬೈ(ಮಾ.22): ಮಹಾರಾಷ್ಟ್ರ ಗೃಹ ಸಚಿವ, ಎನ್‌ಸಿಪಿ ಮುಖಂಡ ಅನಿಲ್ ದೇಶಮುಖ್ ಅವರ ವಿರುದ್ಧ ನಿರ್ಗಮಿತ ಮುಂಬೈ ಪೊಲೀಸ್ ಆಯುಕ್ತ ಪರಮ್‌ಬೀರ್ ಸಿಂಗ್ ಸಿಡಿಸಿರುವ ‘100 ಕೋಟಿ ರು. ಹಫ್ತಾ ವಸೂಲಿ’ ಆರೋಪವು ‘ಮಹಾರಾಷ್ಟ್ರ ವಿಕಾಸ ಅಘಾಡಿ’ ಮೈತ್ರಿಕೂಟದ ಸರ್ಕಾರದಲ್ಲಿ ತೀವ್ರ ತಲ್ಲಣ ಸೃಷ್ಟಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಖುದ್ದು ಮೈತ್ರಿಕೂಟದ ಪ್ರಮುಖ ನೇತಾರರಾಗಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆಗ್ರಹಿಸಿದ್ದಾರೆ.
ಈ ನಡುವೆ, ‘ದೇಶಮುಖ್ ಹಣೆಬರಹದ (ರಾಜೀನಾಮೆ ಕುರಿತು) ಬಗ್ಗೆ ಚರ್ಚಿಸಲು ಮೈತ್ರಿಕೂಟದ ನಾಯಕರು ಸೋಮವಾರ ಸಭೆ ನಡೆಸಲಿದ್ದು, ಅಲ್ಲಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಎನ್‌ಸಿಪಿ ನಾಯಕರಾದ ಅಜಿತ್ ಪವಾರ್, ಪ್ರಫುಲ್ ಪಟೇಲ್, ಸುಪ್ರಿಯಾ ಸುಳೆ, ಜಯಂತ್ ಪಾಟೀಲ್ ಮತ್ತು ಕಾಂಗ್ರೆಸ್ ನಾಯಕ ಕಮಲ್‌ನಾಥ್ ಭಾನುವಾರ ಶರದ್ ಪವಾರ್ ಮನೆಯಲ್ಲಿ ದಿಢೀರ್ ಸಭೆ ನಡೆಸಿದರು. ಈ ಸಭೆಯಲ್ಲಿ ಶಿವಸೇನೆ ಸಂಸದ ಸಂಜಯ್ ರಾವುತ್ ಕೂಡಾ ಭಾಗಿಯಾಗಿದ್ದರು.
ಶರದ್ ಪವಾರ್ ಆಗ್ರಹ:
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಪವಾರ್, ‘ದೇಶಮುಖ್ ವಿರುದ್ಧದ ಆರೋಪ ಗಂಭೀರವಾದುದು. ವಿಷಯದ ಆಳಕ್ಕಿಳಿದು ತನಿಖೆ ಮಾಡುವುದು ಅಗತ್ಯ. ತನಿಖೆ ನಡೆಸಲು ನಿವೃತ್ತ ಐಪಿಎಸ್ ಅಧಿಕಾರಿ ಜೂಲಿಯೋ ರಿಬೇರಿಯೋ ಅವರು ಸೂಕ್ತ ವ್ಯಕ್ತಿ. ರೆಬೇರಿಯೋ ನೇರ ನಿಷ್ಠುರ ಅಧಿಕಾರಿಯಾಗಿದ್ದು, ಅವರ ಮೇಲೆ ಪ್ರಭಾವ ಬೀರಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಅವರ ನೇತೃತ್ವದಲ್ಲಿಯೇ ತನಿಖೆ ನಡೆಯಬೇಕು. ಆದರೆ, ಪರಮ್‌ಬೀರ್ ಮಾಡಿದ ಆರೋಪದ ಸಮಯ ಸರಿಯಿಲ್ಲ. ಅವರು ಇಷ್ಟುದಿನ ಏಕೆ ಸುಮ್ಮನಿದ್ದರು? ಸರ್ಕಾರಕ್ಕೆ ಕೆಟ್ಟಹೆಸರು ತರುವ ಸಂಚು ಕೂಡ ನಡೆದಿರಬಹುದು’ ಎಂದು ಪವಾರ್ ಹೇಳಿದರು.
