ಅಸ್ಸಾಂ: ಫಲಿತಾಂಶಕ್ಕೂ ಮುನ್ನವೇ ರೆಸಾರ್ಟ್‌ ರಾಜಕೀಯ| ಕಾಂಗ್ರೆಸ್‌ ಕೂಟದ 22 ಅಭ್ಯರ್ಥಿಗಳು ಜೈಪುರಕ್ಕೆ

ಗುವಾಹಟಿ(ಏ.10): ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳೂವ ಮುನ್ನವೇ ರೆಸಾರ್ಟ್‌ ರಾಜಕಾರಣ ಆರಂಭವಾಗಿದೆ. ಬಿಜೆಪಿಯ ಆಪರೇಷನ್‌ ಕಮಲದ ಭೀತಿಯಿಂದಾಗಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದ 22 ಮಂದಿ ಅಭ್ಯರ್ಥಿಗಳು ಜೈಪುರಕ್ಕೆ ಪ್ರಯಾಣ ಬೆಳೆಸಿದ್ದು, ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.

ಎಐಯುಡಿಎಫ್‌, ಬೋಡೋಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ (ಬಿಪಿಎಫ್‌) ಹಾಗೂ ಕಾಂಗ್ರೆಸ್‌ ಸದಸ್ಯರು ಸೇರಿದಂತೆ ಒಟ್ಟು 22 ಮಂದಿ ಜೈಪುರದ ರೆಸಾರ್ಟ್‌ಗೆ ತೆರಳಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದಾಗ ಕಾಂಗ್ರೆಸ್‌ ಶಾಸಕರನ್ನು ಇಟ್ಟಿದ್ದ ರೆಸಾರ್ಟ್‌ನಲ್ಲೇ ಇವರನ್ನು ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಜೆಪಿ, ವಿಪಕ್ಷ ಸದಸ್ಯರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.