ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ಇಬ್ಬರೂ ಒಂದಾಗಿ ಎದುರಿಸುವ ಘೋಷಣೆ ಮಾಡಿದ್ದಾರೆ. ಪಕ್ಷ ಒಗ್ಗಟ್ಟಾಗಿದೆ. ಈ ಕುರಿತು ಅನುಮಾನ ಬೇಡ’ ಎಂದು ಕಾಂಗ್ರೆಸ್‌ ನಾಯಕ ವೇಣುಗೋಪಾಲ್‌ ಹೇಳಿದ್ದಾರೆ. 

ನವದೆಹಲಿ (ಜೂನ್ 10, 2023): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಸಿಡಿದೆದ್ದಿರುವ ರಾಜಸ್ಥಾನದ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌, ತಮ್ಮ ತಂದೆ ಪುಣ್ಯಸ್ಮರಣೆಯ ದಿನವಾದ ಜೂನ್‌ 11ರಂದು ಹೊಸ ಪಕ್ಷವೊಂದು ಘೋಷಿಸುವ ಸಾಧ್ಯತೆ ಇದೆ ಎಂಬ ವರ​ದಿ​ಗ​ಳನ್ನು ಕಾಂಗ್ರೆಸ್‌ ಸ್ಪಷ್ಟ​ವಾಗಿ ನಿರಾ​ಕ​ರಿ​ಸಿ​ದೆ. ಶುಕ್ರ​ವಾರ ಪಿಟಿಐ ಸುದ್ದಿ​ಸಂಸ್ಥೆ ಜತೆ ಮಾತ​ನಾ​ಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ‘ಇದೆಲ್ಲಾ ಊಹಾಪೋಹ. ಅಂಥ ಯಾವುದೇ ಸಾಧ್ಯತೆ ಇಲ್ಲ. ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ಇಬ್ಬರೂ ಒಂದಾಗಿ ಎದುರಿಸುವ ಘೋಷಣೆ ಮಾಡಿದ್ದಾರೆ. ಪಕ್ಷ ಒಗ್ಗಟ್ಟಾಗಿದೆ. ಈ ಕುರಿತು ಅನುಮಾನ ಬೇಡ’ ಎಂದು ಹೇಳಿ​ದ್ದಾ​ರೆ.

‘ನಾನು ಇತ್ತೀ​ಚೆಗೆ ಸಚಿನ್‌ ಪೈಲ​ಟ್‌​ರನ್ನು ಭೇಟಿ ಮಾಡಿ​ದ್ದೇನೆ. ಅವರು ಹೊಸ ಪಕ್ಷ ಸ್ಥಾಪಿ​ಸುವಂಥ ಯಾವುದೇ ಸ್ಥಿತಿ ಇಲ್ಲ. ಮಾಧ್ಯ​ಮ​ಗಳು ಊಹಾ​ಪೋ​ಹದ ವರದಿ ಮಾಡ​ಬಾ​ರ​ದು’ ಎಂದ​ರು.

ಇದನ್ನು ಓದಿ: ಭ್ರಷ್ಟಾಚಾರ ಇದ್ದಲ್ಲಿ ಜನ ಸರ್ಕಾರ ಉಳಿಸಲ್ಲ: ಬೊಮ್ಮಾಯಿ ಸರ್ಕಾರ ತೋರಿಸಿ ಗೆಹ್ಲೋಟ್‌ಗೆ ಸಚಿನ್‌ ಪೈಲಟ್‌ ಎಚ್ಚರಿಕೆ!

‘ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಸಿಎಂ ಅಶೋಕ್‌ ಗೆಹ್ಲೋಟ್‌ ಕ್ರಮ ಕೈಗೊಳ್ಳುತ್ತಿಲ್ಲ. ವಿಪಕ್ಷ ನಾಯಕಿ ವಸುಂಧರಾ ರಾಜೇ ಜೊತೆ ಅವರು ಕೈಜೋಡಿಸಿದ್ದಾರೆ’ ಎಂದು ಹಲವು ಬಾರಿ ಆರೋಪಿಸಿದ್ದ ಸಚಿನ್‌ ಪೈಲಟ್‌, ಇದರ ವಿರುದ್ಧ ಇತ್ತೀಚೆಗೆ ಒಂದು ದಿನದ ಉಪವಾಸ ಪ್ರತಿಭಟನೆ ಮತ್ತು ಪಾದಯಾತ್ರೆ ಕೂಡಾ ನಡೆಸಿದ್ದರು. ಅದರ ಬೆನ್ನಲ್ಲೇ ಉಭಯ ನಾಯಕರನ್ನು ಹೈಕಮಾಂಡ್‌ ದೆಹಲಿಗೆ ಕರೆಸಿ ಸಂಧಾನ ಯತ್ನ ನಡೆದಿದ್ದರೂ ವಿಫಲವಾಗಿತ್ತು.

ಈ ವೇಳೆ ಉಭಯ ನಾಯಕರು ವರ್ಷಾಂತ್ಯಕ್ಕೆ ನಡೆಯುವ ಚುನಾವಣೆಯನ್ನು ಒಂದಾಗಿ ಎದುರಿಸುವ ಘೋಷಣೆ ಮಾಡಿದ್ದರು. ಆದರೆ ರಾಜ್ಯಕ್ಕೆ ಮರಳಿದ ಬೆನ್ನಲ್ಲೇ, ಭ್ರಷ್ಟಾಚಾರದ ಹೋರಾಟದಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಸಚಿನ್‌ ಪೈಲಟ್‌ ಮತ್ತೆ ಭುಗಿಲೆದ್ದಿದ್ದರು. ನಂತ​ರ ಸಚಿನ್‌ ಪೈಲಟ್‌ ಹೊಸ ಪಕ್ಷ ರಚನೆ ಸುದ್ದಿ ಹಬ್ಬಿದೆ.

ಇದನ್ನೂ ಓದಿ: Sachin Pilot Vs Ashok Gehlot 2.0: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಉಪ ಮುಖ್ಯಮಂತ್ರಿಯಿಂದಲೇ ಉಪವಾಸ