ಈ ನಡುವೆ, ದೇಶಮುಖ್ ವಿಚಾರದಲ್ಲಿ ಠಾಕ್ರೆ ಗಂಭೀರ ನಿಲುವು ತಳೆದಿದ್ದಾರೆ ಎಂದು ಎನ್‌ಸಿಪಿ ನಾಯಕರೊಬ್ಬರು ಹೇಳಿದ್ದಾರೆ. ಅದರೆ ರಾಜೀನಾಮೆ ಅಗತ್ಯವಿಲ್ಲ ಎಂದು ಸಚಿವ ಜಯಂತ ಪಾಟೀಲ್ ತಿಳಿಸಿದ್ದಾರೆ.
ಮಹಾ ವಸೂಲಿ ಅಘಾಡಿ:
‘ಮಹಾರಾಷ್ಟ್ರ ಸರ್ಕಾರವನ್ನು ‘ಮಹಾ ವಸೂಲಿ ಅಘಾಡಿ’ ನಡೆಸುತ್ತಿದೆ. ಪರಮ್‌ಬೀರ್ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಬಿಜೆಪಿ ಪ್ರಧಾನ ಕಾರ‍್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಇನ್ನು ಗೃಹ ಸಚಿವರು 100 ಕೋಟಿ ಮಾಸಿಕ ಹಫ್ತಾ ನಿಗದಿ ಮಾಡಿದ್ದರೆ ಉಳಿದ ಸಚಿವರ ಎಷ್ಟೆಷ್ಟುನಿಗದಿ ಮಾಡಿದ್ದರು ಎಂದು ಕೇಂದ್ರ ಸಚಿವ ರವಿಶಂಕರ್‌ಪ್ರಸಾದ್ ಪ್ರಶ್ನಿಸಿದ್ದಾರೆ. ಇದೇ ವೇಳೆ ಮನ್‌ಸುಖ್ ಹಿರೇನ್ ನಿಗೂಢ ಸಾವಿನ ಪ್ರಕರಣ ಸಂಬಂಧ ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಝೆ, ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸೇರಿದ ಮಲಬಾರ್ ಹಿಲ್‌ನಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಅವರು ಅಲ್ಲೇನು ಮಾಡುತ್ತಿದ್ದರು ಎಂಬುದರ ತನಿಖೆಯಾಗಬೇಕು. ತಮ್ಮ ಅಧಿಕೃತ ನಿವಾಸದಲ್ಲಿ ಸಚಿನ್ ವಾಸವಿದ್ದುದ್ದು ಸಿಎಂಗೆ ಗೊತ್ತಿರಲಿಲ್ಲವೇ? ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ನಾಯಕ ನಾರಾಯಣ್ ರಾಣೆ ಆಗ್ರಹ ಮಾಡಿದ್ದಾರೆ.
ಬಿಜೆಪಿ ಪ್ರತಿಭಟನೆ:
ಈ ನಡುವೆ ಹಫ್ತಾ ಆರೋಪ ಎದುರಿಸುತ್ತಿರುವ ಅನಿಲ್ ದೇಶ್‌ಮುಖ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಭಾನುವಾರ ಪುಣೆ, ನಾಗಪುರ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿಪ್ರತಿಭಟನೆ ನಡೆಸಿ, ಅವರ ರಾಜೀನಾಮೆಗೆ ಒತ್ತಾಯಿಸಿದರು.
ಏನಿದು ಹಗರಣ?
- ಮಹಾರಾಷ್ಟ್ರದ ಗೃಹ ಸಚಿವ ಪ್ರತಿ ತಿಂಗಳು 100 ಕೋಟಿ ರು. ಹಫ್ತಾ ಕೇಳುತ್ತಾರೆಂದು ಮುಖ್ಯಮಂತ್ರಿಗೆ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ದೂರು
- ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬ್ ಇಟ್ಟಅಧಿಕಾರಿಯನ್ನು ಬಳಸಿಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪ
- ತನಿಖೆಗೆ ಬಿಜೆಪಿ ಬಿಗಿಪಟ್ಟು, ಮೈತ್ರಿ ಸರ್ಕಾರದ ಅಂಗಪಕ್ಷ ಎನ್‌ಸಿಪಿಯಿಂದಲೂ ಬೇಡಿಕೆ
- ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದಲ್ಲಿ ತೀವ್ರ ಸಂಚಲನ