* ಹಲವು ರಾಜ್ಯಗಳಲ್ಲಿ ಮುಂದುವರೆದ ಉಷ್ಣ ಮಾರುತ* ರಾಜಸ್ಥಾನದ ಬಿಕಾನೇರ್‌ನಲ್ಲಿ ಗರಿಷ್ಠ 47.1 ಡಿಸೆ ಉಷ್ಣಾಂಶ * ಉಷ್ಣ ಸಂಬಂಧಿ ಕಾಯಿಲೆ ನಿರ್ವಹಣೆಗೆ ಸಜ್ಜಾಗಿ: ಕೇಂದ್ರ

ನವದೆಹಲಿ(ಮೇ.02): ದೇಶದ ಉತ್ತರದ ರಾಜ್ಯಗಳಲ್ಲಿ ಉಷ್ಣ ಮಾರುತದ ಪ್ರಭಾವ ಭಾನುವಾರವೂ ಮುಂದುವರೆದಿದ್ದು, ಹಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. ರಾಜಸ್ಥಾನದ ಬಿಕಾನೇರ್‌ನಲ್ಲಿ ಗರಿಷ್ಠ 47.1 ಡಿಸೆ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಶ್ರೀಗಂಗಾನಗರ್‌ದಲ್ಲಿ 46.9 ಡಿ.ಸೆ, ಅಲಹಾಬಾದ್‌, ಲಖನೌ, ಝಾನ್ಸಿ, ಸತ್ನಾ, ಗುರುಗ್ರಾಮದಲ್ಲಿ ದಾಖಲೆಯ 46.8 ಡಿ.ಸೆ ಉಷ್ಣಾಂಶ ದಾಖಲಾಗಿದೆ.

ಈ ನಡುವೆ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಷ್ಣ ಸಂಬಂಧಿ ಕಾಯಿಲೆಗಳ ನಿರ್ವಹಣೆಗೆ ಅಗತ್ಯ ಪ್ರಮಾಣದ ಔಷಧಿ, ವೈದ್ಯಕೀಯ ಉಪಕರಣಗಳ ಲಭ್ಯತೆಯಿರುವುದಾಗಿ ಖಾತ್ರಿ ಪಡಿಸಿಕೊಳ್ಳುವಂತೆ ಸೂಚನೆ ನೀಡಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ಕ್ರಿಯಾ ಯೋಜನೆಯಡಿ ಉಷ್ಣ ಸಂಬಂಧಿತ ಕಾಯಿಲೆಗಳ ನಿರ್ವಹಣೆಗೆ ಮಾರ್ಗಸೂಚಿಯನ್ನು ಹೊರಡಿಸಿದ್ದು, ಉಷ್ಣ ಸಂಬಂಧಿ ಕಾಯಿಲೆಗಳ ಬಗ್ಗೆ ದೈನಂದಿನ ನಿಗಾ ವರದಿಯನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ)ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.