24 ಗಂಟೆ ಡೆಡ್‌ಲೈನ್, ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಕಿತ್ತೆಸೆಯಲು ಮಿತ್ರ ಪಕ್ಷ ಸಂಪರ್ಕಿಸಿದ ಆಪ್
24 ಗಂಟೆ ಸಮಯ ನೀಡುತ್ತೇವೆ ಎಂದು ಆಪ್ ಕಾಂಗ್ರೆಸ್‌ಗೆ ಎಚ್ಚರಿಸಿದೆ. ಇಷ್ಟೇ ಅಲ್ಲ, ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಕಿತ್ತೆಸೆಯಲು ಮಿತ್ರ ಪಕ್ಷಗಳನ್ನು ಸಂಪರ್ಕಿಸಿದೆ.
ನವದೆಹಲಿ(ಡಿ.26) ಇಂಡಿಯಾ ಮೈತ್ರಿಯಲ್ಲಿ ಕಾಣಿಸಿಕೊಂಡ ಬಿರುಕು ಕಂದವಾಗಿದೆ. ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ ನಡುವಿನ ಜಟಾಪಟಿ ಇದೀಗ ಹೊಸ ತಲೆನೋವಿಗೆ ಕಾರಣವಾಗಿದೆ. ದೆಹಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಆಪ್ ಹಾಗೂ ಕಾಂಗ್ರೆಸ್ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಇಷ್ಟೇ ಅಲ್ಲ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಆರೋಪಗಳಿಂದ ಆಪ್ ಕೆರಳಿದೆ. ಇದರ ಪರಿಣಾಮ ಕಾಂಗ್ರೆಸ್‌ಗೆ ಕೇವಲ 24 ಗಂಟೆ ಡೆಡ್‌ಲೈನ್ ನೀಡಿದೆ.ಇಷ್ಟರೊಳಗೆ ಅಜಯ್ ಮಾಕೆನ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದೆ. ಇದೇ ವೇಳೆ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳನ್ನು ಸಂಪರ್ಕಿಸಿರುವ ಆಪ್, ಮೈತ್ರಿಯಿಂದ ಕಾಂಗ್ರೆಸ್ ಹೊರಗಿಡಲು ಚರ್ಚಿಸಿದೆ.
ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಇತ್ತ ಕಾಂಗ್ರೆಸ್ ಕೂಡ ಈ ಬಾರಿ ದೆಹಲಿ ಅಧಿಕಾರ ಹಿಡಿಯಲು ಮುಂದಾಗಿದೆ. ಇದರ ನಡುವೆ ಆಪ್ ಹಾಗೂ ಕಾಂಗ್ರೆಸ್ ಆರೋಪ ಪ್ರತ್ಯಾರೋಪಕ್ಕೆ ಇಳಿದಿದೆ. ಈ ಪೈಕಿ ದೆಹಲಿ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಕೆಲ ಗಂಭೀರ ಆರೋಪ ಮಾಡಿದ್ದರು. ಅರವಿಂದ್ ಕೇಜ್ರಿವಾಲ್ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. 2013ರಲ್ಲಿ ಕಾಂಗ್ರೆಸ್ ತಪ್ಪು ಮಾಡಿತ್ತು. ಆಪ್‌ಗೆ ಬೆಂಬಲ ನೀಡಿ ದೊಡ್ಡ ತಪ್ಪಾಗಿದೆ. ಇದನ್ನು 2024ರ ಚುನಾವಣೆಯಲ್ಲಿ ಸರಿಪಡಿಸುತ್ತೇವೆ ಎಂದಿದ್ದರು. ಇಷ್ಟೇ ಅಲ್ಲ ಆಪ್ ಸರ್ಕಾರದ ವಿರುದ್ಧವೂ ಆರೋಪ ಮಾಡಿದ್ದರು. ಇದು ಆಪ್ ನಾಯಕರ ಕಣ್ಣು ಕೆಂಪಾಗಿಸಿದೆ.
ದೆಹಲಿ ಆಪ್ ಸರ್ಕಾರದ ಮುಖವಾಡ ಬಯಲು, ಮಹಿಳಾ ಸಮ್ಮಾನ್-ಸಂಜೀವಿನಿ ಯೋಜನೆ ನಕಲಿ?
ಇದೀಗ ಆಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ದೆಹಲಿ ಮುಖ್ಯಮಂತ್ರಿ ಅತಿಶಿ ಸಿಂಗ್ ಸೇರಿ ಆಪ್ ನಾಯಕರು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಅಜಯ್ ಮಾಕೇನ್ ಕೆಲ ಆರೋಪಗಳು ನಿರಾಧಾರವಾಗಿದೆ. ಅರವಿಂದ್ ಕೇಜ್ರಿವಾಲ್ ದೇಶ ವಿರೋಧಿ ಅನ್ನೋ ಆರೋಪವನ್ನು ಅಜಯ್ ಮಾಕೇನ್ ಮಾಡಿದ್ದಾರೆ. ಈ ರೀತಿಯ ಹೇಳಿಕೆ ನೀಡಿರುವ ಅಜಯ್ ಮಾಕೇನ್ ವಿರುದ್ದ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು. 24 ಗಂಟೆ ಸಮಯ ನೀಡುತ್ತೇವೆ. ಅದರೊಳಗೆ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೂ ಆಪ್ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದೆ.
ದೆಹಲಿ ಕಾಂಗ್ರೆಸ್ ಪಕ್ಷ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಹಕರಿಸುತ್ತಿದೆ. ಬಿಜೆಪಿ ಹೇಳಿದಂತೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರ ಮಾತು, ಆರೋಪುಗಳು ನೋಡಿದರೆ ಬಿಜೆಪಿ ಜೊತೆ ಶಾಮೀಲಾಗಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಮೈತ್ರಿ ಚೌಕಟ್ಟು ಮೀರುತ್ತಿದೆ. ಹೀಗಾಗಿ ಇಂಡಿಯಾ ಮೈತ್ರಿಯ ಇತರ ಪಕ್ಷಗಳ ಜೊತೆ ಮಾತನಾಡಿ ಕಾಂಗ್ರೆಸ್ ಹೊರಗಿಡಲಾಗುತ್ತದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಇದೇ ವೇಳೆ ಆಪ್ ಇಂಡಿಯಾ ಮೈತ್ರಿ ಕೂಡದಲ್ಲಿರುವವ ಕೆಲ ಪಕ್ಷಗಳನ್ನು ಸಂಪರ್ಕಿಸಿ ಎನ್ನಲಾಗಿದೆ. ಕಾಂಗ್ರೆಸ್‌ನಿಂದ ಅಸಮಾಧಾನಗೊಂಡಿರುವ ಕೆಲ ಪಕ್ಷಗಳನ್ನು ಸಂಪರ್ಕಿಸಿರುವ ಆಪ್, ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಹೊರಗಿಸಲು ಚರ್ಚಿಸಿದೆ ಎನ್ನಲಾಗಿದೆ. ಕಾಂಗ್ರೆಸ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ದೆಹಲಿ ಚುನಾವಣೆ: ಸ್ಮೃತಿ ಇರಾನಿ ಸಿಎಂ ಅಭ್ಯರ್ಥಿಯಾಗುವರೇ?