ಜೋಶಿಮಠ(ಫೆ.14): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತ ಹಾಗೂ ಅದರಿಂದ ಉಂಟಾದ ಭೀಕರ ಪ್ರವಾಹದಿಂದಾಗಿ ತಪೋವನ ಜಲವಿದ್ಯುತ್‌ ಯೋಜನೆಯ ಸುರಂಗದೊಳಗೆ ಸಿಲುಕಿರುವ 30 ಮಂದಿಯ ರಕ್ಷಣೆಗೆ ಕೊನೇ ಯತ್ನ ಆರಂಭವಾಗಿದೆ. ಸತತ 7ನೇ ದಿನವಾದ ಶನಿವಾರವೂ ರಕ್ಷಣಾ ಹರಸಾಹಸ ಮುಂದುವರಿದಿದೆ. ಸುರಂಗದೊಳಗೆ ಸಮನಾಂತರವಾಗಿ ರಂಧ್ರವೊಂದನ್ನು ಕೊರೆಯುವಲ್ಲಿ ಸಫಲರಾಗಿರುವ ರಕ್ಷಣಾ ತಂಡಗಳು, ಅದರ ಅಗಲವನ್ನು ಒಂದು ಅಡಿಯಷ್ಟುವಿಸ್ತರಿಸಿ ಕ್ಯಾಮೆರಾವೊಂದನ್ನು ಕಳುಹಿಸಲು ಪ್ರಯತ್ನ ನಡೆಸುತ್ತಿವೆ.

‘ಸುರಂಗದೊಳಗೆ ಕಾರ್ಮಿಕರು ಎಲ್ಲಿದ್ದಾರೆ’ ಎಂಬುದನ್ನು ಅರಿಯುವ ಪ್ರಯತ್ನ ಇದಾಗಿದೆ. ಆದರೆ ಸುರಂಗದೊಳಗಿನಿಂದ ಹೂಳು ಬರುತ್ತಿರುವುದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಕ್ಯಾಮೆರಾ ಜತೆಗೆ ಪೈಪ್‌ ಅಳವಡಿಸಿ, ಸುರಂಗದೊಳಗೆ ತುಂಬಿರುವ ನೀರು ಹೊರತೆಗೆಯುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ. ಎನ್‌ಟಿಪಿಸಿ 100ಕ್ಕೂ ಅಧಿಕ ವಿಜ್ಞಾನಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಬಗೆಬಗೆಯ ತಂತ್ರ ಪ್ರಯೋಗಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಎನ್‌ಟಿಪಿಸಿ ಯೀಜನೆಯ ಮುಖ್ಯ ವ್ಯವಸ್ಥಾಪಕ ಆರ್‌.ಪಿ. ಅಹಿರ್ವಾಲ್‌, ‘ಈಗ ರಂಧ್ರ ಕೊರೆದು ಕ್ಯಾಮರಾ ಕಳಿಸುವ ಯತ್ನ ನಡೆದಿದೆ. ಅಲ್ಲದೆ, ರಂಧ್ರವನ್ನು ಇನ್ನಷ್ಟುಅಗಲಗೊಳಿಸಲಾಗುತ್ತಿದೆ. ಅಗತ್ಯ ಬಿದ್ದರೆ ರಕ್ಷಣಾ ಸಿಬ್ಬಂದಿಯನ್ನು ರಂಧ್ರದೊಳಗೆ ಇಳಿಸಿ, ಸಿಲುಕಿದವರ ಸಂಭಾವ್ಯ ಸ್ಥಳಕ್ಕೆ ಕಳಿಸುವ ಯತ್ನ ಮಾಡಲಾಗುವುದು’ ಎಂದರು.

3 ರೀತಿಯ ತಂತ್ರಗಾರಿಕೆ:

ತಪೋವನ ವಿದ್ಯುತ್‌ ಯೋಜನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಸಿಬ್ಬಂದಿ ಒಟ್ಟು ಮೂರು ರೀತಿಯ ತಂತ್ರಗಾರಿಕೆಯನ್ನು ನಡೆಸುತ್ತಿದ್ದಾರೆ. ಕ್ಯಾಮೆರಾ ಕಳುಹಿಸಲು ರಂಧ್ರ ವಿಸ್ತರಿಸುವುದು ಒಂದೆಡೆಯಾದರೆ, ಜಲ ವಿದ್ಯುತ್‌ ಉತ್ಪಾದನೆಗಾಗಿ ಎನ್‌ಟಿಪಿಸಿ ನಿರ್ಮಿಸಿರುವ ಬ್ಯಾರೇಜ್‌ನಲ್ಲಿ ಹೂಳು ತುಂಬಿಕೊಂಡು ಅದು ಸುರಂಗಕ್ಕೆ ನುಗ್ಗುತ್ತಿದೆ. ಹೀಗಾಗಿ ಹೂಳು ತೆಗೆಯಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಪ್ರವಾಹದ ಸಂದರ್ಭದಲ್ಲಿ ಧೌಲಿಗಂಗಾ ನದಿ ಪಥ ಬದಲಾಗಿದ್ದು, ಬಲದಿಂದ ಎಡಭಾಗಕ್ಕೆ ಸ್ಥಳಾಂತರಗೊಂಡಿದೆ. ಹೂಳು ತೆಗೆದು, ಅದನ್ನು ಬಲ ಭಾಗದಲ್ಲಿ ಹರಿಯುವಂತೆ ಮಾಡುವ ಯತ್ನ ನಡೆಯುತ್ತಿದೆ.

ಇನ್ನೆರಡು ಶವ ಪತ್ತೆ:

ಈ ನಡುವೆ, ಶನಿವಾರ ಇನ್ನೆರಡು ಶವಗಳು ಪತ್ತೆಯಾಗಿವೆ. ಇದರೊಂದಿಗೆ ಹಿಮ ಸುನಾಮಿಗೆ ಬಲಿ ಆದವರ ಸಂಖ್ಯೆ 38ಕ್ಕೆ ಏರಿದೆ.