ಧರ್ಮದಂಡನೆ: ಈಟಿ ಹಿಡಿದು ಕಾವಲುಗಾರನಾಗಿ ಶಿಕ್ಷೆ ಪೂರೈಸಿದ ಬಾದಲ್
ಣ ಅಕಾಲ್ ತಖ್ತ್‌ನಿಂದ ಶಿಕ್ಷೆಗೆ ಒಳಗಾಗಿದ್ದ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಬಾದಲ್ ಅವರು ಮಂಗಳವಾರ ಸ್ವರ್ಣ ಮಂದಿರದಲ್ಲಿ ಕಾವಲುಗಾರನಾಗಿ ಸೇವೆ ಸಲ್ಲಿಸಿ ಶಿಕ್ಷೆ ಅನುಭವಿಸಿದರು.
ಅಮೃತಸರ: ಸಿಖ್ ಧರ್ಮಗ್ರಂಥಕ್ಕೆ ಅವಮಾನ ಎಸಗಿದ್ದ ವಿವಾದಿತ ಸಂತ ರಾಮ್ ರಹೀಂಗೆ ಕ್ಷಮೆ ನೀಡಿದ್ದ ಕಾರಣ ಅಕಾಲ್ ತಖ್ತ್‌ನಿಂದ ಶಿಕ್ಷೆಗೆ ಒಳಗಾಗಿದ್ದ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಬಾದಲ್ ಅವರು ಮಂಗಳವಾರ ಸ್ವರ್ಣ ಮಂದಿರದಲ್ಲಿ ಕಾವಲುಗಾರನಾಗಿ ಸೇವೆ ಸಲ್ಲಿಸಿ ಶಿಕ್ಷೆ ಅನುಭವಿಸಿದರು. ಮಧ್ಯಾಹ್ನ 12 ಗಂಟೆಯಿಂದ 1 ತಾಸು ಸ್ವರ್ಣ ಮಂದಿರದ ಮುಖ್ಯದ್ವಾರದಲ್ಲಿ ಸೇವಕರ ಉಡುಪು ಧರಿಸಿ, ಕೈಯಲ್ಲಿ ಈಟಿ ಹಿಡಿದು, ಕತ್ತಿನಲ್ಲಿ ತಾವು ಮಾಡಿದ ತಪ್ಪು ಮುದ್ರಿತವಾಗಿದ್ದ ಫಲಕ ಹಾಕಿಕೊಂಡು ಗಾಲಿಕುರ್ಚಿಯಲ್ಲಿ ಕುಳಿತು ಶಿಕ್ಷೆ ಅನುಭವಿಸಿದರು. ಬಳಿಕ ಲಂಗರ್‌ನಲ್ಲಿ (ಭೋಜನ ಶಾಲೆ) ಊಟ ಮಾಡಿದ ತಟ್ಟೆಗಳನ್ನು ಸ್ವೀಕರಿಸಿ ಶುಚಿಗೊಳಿಸಲು ಸಹಕರಿಸಿದರು. ಕಾಲಿಗೆ ಪೆಟ್ಟಾಗಿದ್ದ ಕಾರಣ ಶೂ ಪಾಲಿಷ್ ಮಾಡಲಿಲ್ಲ ಹಾಗೂ ಟಾಯ್ಲೆಟ್ ತೊಳೆಯಲಿಲ್ಲ.
ಇದೇ ವೇಳೆ, ಇವರ ಜತೆ ಶಿಕ್ಷೆಗೆ ಒಳಗಾಗಿದ ಆಕಾಲಿ ದಳದ ಮಾಜಿ ಸಚಿವರು ಸಹ ಕತ್ತಿಗೆಗೆ ಫಲಕ ಧರಿಸಿಕೊಂಡು, ಶೌಚಾಲಯ ಶುಚಿಗೊಳಿಸಿ, ಭಕ್ತರಿಗೆ ಊಟ ತಿಂಡಿಗಳನ್ನು ಬಡಿಸಿ ಪಾತ್ರೆ ತೊಳೆದು, ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದರು. ಜೊತೆಗೆ 1 ತಾಸು ಕೀರ್ತನೆಗಳನ್ನು ಆಲಿಸಿ, ಸಿಖ್ಖರ ಪ್ರಾರ್ಥನೆಗಳನ್ನು ಪಾಲಿಸುವ ಮೂಲಕ ತಮ್ಮ ಶಿಕ್ಷಾ ಅವಧಿಯನ್ನು ಪೂರ್ಣಗೊಳಿಸಿದರು. ಈ ನಡುವೆ ಅಕಾಲಿ ತಖ್ತ್ ನಿರ್ದೇಶನದಂತೆ ಆಕಾಲಿ ದಳಕ್ಕೆ ಹೊಸ ಅಧ್ಯಕ್ಷರ ಶೋಧ ಆರಂಭವಾಗಿದೆ.
ಕಾಶ್ಮೀರ: 7 ಜನರ ಕೊಂದಿದ್ದ ಉಗ್ರನ ಹತ್ಯೆ
ಪಿಟಿಐ ಶ್ರೀನಗರ: ಜಮ್ಮು-ಕಾಶ್ಮೀರದ ಗಂದೇರ್‌ಬಾಲ್‌ನಲ್ಲಿ ಅ.20ರಂದು ಖಾಸಗಿ ಕಂಪನಿಯ ವಸತಿ ಶಿಬಿರದಲ್ಲಿ 6 ಕಾರ್ಮಿಕರು ಮತ್ತು ವೈದ್ಯನ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿವೆ. ‘ಕುಲ್ಗಾಂ ನಿವಾಸಿ ಆಗಿದ್ದ ಜುನೈದ್ ಅಹ್ಮದ್ ಭಟ್ ಎಂಬ ಭಯೋತ್ಪಾದಕ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದವನು. ಈತ ಅವರು ಗಗಾಂಗೀರ್, ಗಂದೇರ್‌ಬಾಲ್ ಮತ್ತು ಇತರ ಸ್ಥಳಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ಎ ದರ್ಜೆ ಉಗ್ರ ಈತನಾಗಿದ್ದ. ಇವನ ಹತ್ಯೆಯಿಂದ ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ಸಿಕ್ಕಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಂದೇರ್ಬಾಲ್ ದಾಳಿಯ ಸಮಯದಲ್ಲಿ ಎಕೆ ರೈಫಲ್ ಅನ್ನು ಹೊತ್ತೊಯ್ಯುವ ವೇಳೆ ಸಿಸಿಟಿವಿಯಲ್ಲಿ ಭಟ್ ಕಾಣಿಸಿಕೊಂಡಿದ್ದ.ಕಾಶ್ಮೀರದ ದಚಿಗಂ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಈತನ ಶೋಧ ಕಾರ್ಯ ನಡೆಸಿದ್ದವು. ಈ ವೇಳೆ ಸೈನಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆ ನಡೆಸಿದ ಪ್ರತಿದಾಳಿಯಲ್ಲಿ ಭಟ್ ಹತನಾಗಿದ್ದಾನೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.
‘ಈ ಯಶಸ್ವಿ ಕಾರ್ಯಾಚರಣೆಗೆ ಚಿನಾರ್ ವಾರಿಯರ್ಸ್, ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಲೆಫ್ಟಿನೆಂಟ್ ಜನರಲ್ ಸುಚಿಂದ್ರ ಕುಮಾರ್ ಅಭಿನಂದಿಸಿದ್ದಾರೆ’ ಎಂದು ಉತ್ತರ ಸೇನಾ ಕಮಾಂಡ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.