ನವದೆಹಲಿ(ಜೂ.18): ಭಾರತ ಹಾಗೂ ಚೀನಾ ಯೋಧರು ಗಡಿಯಲ್ಲಿ ಕಾದಾಡಿಕೊಂಡ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರಿಗೆ ಕರೆ ಮಾಇಡ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಬುಧವಾರ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತದ 20 ಯೋಧರು ಹುತಾತ್ಮರಾದ ಬಗ್ಗೆ ಜೈಶಂಕರ್‌ ಅವರು ಭಾರತ ಸರ್ಕಾರದ ಪರವಾಗಿ ತೀವ್ರ ಪ್ರತಿಭಟನೆ ಸಲ್ಲಿಸಿದ್ದಾರೆ ಹಾಗೂ ಇದು ಪೂರ್ವಯೋಜಿತ ಕೃತ್ಯವಾಗಿದ್ದು, ದ್ವಿಪಕ್ಷೀಯ ಸಂಬಂಧದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.

ಆದರೆ ಇದೇ ವೇಳೆ ಎರಡೂ ದೇಶಗಳು, ಆದಷ್ಟುಶೀಘ್ರ ಶಾಂತಿ ಮರುಸ್ಥಾಪನೆಯ ಸಹಮತಕ್ಕೆ ಬಂದಿವೆ. ‘ಜವಾಬ್ದಾರಿಯುತ ರೀತಿಯಲ್ಲಿ ಪ್ರಸಕ್ತ ಸ್ಥಿತಿ ನಿಭಾಯಿಸಬೇಕು. ಜೂನ್‌ 6ರಂದು ಉಭಯ ದೇಶಗಳ ಸೇನಾ ಕಮಾಂಡರ್‌ಗಳು ಮಾಡಿಕೊಂಡ ಒಪ್ಪಂದದ ಅನ್ವಯ ನಡೆಯಬೇಕು. ಪರಿಸ್ಥಿತಿಯನ್ನು ಮತ್ತಷ್ಟುಪ್ರಕ್ಷುಬ್ಧಗೊಳಿಸದೇ ದ್ವಿಪಕ್ಷೀಯ ಒಪ್ಪಂದದಂತೆ ಶಾಂತಿ ಕಾಯ್ದುಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದಿವೆ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಹಾಗೂ ಚೀನಾ ವಿದೇಶಾಂಗ ಸಚಿವಾಲಯದ ಪ್ರತ್ಯೇಕ ಪ್ರಕಟಣೆಗಳು ತಿಳಿಸಿವೆ.

ಚೀನಾ ವಿರುದ್ಧ ಭುಗಿಲೆದ್ದ ಆಕ್ರೋಶ: #UnmaskingChina ಅಭಿಯಾನ ಶುರು!

ಜೈಶಂಕರ್‌ ತೀವ್ರ ಪ್ರತಿಭಟನೆ:

ದೂರವಾಣಿಯಲ್ಲಿ ವಾಂಗ್‌ ಯಿ ಅವರ ಜತೆ ಮಾತನಾಡಿದ ಜೈಶಂಕರ್‌, ‘ಗಲ್ವಾನ್‌ ಕಣಿವೆಯಲ್ಲಿ ಚೀನಾ ಪೂರ್ವಯೋಜಿತ ಕ್ರಮ ಕೈಗೊಂಡಿದೆ. ಗಲ್ವಾನ್‌ ಕಣಿವೆಯಲ್ಲಿನ ಭಾರತದ ಭಾಗದಲ್ಲಿ ಚೀನಾ ನಿರ್ಮಾಣ ಕೆಲಸವೊಂದಕ್ಕೆ ಮುಂದಾಯಿತು. ಇದರಿಂದ ಗಡಿಯಲ್ಲಿ ತ್ವೇಷ ಪರಿಸ್ಥಿತಿ ಸೃಷ್ಟಿಯಾಗಿದೆ. ಇದೊಂದು ಕಂಡು ಕೇಳರಿಯದ ವಿದ್ಯಮಾನ. ಇದರಿಂದ ದ್ವಿಪಕ್ಷೀಯ ಸಂಬಂಧದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ಚೀನಾ ತನ್ನ ಕ್ರಮಗಳನ್ನು ಮರುಪರಿಶೀಲಿಸಬೇಕು ಹಾಗೂ ತಪ್ಪು ಸರಿಪಡಿಸುವ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಚೀನಾ ಯೋಧರ ಕೃತ್ಯವು ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ಒಪ್ಪಂದದ ಉಲ್ಲಂಘನೆ. ಯೋಧರು ವಾಸ್ತವ ಗಡಿ ರೇಖೆಯನ್ನು ಗೌರವಿಸಬೇಕು. ಇದನ್ನು ಬದಲಿಸುವ ಏಕಪಕ್ಷೀಯ ಕ್ರಮ ಕೈಗೊಳ್ಳಬಾರದು’ ಎಂದು ಜೈಶಂಕರ್‌ ಆಗ್ರಹಿಸಿದರು.

ದಾಳಿ ವೇಳೆ ಚೀನಾ ಸೈನಿಕರು ಭಾರತದ 5 ಪಟ್ಟು ಹೆಚ್ಚಿದ್ದರು!

ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ, ‘ಎರಡೂ ದೇಶಗಳ ನಾಯಕರು ಶಾಂತಿ ಕಾಪಾಡುವ ಒಪ್ಪಂದಕ್ಕೆ ಬಂದಿದ್ದರು. ಇದನ್ನು ಉಭಯ ರಾಷ್ಟ್ರಗಳು ಮುಂದುವರಿಸಿಕೊಂಡು ಹೋಗಬೇಕು. ಗಡಿ ವಿಚಾರದಲ್ಲಿ ಸಂವಹನ ಹಾಗೂ ಸಮನ್ವಯ ಬಲಗೊಳಿಸಬೇಕು. ಗಡಿಯಲ್ಲಿ ಶಾಂತಿ ಕಾಪಾಡಬೇಕು’ ಎಂದು ಪ್ರತಿಪಾದಿಸಿದರು.

ಬಳಿಕ ಗಡಿಯಲ್ಲಿ ಶಾಂತಿ ಸ್ಥಾಪನೆಯ ಬಗ್ಗೆ ಉಭಯ ನಾಯಕರು ಸಹಮತಕ್ಕೆ ಬಂದರು ಎಂದು ಎರಡೂ ದೇಶಗಳ ಪ್ರಕಟಣೆ ತಿಳಿಸಿವೆ.